ಮೂಡುಬಿದಿರೆಯಲ್ಲಿ ರಂಬೂಟಾನ್ ಮಾಹಿತಿ ಕಾರ್ಯಕ್ರಮದಲ್ಲಿ ಡಾ.ಚೈತನ್ಯ, ಪ್ರಭಾಚಂದ್ರ ಜೈನ್, ಮಹೇಶ್ ಎನ್., ಅಭಯಕುಮಾರ್ ಉಪಸ್ಥಿತರಿದ್ದರು.
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಅಡಿಕೆ ಬೆಳೆಗಿಂತ ಹೆಚ್ಚಿನ ವೆಚ್ಚ, ನಿರಂತರ ಆರೈಕೆ ಅಗತ್ಯವಿರುವ ರಂಬೂಟಾನ್ ಬೆಳೆಯನ್ನು ಕೇವಲ ಯೂಟ್ಯೂಬ್ ವಿಡಿಯೋ ನೋಡಿ ಆರಂಭಿಸಬಾರದು. ಉತ್ತಮ ತೋಟಗಳನ್ನು ಪ್ರತ್ಯಕ್ಷವಾಗಿ ವೀಕ್ಷಿಸಿ ವಿಜ್ಞಾನಿಗಳು, ಅನುಭವಿಗಳ ಮಾರ್ಗದರ್ಶನದೊಂದಿಗೆ ರಂಬೂಟಾನ್ ಬೆಳೆ ಬೆಳೆಸಬೇಕು ಎಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿ ಡಾ.ಚೈತನ್ಯ ಸಲಹೆ ನೀಡಿದರು.
ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಕೃಷಿ ವಿಚಾರ ವಿನಿಮಯ ಕೇಂದ್ರ ಶನಿವಾರ ಆಯೋಜಿಸಿದ್ದ ತೋಟಗಾರಿಕೆ ಬೆಳೆಗಳಲ್ಲಿನ ರಂಬೂಟಾನ್ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಂಗಳೂರಿನ ಸಹಾಯಕ ತೋಟಗಾರಿಕೆ ಅಧಿಕಾರಿ ಮಹೇಶ್ ಎನ್. ತೋಟಗಾರಿಕೆ ಬೆಳೆಗಳಲ್ಲಿ ಮಿತವ್ಯಯ ನೀರಾವರಿ ಪದ್ಧತಿ ಕುರಿತು ಮಾಹಿತಿ ನೀಡಿದರು. ಪ್ರಾಯೋಜಕರಾದ ಜವುಳಿ ಉದ್ಯಮಿ, ಕೃಷಿಕ ಪ್ರಭಾಚಂದ್ರ ಜೈನ್ ಕಾರ್ಯಕ್ರಮ ಉದ್ಘಾಟಿಸಿದರು.
ಸೋನ್ಸ್ ಾರ್ಮ್‌ನ ಸುನೀಲ್ ಸೋನ್ಸ್ ತೆಂಗಿನ ಹಿಂಗಾರದಿಂದ ಆರೋಗ್ಯವರ್ಧಕ ಕಲ್ಪರಸ ತಯಾರಿಸುವ ಜಿಲ್ಲಾಮಟ್ಟದ ಸಹಕಾರಿ ಸಂಘಟನೆ ಕುರಿತು ಮಾಹಿತಿ ನೀಡಿದರು. ಆಳ್ವಾಸ್ ರೇಡಿಯೋದ ಆರ್ಜಿತ್ ಜೈನ್ ಕೃಷಿ ಕಾರ್ಯಕ್ರಮಗಳ ಪ್ರಸಾರಕ್ಕೆ ಸಹಕಾರ ಕೋರಿದರು. ಟಾಟಾ ಎಐಜಿ ಅಧಿಕಾರಿಗಳು ಹವಾಮಾನ ಆಧಾರಿತ ಅಡಿಕೆ, ಕಾಳುಮೆಣಸು ಬೆಳೆಗೆ ಸಂಬಂಧಿಸಿದ ಸಲ್ ಬಿಮಾ ಯೋಜನೆ ಕುರಿತು ಮಾಹಿತಿ ನೀಡಿದರು.ಅಧ್ಯಕ್ಷ ಅಭಯಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಇಂದಿರಾ ಶೆಟ್ಟಿ, ಕುಪ್ಪೆಪದವು ಮನೋಹರ ಶೆಟ್ಟಿ, ಜಿನೇಂದ್ರ ಜೈನ್ ಸಂವಾದದಲ್ಲಿ ಪಾಲ್ಗೊಂಡರು. ರಾಜವರ್ಮ ಬೈಲಂಗಡಿ ಸ್ವಾಗತಿಸಿದರು. ಲಿಡ್ವಿನ್ ಡಿಕೋಸ್ತ ಅತಿಥಿಗಳನ್ನು ಗೌರವಿಸಿದರು. ಜಿನೇಂದ್ರ ಜೈನ್ ನಿರೂಪಿಸಿದರು. ಹರೀಶ್ ಆರ್.ಕೋಟ್ಯಾನ್ ವಂದಿಸಿದರು.