ಉಡುಪಿಯ ಜಿಲ್ಲಾ ಕಾಂಗ್ರೆಸ್​ ಭವನದಲ್ಲಿ ಡಾ. ಅಂಬೇಡ್ಕರ್​ ಜಯಂತಿಯನ್ನು ವಿನಯಕುಮಾರ್​ ಸೊರಕೆ ಉದ್ಘಾಟಿಸಿದರು. ಅಶೋಕಕುಮಾರ್​ ಕೊಡವೂರು, ಡಾ.ಗಣನಾಥ್​ ಶೆಟ್ಟಿ ಎಕ್ಕಾರು, ವೆರೋನಿಕಾ ಕರ್ನೇಲಿಯೋ, ಪ್ರಖ್ಯಾತ ಶೆಟ್ಟಿ, ಹರೀಶ್​ ಕಿಣಿ, ಪ್ರಶಾಂತ್​ ಜತ್ತನ್ನ, ಜ್ಯೋತಿ ಹೆಬ್ಬಾರ್​, ಭಾಸ್ಕರ್​ ರಾವ್​ ಕಿದಿಯೂರು ಇತರರಿದ್ದರು. 
ಉಡುಪಿ

ಪ್ರಜಾಪ್ರಭುತ್ವದ ನೆಲೆ ಗಟ್ಟಿಗೊಳಿಸಿದ ಶ್ರೇಷ್ಠ ನಾಯಕ

* ಜಿಲ್ಲಾಧ್ಯಕ್ಷ ಅಶೋಕಕುಮಾರ್​ ಕೊಡವೂರು ಶ್ಲಾಘನೆ

* ಜಿಲ್ಲಾ ಕಾಂಗ್ರೆಸ್​ ಭವನದಲ್ಲಿ ಡಾ. ಅಂಬೇಡ್ಕರ್​ ಜಯಂತಿ

ಉಡುಪಿ: ಭಾರತದ ಸಂವಿಧಾನ ರಚನೆಯ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಬಾಬಾ ಸಾಹೇಬ್​ ಅಂಬೇಡ್ಕರ್​ ಅವರು, ಲಿಂಗ-ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರಿಗೂ ಸಮಾನ ಹಕ್ಕು ಮತ್ತು ಅವಕಾಶಗಳನ್ನು ಖಾತ್ರಿ ಪಡಿಸಿದರು. ಸಂವಿಧಾನದ ರಚನೆಯೊಂದಿಗೆ 'ಸಂವಿಧಾನ ಶಿಲ್ಪಿ'ಯಾದ ಅವರು ದೇಶದಲ್ಲಿ ಪ್ರಜಾಪ್ರಭುತ್ವದ ನೆಲೆ ಗಟ್ಟಿಗೊಳಿಸಿದ ಶ್ರೇಷ್ಠ ನಾಯಕರು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಅಶೋಕಕುಮಾರ್​ ಕೊಡವೂರು ಶ್ಲಾಘಿಸಿದರು.
ಉಡುಪಿಯ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್​ ಭವನದಲ್ಲಿ ಜಿಲ್ಲಾ ಕಾಂಗ್ರೆಸ್​ ಎಸ್​ಸಿ ಘಟಕದ ನೇತೃತ್ವದಲ್ಲಿ ಮಂಗಳವಾರ (ಏ.14) ಆಯೋಜಿಸಿದ್ದ ಡಾ. ಬಿ.ಆರ್​. ಅಂಬೇಡ್ಕರ್​ ಜಯಂತಿಯಲ್ಲಿ ಮಾತನಾಡಿದರು.

