ಉಡುಪಿಯಲ್ಲಿ ಡಾ. ಬಿ. ಶಿವರಾಮ್​ ಶೆಟ್ಟಿ ಅವರಿಗೆ ಪೊಳಲಿ ಶೀನಪ್ಪ ಹೆಗ್ಡೆ ಮತ್ತು ಎಸ್​.ಆರ್​ ಹೆಗ್ಗಡೆ ಜಂಟಿ ಪ್ರಶಸ್ತಿ ನೀಡಲಾಯಿತು. ಪ್ರೊ. ಬಿ.ಎ. ವಿವೇಕ್​ ರೈ, ಪ್ರೊ. ಚೇತನ್​ ಮುಂಡಾಜೆ, ಪ್ರೊ. ಡಾ. ಗಾಯತ್ರಿ ಜಿ. ಪೈ, ಡಾ. ಬಿ. ಜಗದೀಶ್​ ಶೆಟ್ಟಿ, ಡಾ. ಇಂದಿರಾ ಹೆಗ್ಡೆ ಇದ್ದರು. 
ಉಡುಪಿ

ಅಧ್ಯಯನಕಾರರಿಗೆ ಪೊಳಲಿ ಹೆಗ್ಡೆ ದಾರಿದೀಪ

* ಪ್ರೊ. ಬಿ.ಎ. ವಿವೇಕ್​ ರೈ ಶ್ಲಾನೆ

* ಡಾ. ಬಿ. ಶಿವರಾಮ್​ ಶೆಟ್ಟಿಗೆ ಸ್ಮರಣಾರ್ಥ ಪ್ರಶಸ್ತಿ ಪ್ರದಾನ

ಉಡುಪಿ: ಪೊಳಲಿ ಶೀನಪ್ಪ ಹೆಗ್ಡೆ ಅವರ ಬದುಕು ಮತ್ತು ಬರಹಗಳು ಎಂದಿಗೂ ಮಾದರಿ. ಸ್ವಾತಂತ್ರ$್ಯ ಪೂರ್ವದಿಂದಲೇ ಅವರು ತುಳುನಾಡಿನ ಕುರಿತು ಅನೇಕ ಸಂಶೋಧನೆ ನಡೆಸಿ ಕೃತಿಗಳನ್ನು ನೀಡಿದವರು. ಆ ಸಂದರ್ಭದಲ್ಲಿ ಅವರು ಅನೇಕ ಹೊಳಹುಗಳನ್ನು ನೀಡಿ ಮುಂದಿನ ಅಧ್ಯಯನಕಾರರಿಗೆ ದಾರಿದೀಪವಾದರು ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಪ್ರೊ. ಬಿ.ಎ. ವಿವೇಕ್​ ರೈ ಶ್ಲಾಘಿಸಿದರು.
ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್​ ಹೈಯರ್​ ಎಜುಕೇಶನ್​, ಚೇಳೈರು ಗುತ್ತು ಎಸ್​.ಆರ್​. ಹೆಗ್ಡೆ ಚಾರಿಟೇಬಲ್​ ಟ್ರಸ್ಟ್​ (ರಿ.) ವತಿಯಿಂದ ಶನಿವಾರ (ಜೂ.20) ಆಯೋಜಿಸಿದ್ದ ಪೊಳಲಿ ಶೀನಪ್ಪ ಹೆಗ್ಡೆ ಮತ್ತು ಎಸ್​.ಆರ್​ ಹೆಗ್ಗಡೆ ಜಂಟಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಬಡವಾಗುತ್ತಿದೆ ಸಂಶೋಧನಾ ಕ್ಷೇತ್ರ

