ಉಡುಪಿ ಜಿಲ್ಲಾ ರೆಡ್ ಕ್ರಾಸ್ ಭವನದಲ್ಲಿ ಡಾ.ಅಶೋಕ್ ವೈ.ಜಿ. ಹಾಗೂ ವಿ.ಜಿ. ಶೆಟ್ಟಿ ಅವರು ಬಸ್ರೂರು ರಾಜೀವ್ ಶೆಟ್ಟಿ ಅವರಿಂದ ಸಭಾಪತಿ ಹಾಗೂ ಉಸಭಾಪತಿಯಾಗಿ ಅಧಿಕಾರ ಸ್ವೀಕರಿಸಿದರು. ಗಣನಾಥ್ ಶೆಟ್ಟಿ ಎಕ್ಕಾರು, ರಮಾದೇವಿ, ಟಿ.ಚಂದ್ರಶೇಖರ್ ಇದ್ದರು.
* ಉಪಸಭಾಪತಿಯಾಗಿ ವಿ.ಜಿ. ಶೆಟ್ಟಿ ನೇಮಕ
ಉಡುಪಿ: ಖ್ಯಾತ ವೈದ್ಯ ಡಾ. ಅಶೋಕ್ ವೈ.ಜಿ. ಅವರು ಉಡುಪಿ ಜಿಲ್ಲಾ ರೆಡ್ ಕ್ರಾಸ್ ಸಭಾಪತಿಯಾಗಿ ನೇಮಕಗೊಂಡಿದ್ದಾರೆ. ಜಿಲ್ಲಾ ರೆಡ್ ಕ್ರಾಸ್ ಭವನದಲ್ಲಿ ಇತ್ತೀಚೆಗೆ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಮುಂದಿನ ವಾರ್ಷಿಕ ಮಹಾಸಭೆಯವರೆಗೆ ಅವರನ್ನು ಜಿಲ್ಲಾ ರೆಡ್ ಕ್ರಾಸ್ ಸಭಾಪತಿಯಾಗಿ ನೇಮಕ ಮಾಡಲಾಯಿತು.
ಈ ಮೊದಲು ಜಿಲ್ಲಾ ಸಭಾಪತಿಯಾಗಿದ್ದ ಬಸ್ರೂರು ರಾಜೀವ್ ಶೆಟ್ಟಿ ಅವರು ಕರ್ನಾಟಕ ರಾಜ್ಯ ರೆಡ್ ಕ್ರಾಸ್ನ ಸಭಾಪತಿಯಾಗಿ ಆಯ್ಕೆಯಾಗಿದ್ದು, ಜಿಲ್ಲಾ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದರಿಂದ ಆ ಹುದ್ದೆ ಖಾಲಿಯಿತ್ತು.
ರಾಜೀವ್ ಶೆಟ್ಟಿ ಅವರ ರಾಜೀನಾಮೆ ಅಂಗೀಕರಿಸಿರುವ ಆಡಳಿತ ಮಂಡಳಿಯು ಒಂದೂವರೆ ದಶಕದಿಂದ ಜಿಲ್ಲಾ ರೆಡ್ ಕ್ರಾಸ್ ಆಡಳಿತ ಮಂಡಳಿಯ ಸದಸ್ಯರಾಗಿದ್ದ ಡಾ. ಅಶೋಕ್ ವೈ.ಜಿ. ಅವರನ್ನು ನೇಮಿಸಿದೆ.
ಜಿಲ್ಲಾ ರೆಡ್ ಕ್ರಾಸ್ನ ಉಪಸಭಾಪತಿಯಾಗಿ ಆಡಳಿತ ಮಂಡಳಿಯ ಸದಸ್ಯ ವಿ.ಜಿ. ಶೆಟ್ಟಿ ಅವರನ್ನು ನೇಮಿಸಲಾಗಿದ್ದು, ಅಧಿಕಾರ ಸ್ವೀಕರಿಸಿದರು. ಕಾರ್ಯದರ್ಶಿ ಗಣನಾಥ್ ಶೆಟ್ಟಿ ಎಕ್ಕಾರು, ಖಜಾಂಚಿ ರಮಾದೇವಿ, ಮಂಡಳಿ ಸದಸ್ಯ ಟಿ.ಚಂದ್ರಶೇಖರ್ ಇದ್ದರು.