ಉಡುಪಿ ನಗರದಲ್ಲಿರುವ ಆದರ್ಶ ಆಸ್ಪತ್ರೆ.
* ವಿವಿಧ ವೈದ್ಯರಿಗೆ ಸನ್ಮಾನ, ಗೌರವ
* ವೈದ್ಯಕೀಯ ತಪಾಸಣಾ ಉಚಿತ ಶಿಬಿರ
ಉಡುಪಿ: ಆದರ್ಶ ಚಾರಿಟೇಬಲ್ ಟ್ರಸ್ಟ್ (ರಿ), ಆದರ್ಶ ಆಸ್ಪತ್ರೆ ಉಡುಪಿ ಹಾಗೂ ಉಡುಪಿ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಘದ ಆಶ್ರಯದಲ್ಲಿ ಜು.5ರಂದು ಬೆಳಗ್ಗೆ 9 ಗಂಟೆಗೆ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಉಡುಪಿ ಜಿಲ್ಲಾ ವೈದ್ಯರ ದಿನಾಚರಣೆ, ವೈದ್ಯರಿಗೆ ಸನ್ಮಾನ ಆಯೋಜಿಸಲಾಗಿದೆ.
ಕಾರ್ಯಕ್ರಮದ ನಿಮಿತ್ತ ಉಡುಪಿ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಹಾಗೂ ಸಾರ್ವಜನಿಕರಿಗೆ ಬೃಹತ್ ವೈದ್ಯಕೀಯ ತಪಾಸಣಾ ಉಚಿತ ಶಿಬಿರ ಆಯೋಜಿಸಲಾಗಿದೆ.
ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ ವೈದ್ಯರುಗಳಾದ ಉಡುಪಿ ಆದರ್ಶ ಆಸ್ಪತ್ರೆಯ ಮೂಳೆ ಮತ್ತು ಕೀಲು ರೋಗ ತಜ್ಞ ಡಾ.ಮೋಹನ್ ದಾಸ್ ಶೆಟ್ಟಿ, ಕಾರ್ಕಳದ ಸಿಟಿ ನರ್ಸಿಂಗ್ ಹೋಂನ ಮೂಳೆ ಮತ್ತು ಕೀಲು ರೋಗ ತಜ್ಞ ಡಾ. ರಿಜ್ವಾನ್ ಅಹಮದ್, ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಸೇಂಟ್ ಇಗ್ನೇಶಿಯಸ್ ಆಸ್ಪತ್ರೆಯ ವೈದ್ಯಕೀಯ ತಜ್ಞ ಡಾ. ಆಶಿಕ್ ಕುಮಾರ್ ಹೆಗ್ಡೆ, ಕರ್ಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ . ಸವಿತಾ ಕುಂದರ್, ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗಿರೀಶ್ ಗೌಡ ಅವರನ್ನು ಸನ್ಮಾನಿಸಲಾಗುತ್ತಿದೆ.
ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ,ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಮ್ ಶಂಕರ್, ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಸವರಾಜ ಹುಬ್ಬಳಿ, ಉಡುಪಿ ಜಿಲ್ಲಾ ಸರ್ಜನ್ ಡಾ. ಎಚ್. ಅಶೋಕ್ ಪಾಳ್ಗೊಳ್ಳಲಿದ್ದಾರೆ.
ಶಿಬಿರದಲ್ಲಿ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ, ರಕ್ತದ ಸಂಪೂರ್ಣ ಪರೀಕ್ಷೆ (ಸಿಬಿಸಿ), ರಕ್ತದ ಸಕ್ಕರೆ ಪರೀಕ್ಷೆ (ಆರ್ಬಿಎಸ್), ಕೊಲೆಸ್ಟ್ರಾಲ್ ಪರೀಕ್ಷೆ, ಇಸಿಜಿ ಸೇರಿದಂತೆ ವಿವಿಧ ಆರೋಗ್ಯ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಗುವುದು. ಅಗತ್ಯವಿರುವವರಿಗೆ ಹೃದಯ ತಜ್ಞರ ಸಲಹೆ, ಇಕೋ ಹಾಗೂ ಟ್ರೆಡ್ಮಿಲ್ ಟೆಸ್ಟ್ (ಟಿಎಂಟಿ) ಪರೀಕ್ಷೆಗಳನ್ನು ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಮಾಡಿಸಿಕೊಳ್ಳುವ ಅವಕಾಶವನ್ನೂ ಕಲ್ಪಿಸಲಾಗಿದೆ.
ಸಾರ್ವಜನಿಕರು ಶಿಬಿರದ ಸದುಪಯೋಗ ಮಾಡಿಕೊಂಡು ತಮ್ಮ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.