ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ. 
ಉಡುಪಿ

ಕೇಂದ್ರದ ವಿರುದ್ಧ ಅನಗತ್ಯ ದೂರಬೇಡಿ

* ಸಿಎಂ ಡಿಕೆಶಿಗೆ ಸಂಸದ ಕೋಟ ಪೂಜಾರಿ ಸಲಹೆ

* ಶೇ.20ಕ್ಕಿಂತ ಅಧಿಕ ಎಥೆನಾಲ್​ ಬಳಸಿದ್ದರೆ ಕ್ರಮ ಕೈಗೊಳ್ಳಿ

ಉಡುಪಿ: ಪೆಟ್ರೋಲ್​ನಲ್ಲಿ ಶೇ.20ಕ್ಕಿಂತ ಅಧಿಕ ಪ್ರಮಾಣದಲ್ಲಿ ಎಥೆನಾಲ್​ ಅಂಶ ಸೇರಿಸಬಾರದೆಂದು ಕೇಂದ್ರ ಸರ್ಕಾರವೇ ನಿಯಮ ಜಾರಿಗೊಳಿಸಿ ಎಲ್ಲ ಪೆಟ್ರೋಲಿಯಂ ಕಂಪನಿಗಳಿಗೆ ಸೂಚಿಸಿದೆ. ಆದರೆ, ದುರಾದೃಷ್ಟವೆಂಬಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಪೆಟ್ರೋಲ್​ನಲ್ಲಿ ಶೇ.30ಕ್ಕಿಂತ ಅಧಿಕ ಎಥೆನಾಲ್​ ಇದ್ದು ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಆಧಾರರಹಿತ, ಅನಗತ್ಯ ಆರೋಪ ಮಾಡುತ್ತಿದ್ದಾರೆ ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ಯಾವುದೇ ಪೇಟ್ರೋಲಿಯಂ ಸಂಸ್ಥೆಯೂ ಪೆಟ್ರೋಲ್​ಗೆ ಶೇ. 30ರಷ್ಟು ಎಥೆನಾಲ್​ ಬಳಸುತ್ತಿರುವುದಾಗಿ ಸಾರ್ವಜನಿಕವಾಗಿಯೂ ತಿಳಿಸಿಲ್ಲ. ಆದರೂ ಸಹ ಡಿಕೆಶಿ ಹಾಗೂ ಅವರ ಸಚಿವರು ಕೇಂದ್ರ ಸರ್ಕಾರದ ವಿರುದ್ಧ ವ್ಯರ್ಥ ಆರೋಪ ಮಾಡುವ ಕಾಯಂ ಪರಂಪರೆಯನ್ನು ಈ ರೀತಿಯಾಗಿ ಮುಂದುವರಿಸಿದ್ದಾರೆ ಎಂದು ಕಿಡಿ ಕಾರಿದರು.

ಒಂದೊಮ್ಮೆ ಶೇ.20ಕ್ಕಿಂತ ಅಧಿಕ ಎಥೆನಾಲ್​ ಮಿಶ್ರಣ ಮಾಡಿದ್ದರೆ ರಾಜ್ಯ ಸರ್ಕಾರಕ್ಕೇ ಅಂತಹ ಪೆಟ್ರೋಲ್​ ಪಂಪ್​ಗಳ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ, ಅಧಿಕಾರವಿದೆ. ಇದು ತಿಳಿದಿದ್ದೂ ಸಹ ರಾಜ್ಯ ಸರ್ಕಾರ ಕೇಂದ್ರವನ್ನು ದೂರುತ್ತಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ದ್ವೇಶ ರಾಜಕಾರಣ ಮಾಡುವುದನ್ನು ಬಿಟ್ಟು ವಾಸ್ತವಿಕ ರಾಜಕಾರಣದತ್ತ ಗಮನ ಕೊಡಲು ಇನ್ನಾದರೂ ಆದ್ಯತೆ ನೀಡಿ ಎಂದು ಸಿಎಂ ಡಿ.ಕೆ. ಶಿವಕುಮಾರ್​ ಅವರಿಗೆ ಆಗ್ರಹಿಸುತ್ತೇನೆ ಎಂದು ಸಂಸದ ಪೂಜಾರಿ ತಿಳಿಸಿದರು.

ಡಿಕೆಶಿ ಅವರ ಕಾಂಗ್ರೆಸ್​ ಸರ್ಕಾರದಲ್ಲಿ ಅಧಿಕಾರಿಗಳು ಸಿಂಹಗಳಾಗುತ್ತಾರೆ, ಜನಪ್ರತಿನಿಧಿಗಳು ಬೊಗಳುವ ನಾಯಿಗಳಾಗುತ್ತಾರೆ. ರಾಜ್ಯದ ಓರ್ವ ಮಹಿಳಾ ಜಿಲ್ಲಾಧಿಕಾರಿ ಇಂತಹ ಅರ್ಥ ಬರುವಂತೆ ಇರುವ ಚಿತ್ರದ ಪೋಸ್ಟ್​ ಹಾಕಿಕೊಳ್ಳುತ್ತಾರೆ ಎಂದರೆ ಅವರ ಮನಸ್ಥಿತಿ ಹೇಗಿರಬೇಡ? ರಾಜ್ಯ ಸರ್ಕಾರ ಪರೋಕ್ಷವಾಗಿ ಅದನ್ನು ಸಮರ್ಥಿಸಿಕೊಳ್ಳುತ್ತಿದೆ. ಜಿಲ್ಲಾಧಿಕಾರಿ ಅದನ್ನು ಬಾಯಿಬಿಟ್ಟು ಹೇಳದಿದ್ದರೂ ಕೇಂದ್ರ ಕ್ಯಾಬಿನೆಟ್​ ಸಚಿವರಾದ ಎಚ್​.ಡಿ. ಕುಮಾರಸ್ವಾಮಿ ಅವರೇ ಗುರಿ ಎಂದು ಬಾಯ್ಬಿಟ್ಟು ಹೇಳಬೇಕಾಗಿಲ್ಲ. ಓರ್ವ ಅಧಿಕಾರಿ ಜನಪ್ರತಿನಿಧಿಗಳನ್ನು ಇಷ್ಟು ಅವಹೇಳನ ಮಾಡುವುದಾದರೆ ಮುಂದೆ ಕರ್ನಾಟಕದಲ್ಲಿ ಯಾವುದೇ ಶಾಸಕರು, ಸಂಸದರು ಕೆಲಸ ಮಾಡುವುದು ಕಷ್ಟ. ಇದು ಪ್ರಜಾತಂತ್ರದ ದುರಾದೃಷ್ಟ.
ಕೋಟ ಶ್ರೀನಿವಾಸ ಪೂಜಾರಿ. ಉಡುಪಿ ಸಂಸದ.