ಗದ್ಯರೂಪದಲ್ಲಿ ತುಳುನಾಡಿನ ಜನಪದ ಸಂಪತ್ತನ್ನು ಮುಖ್ಯವಾಗಿ ಪಾಡ್ದನದ ಕಥೆಗಳನ್ನು ಸಂಗ್ರಹಿಸಿ ಜಾನಪದ ಅಧ್ಯಯನಕಾರರಿಗೆ ಮಾರ್ಗದರ್ಶಿ ಸೂತ್ರ ಹೆಣೆದಿದ್ದಾರೆ. ಅವರಿಗೆ ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರಗಳ ಕುರಿತು ವ್ಯಾಪಕ ಪರಿಚಯವಿತ್ತು. ಇಂದಿನ ದಿನಗಳಲ್ಲಿ ಓದು,ಸಂಶೋಧನೆಗಳು ದೂರ ಸರಿಯುತ್ತಿವೆ. ವಿಸ್ತಾರವಾದ ಅಧ್ಯಯನ ಮತ್ತು ಕ್ಷೇತ್ರಕಾರ್ಯಗಳಷ್ಟೇ ಸತ್ಯ ದರ್ಶನ ಮಾಡಿಸಬಲ್ಲವು. ಆಳ ಅಧ್ಯಯನ ಅಪೇಕ್ಷೆ ಪಡುವ ಇಂತಹ ಕ್ಷೇತ್ರಗಳು ಇಂದು ಬಡವಾಗುತ್ತಿದೆ ಎಂದು ಪ್ರೊ. ಬಿ.ಎ. ವಿವೇಕ್​ ರೈ ಖೇದ ವ್ಯಕ್ತಪಡಿಸಿದರು.
ಪ್ರಶಸ್ತಿ ಸ್ವೀಕರಿಸಿದ ಹಿರಿಯ ಲೇಖಕ, ಸಂಶೋಧಕ ಡಾ. ಬಿ. ಶಿವರಾಮ್​ ಶೆಟ್ಟಿ "ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು' ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾಸರಗೋಡು ಕೇಂದ್ರೀಯ ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕ ಪ್ರೊ. ಚೇತನ್​ ಮುಂಡಾಜೆ ಅಭಿನಂದನಾ ಮಾತುಗಳನ್ನಾಡಿದರು. ಎಂಜಿಎಂ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ. ಗಾಯತ್ರಿ ಜಿ. ಪೈ ಉಪಸ್ಥಿತರಿದ್ದರು.
ನಾಗರಾಜ್​ ಶಂಕರನಾರಾಯಣ ಪ್ರಾರ್ಥಿಸಿದರು. ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್​ ಶೆಟ್ಟಿ ಸ್ವಾಗತಿಸಿದರು. ಪ್ರಶಸ್ತಿಯ ಪ್ರಾಯೋಜಕರಾದ ಚೇಳೈರು ಗುತ್ತು ಎಸ್​.ಆರ್​. ಹೆಗ್ಡೆ ಚಾರಿಟೇಬಲ್​ ಟ್ರಸ್ಟ್​ನ ಅಧ್ಯೆ ಡಾ. ಇಂದಿರಾ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್​ಆರ್​ಸಿಯ ಸಹಸಂಶೋಧಕ ಡಾ. ಅರುಣ್​ ಎಸ್​.ಆರ್​. ಕಾರ್ಯಕ್ರಮ ನಿರ್ವಹಿಸಿದರು.
"

ಸಂಶೋಧನೆ ಎಂದರೆ ಹೊಸತನ್ನು ಹೇಳುವುದಲ್ಲ, ಇಲ್ಲದ್ದನ್ನೂ ಹೇಳುವುದಲ್ಲ. ಅದು ಆಳವಾದ ಅಭ್ಯಾಸದ ಫಲವಾಗಿ ಒಡಮೂಡುವ ವಿಶಿಷ್ಟ ಸತ್ಯ. ಆ ಬಗೆಯ ಸತ್ಯದ ಹೊಳಹುಗಳಿಗೆ ಕಾಲಾತೀತವಾಗಿ ಎಂದೂ ಸಮಸ್ಯೆ ಬರದು. ಅಂತಹ ಅಧ್ಯಯನಗಳು ಪರಾಂಬರಿಸಿ ನೋಡುವುದರಿಂದ ಸಾಧ್ಯವಾಗುತ್ತದೆ.

— ಡಾ. ಬಿ. ಶಿವರಾಮ್​ ಶೆಟ್ಟಿ. ಜಾನಪದ ಸಂಶೋಧಕ.