ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ಕೆ.ಸುನೀಲಕುಮಾರ್, ಕಿರಣಕುಮಾರ್ ಕೊಡ್ಗಿ, ಯಶ್ಪಾಲ್ ಸುವರ್ಣ, ಗುರುರಾಜ್ ಗಂಟಿಹೊಳೆ, ಸ್ವರೂಪಾ ಟಿ.ಕೆ., ಅಬೀದ್ ಗದ್ಯಾಳ ಇದ್ದರು.
* ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ
* ಮಣ್ಣು ಸಾಗಿಸಲು ರೈತರಿಗೆ ತಡೆ, ಅಧಿಕಾರಿಗಳ ಸಭೆ
ಉಡುಪಿ: ರೈತರು ಕೃಷಿ ಚಟುವಟಿಕೆಗಳಿಗಾಗಿ ತಮ್ಮದೇ ಜಮೀನಿನ ಮಣ್ಣು ತೆಗೆದು ಸಾಗಾಟ ಮಾಡಲು ತೊಂದರೆ ಆಗುತ್ತಿದೆ ಎಂಬ ದೂರು ನೀಡಿದ್ದಾರೆ. ಈ ಸಮಸ್ಯೆ ಬಗೆಹರಿಸಿ ಅವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಕೃಷಿ ಉದ್ದೇಶಕ್ಕಾಗಿ ಟಿಪ್ಪರ್ನಲ್ಲಿ ಮಣ್ಣು ಸಾಗಾಟ ಮಾಡುತ್ತಿರುವಾಗ ಅಡ್ಡಗಟ್ಟಿ ಸಮಸ್ಯೆ ಮಾಡುತ್ತಿರುವ ಕುರಿತು ಚರ್ಚಿಸಲು ಸೋಮವಾರ (ಫೆ.23) ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ಅನಗತ್ಯ ತೊಂದರೆ
ಕಾರ್ಕಳ ಶಾಸಕ ಕೆ.ಸುನೀಲಕುಮಾರ್ ಮಾತನಾಡಿ, ರೈತರು ತಮ್ಮ ಕೃಷಿ ಜಮೀನುಗಳಿಗೆ ಮಣ್ಣು ಸಾಗಾಟ ಮಾಡುತ್ತಿರುವ ಬಗ್ಗೆ ಕೆಲವರು ತಮ್ಮ ಲಾಭಕ್ಕಾಗಿ ಅನಗತ್ಯ ದೂರು ನೀಡುತ್ತಾರೆ. ಇದನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದರು.
ಅಪಘಾತದ ಬಳಿಕ ದೂರು
ಕುಂದಾಪುರ ಶಾಸಕ ಎ.ಕಿರಣಕುಮಾರ್ ಕೊಡ್ಗಿ ಮಾತನಾಡಿ, ಇತ್ತೀಚೆಗೆ ಕೋಟ ವ್ಯಾಪ್ತಿಯಲ್ಲಿ ಮಣ್ಣು ಸಾಗಾಟ ಲಾರಿಯಿಂದ ಎರಡು ಅಪಘಾತ ಆಗಿತ್ತು. ನಂತರದ ದಿನಗಳಲ್ಲಿ ರೈತರು ಮಣ್ಣು ಸಾಗಾಟ ಮಾಡುವ ವಿಚಾರವಾಗಿ ದೂರುಗಳು ಬರುತ್ತಿವೆ. ಅಪಘಾತ ಘಟಿಸುವ ಮೊದಲು ಈ ರೀತಿ ದೂರು ಬಂದಿರಲಿಲ್ಲ. ರೈತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಗುರುರಾಜ್ ಶೆಟ್ಟಿ ಗಂಟಿಹೊಳೆ ಮಾತನಾಡಿದರು.
ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಹೆಚ್ಚುವರಿ ಪೊಲೀಸ್ ವರಿಷ್ಠ ಸುಧಾಕರ್ ನಾಯಕ್, ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ವಿಂಧ್ಯಾ ಎನ್.ಎಂ. ಇನ್ನಿತರರು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಅನೇಕ ವರ್ಷದಿಂದ ರೈತರು ಕೃಷಿ ಚಟುವಟಿಕೆಗೆ ತಮ್ಮ ಖಾಸಗಿ ಜಮೀನಿಂದಲೇ ಮಣ್ಣು ತೆಗೆದು ಸಾಗಾಟ ಮಾಡಿ ಇನ್ನೊಂದು ಜಮೀನಿಗೆ ಬಳಸುತ್ತಿದ್ದಾರೆ. ಇನ್ಯಾವುದೋ ಅನ್ಯ ಉದ್ದೇಶಕ್ಕೆ ಮಣ್ಣು ಸಾಗಿಸುತ್ತಿಲ್ಲ. ಅವರಿಗೆ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ನಿಯಮಾನುಸಾರ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು.