ಉಡುಪಿ: ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳ ಗುಲಾಮಿತನಕ್ಕೊಳಗಾಗದೆ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮತ್ತು ಏಕಾಗ್ರತೆಯಿಂದ ಅಧ್ಯಯನ ನಡೆಸಿ ಯಶಸ್ಸು ಸಾಧಿಸಬೇಕು. ಓದುವ ಮಾಧ್ಯಮ ಯಾವುದೇ ಆದರೂ ಸಾಧನೆಗೆ ಪ್ರಾಮಾಣಿಕ ಪ್ರಯತ್ನ ಅಗತ್ಯ. ಬದುಕಿನಲ್ಲಿ ಎಂದಿಗೂ ಹೆತ್ತವರು, ಗುರು-ಹಿರಿಯರು ಹಾಗೂ ಕಲಿತ ಶಾಲೆ ಮರೆಯದಿರಿ ಎಂದು ನೇತ್ರಜ್ಯೋತಿ ಶಿಕ್ಷಣ ಸಮೂಹ ಸಂಸ್ಥೆಗಳ ನಿರ್ದೇಶಕ ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು ಕಿವಿಮಾತು ಹೇಳಿದರು.
ಉಡುಪಿ ತೆಂಕನಿಡಿಯೂರಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ 2026-27ನೇ ಸಾಲಿನ ವಿದ್ಯಾರ್ಥಿ ಕ್ಷೇಮಪಾಲನಾ ವೇದಿಕೆ ಉದ್ಘಾಟಿಸಿ ಮಾತನಾಡಿದರು.
ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಜ್ಞಾನಾರ್ಜನೆಗಾಗಿ ವಿದ್ಯಾರ್ಥಿಗಳು ಲಭ್ಯವಿರುವ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಳ್ಳಬೇಕು. ಶೈಕ್ಷಣಕ ಸಾಧನೆ ಮೂಲಕ ಹೆತ್ತವರು ಹಾಗೂ ಕಾಲೇಜ್ನ ಕೀರ್ತಿ ಹೆಚ್ಚಿಸಬೇಕು ಎಂದರು.
ಅಜ್ಜರಕಾಡಿನ ಡಾ. ಜಿ.ಶಂಕರ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನ ಪ್ರಾಂಶುಪಾಲೆ ಡಾ. ನಿಕೇತನಾ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಅರಿತುಕೊಳ್ಳಬೇಕು. ದ್ವೇಷ, ಅಸೂಯೆ ಗುಣ ತೊಡೆದು ಹಾಕಿ ಪ್ರೀತಿಯಿಂದ ಜಗತ್ತು ಗೆಲ್ಲಬೇಕು ಎಂದರು.
ಕಾಲೇಜ್ನ ಪ್ರಾಂಶುಪಾಲ ಪ್ರೊ. ನಿತ್ಯಾನಂದ ವಿ. ಗಾಂವಕರ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ವೇದಿಕೆಯ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು.
ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಕೃಷ್ಣ ಸಾಸ್ತಾನ, ಡಾ. ದತ್ತಕುಮಾರ, ಶೈಕ್ಷಣಿಕ ಸಲಹೆಗಾರರಾದ ಡಾ. ಶ್ರೀಧರ ಭಟ್ಟ, ಹಮೀದಾ ಬಾನು, ವಿದ್ಯಾರ್ಥಿ ಕ್ಷೇಮಪಾಲನಾ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಎಂಎಸ್ಡಬ್ಲ್ಯೂ ವಿದ್ಯಾರ್ಥಿನಿ ಯೋಗಿತಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ. ರೋಶನ್ ಶೆಟ್ಟಿ ಪರಿಚಯಿಸಿದರು. ಪದವಿ ವಿಭಾಗದ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ರಘು ನಾಯ್ಕ ಸ್ವಾಗತಿಸಿದರು. ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ಶ್ರೀದೇವಿ ಕೆ. ವಂದಿಸಿದರು. ಕನ್ನಡ ವಿಭಾಗ ಮುಖ್ಯಸ್ಥ ಮಾರುತಿ ಕಾರ್ಯಕ್ರಮ ನಿರೂಪಿಸಿದರು.