ಅಂಬೇಡ್ಕರ್ ಜಯಂತಿ ನಿಮಿತ್ತ ವಿವಿಧ ಸಂಘಟನೆ ವತಿಯಿಂದ ಪರ್ಕಳದಲ್ಲಿ ಆಯೋಜಿಸಿದ್ದ 'ಭೀಮಯಾನ' ಮೆರವಣಿಗೆಗೆ ಸುಮಿತ್ರಾ ನಾಯಕ್ ಹಾಗೂ ಮೋಹನದಾಸ್ ನಾಯಕ್ ಚಾಲನೆ ನೀಡಿದರು. ಸಂದೀಪ್ ಶೆಟ್ಟಿ, ಯು. ಪರಮೇಶ್ವರ್ ಉಪ್ಪೂರು, ಗಣೇಶ್ರಾಜ್ ಸರಳಬೆಟ್ಟು, ರಾಜಕುಮಾರ್ ಪೆರ್ಣಂಕಿಲ ಇತರರಿದ್ದರು.
* ನಗರಸಭೆಯ ಮಾಜಿ ಅಧ್ಯೆ ಸುಮಿತ್ರಾ ನಾಯಕ್ ಸಂತಸ
ಉಡುಪಿ: ಸಮಾಜದಲ್ಲಿದ್ದ ಅಸ್ಪೃಶ್ಯತೆ ವಿರುದ್ಧ ಪ್ರಬಲ ಹೋರಾಟ ನಡೆಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರು ಜನರಿಗಿರುವ ಹಕ್ಕು ಲಭಿಸಲು ಕಾರಣೀಕರ್ತರಾಗಿದ್ದಾರೆ. ದೇಶಕ್ಕೆ ಸಂವಿಧಾನ ರಚಿಸುವ ಮೂಲಕ ಸಮಾನತೆಯ ಕೊಡುಗೆ ನೀಡಿದ ಭೀಮರಾಗಿದ್ದಾರೆ ಎಂದು ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷೆ ಸುಮಿತ್ರಾ ನಾಯಕ್ ಹೇಳಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನದ ನಿಮಿತ್ತ ಅಂಬೇಡ್ಕರ್ ಯುವಸೇನೆ (ರಿ.) ಉಡುಪಿ ಜಿಲ್ಲೆ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ.) ಉಡುಪಿ ಜಿಲ್ಲೆ, ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಂಘ (ರಿ.) ಉಡುಪಿ ಜಿಲ್ಲೆ, ಕರ್ನಾಟಕ ರಾಜ್ಯ ಭೋವಿ ವಡ್ಡರ್ ಕ್ಷೇಮಾಭಿವೃದ್ಧಿ ಸಂಘ (ರಿ.) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ವತಿಯಿಂದ ಪರ್ಕಳದಲ್ಲಿ ಮಂಗಳವಾರ ಆಯೋಜಿಸಿದ್ದ 'ಭೀಮಯಾನ' (ಯುವಜನರಿಗಾಗಿ ಅಂಬೇಡ್ಕರ್ ಹಬ್ಬ) ರ್ಯಾಲಿಯಲ್ಲಿ ಮಾತನಾಡಿದರು.
ಕಾಂಗ್ರೆಸ್ನ ಹಿರಿಯ ಮುಖಂಡ ಮೋಹನದಾಸ್ ನಾಯಕ್ ಮೆರವಣಿಗೆಗೆ ಚಾಲನೆ ನೀಡಿದರು. ಗುತ್ತಿಗೆದಾರ ಸಂದೀಪ್ ಶೆಟ್ಟಿ ಬಡಗಬೆಟ್ಟು, ಗುತ್ತಿಗೆದಾರರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಯು. ಪರಮೇಶ್ವರ್ ಉಪ್ಪೂರು, ಸಾಮಾಜಿಕ ಕಾರ್ಯಕರ್ತ ಗಣೇಶ್ರಾಜ್ ಸರಳಬೆಟ್ಟು, ಕರ್ನಾಟಕ ಭೋವಿ ವಡ್ಡರ್ ಕ್ಷೇಮಾಭಿವೃದ್ಧಿ ಸಂಘ ಉಡುಪಿ ಜಿಲ್ಲೆಯ ಅಧ್ಯಕ್ಷ ರಾಜಕುಮಾರ್ ಪೆರ್ಣಂಕಿಲ, ನಾರಾಯಣ ಪರ್ಕಳ, ಜಗದೀಶ್ ಪರ್ಕಳ, ಭೋವಿ ಸಮಾಜದ ಮುಖಂಡ ಶಿವಕುಮಾರ್ ಪರ್ಕಳ, ನಾಗರಾಜ್ ಕುಕ್ಕದಕಟ್ಟೆ, ಯುವ ಭೋವಿ ಸಮಾಜದ ಜಿಲ್ಲಾಧ್ಯಕ್ಷ ಸಂದೇಶ್ ಕುಮಾರ್ ಪೆರ್ಡೂರು ಇತರರಿದ್ದರು.
ಡಾ.ಅಂಬೇಡ್ಕರ್ರ ಭಾವಚಿತ್ರ ಇರುವ ವಾಹನದೊಂದಿಗೆ ಟ್ಯಾಬ್ಲೊ, ನಾಸಿಕ್ ಬ್ಯಾಂಡ್, ಚಂಡೆ, ಇನ್ನಿತರ ವಾದ್ಯದೊಂದಿಗೆ ಉಡುಪಿ ನಗರದ ವಿವಿಧೆಡೆ ಜಾಥಾ ನಡೆಸಲಾಯಿತು.