ಅಂಬೇಡ್ಕರ್​ ತತ್ವ ಸಾರ್ವಕಾಲಿಕ

ಕಾಂಗ್ರೆಸ್​ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್​ ಸೊರಕೆ ಮಾತನಾಡಿ, ಜವಾಹರಲಾಲ್​ ನೆಹರು ಅವರ ಮೊದಲ ಸಂಪುಟದಲ್ಲಿ ಅಂಬೇಡ್ಕರ್​ ಅವರು ಕಾನೂನು ಮತ್ತು ನ್ಯಾಯ ಸಚಿವರಾಗಿದ್ದರು. ಜನರ ಜೀವನಮಟ್ಟ ಸುಧಾರಿಸಲು ಶಿಕ್ಷಣವೇ ಪ್ರಮುಖ ಅಸ್ತ್ರ ಎಂದು ಪ್ರತಿಪಾದಿಸಿದ್ದರು. ಮಹಿಳೆಯರಿಗೆ ಆರ್ಥಿಕ ಮತ್ತು ಸಾಮಾಜಿಕ ಹಕ್ಕುಗಳಿಗಾಗಿ ಹೋರಾಡಿದ್ದ ಅವರು ಕೇವಲ ಒಬ್ಬ ವ್ಯಕ್ತಿಯಲ್ಲ. ಅದೊಂದು ಚಿಂತನೆ, ಚಳವಳಿಯೂ ಆಗಿತ್ತು. ಅವರ ಆಲೋಚನೆ, ಹಾಗೂ ತತ್ವಗಳು ಸಾರ್ವಕಾಲಿಕ ಎಂದರು.

ಅಂಬೇಡ್ಕರ್​ ತತ್ವಕ್ಕೆ ಧಕ್ಕೆ

ಸಾಹಿತಿ, ಚಿಂತಕ ಡಾ.ಗಣನಾಥ್​ ಶೆಟ್ಟಿ ಎಕ್ಕಾರು ಮಾತನಾಡಿ, ಪ್ರಜಾಪ್ರಭುತ್ವದ ಮುಖ್ಯತತ್ವ ಪ್ರತಿಪಾದಕರಾದ ಅಂಬೇಡ್ಕರ್​ ಅವರನ್ನು ದಲಿತ ಎಂದು ಪರಿಗಣಿಸದೆ ಅವರ ಜನ್ಮದಿನವನ್ನು ಸಾರ್ವತ್ರಿಕವಾಗಿ ಆಚರಿಸಬೇಕು. ತುಳುನಾಡಿನವರು ಅವರ ತತ್ವದೊಂದಿಗೆ ಬದುಕಿದವರು. ಆದರೆ, ಅದಕ್ಕಿಂದು ಧಕ್ಕೆ ಬಂದಿರುವುದು ವಿಷಾದನೀಯ ಎಂದರು.
ಪಕ್ಷದ ಪ್ರಮುಖರಾದ ವೆರೋನಿಕಾ ಕರ್ನೇಲಿಯೋ, ಪ್ರಖ್ಯಾತ ಶೆಟ್ಟಿ, ಹರೀಶ್​ ಕಿಣಿ, ಪ್ರಶಾಂತ್​ ಜತ್ತನ್ನ ಫಾ. ಮಿಲಿಯಂ ಮಾರ್ಟಿಸ್​, ಭಾಸ್ಕರ್​ ರಾವ್​ ಕಿದಿಯೂರು, ಅಣ್ಣಯ್ಯ ಸೇರಿಗಾರ್​, ಮಹಾಬಲ ಕುಂದರ್​, ಹರಿಪ್ರಸಾದ್​ ರೈ, ಉದ್ಯಾವರ ನಾಗೇಶ್​ ಕುಮಾರ್​, ಶಶಿಧರ್​ ಶೆಟ್ಟಿ ಎಲ್ಲೂರು, ಕಿರಣ್​ ಹೆಗ್ಡೆ, ಶರ್ಫುದ್ದೀನ್​ ಶೇಖ್​, ಯತೀಶ್​ ಕರ್ಕೇರ, ಸಂಧ್ಯಾ ತಿಲಕ್​, ಸತೀಶ್​ ಮಂಚಿ, ಸತೀಶ್​ ಕೊಡವೂರು, ಶೇಖ್​ ವಹೀದ್​, ಲಕ್ಷೀಶ್​ ಶೆಟ್ಟಿ, ಕಿಶೋರಕುಮಾರ್​ ಎಮಾರ್ಳ್​, ಸುಕನ್ಯಾ ಪೂಜಾರಿ, ತಾರಾ ಬನ್ನಂಜೆ, ನಾಗಪ್ಪ ಕೊಠಾರಿ, ಪದ್ಮನಾಭ ಬಂಗೇರ ಇನ್ನಿತರರು ಉಪಸ್ಥಿತರಿದ್ದರು.
ಜಿಲ್ಲಾ ಎಸ್​ಟಿ ಘಟಕದ ಅಧ್ಯಕ್ಷ ಜಯಕುಮಾರ್​ ವಂದಿಸಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್​ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್​ ಕಾರ್ಯಕ್ರಮ ನಿರ್ವಹಿಸಿದರು.