ಉಡುಪಿ: ಜಿಲ್ಲೆಯಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ನಗರದಲ್ಲಿ ಖರೀದಿ ಭರಾಟೆಯೂ ಜೋರಾಗಿದೆ. ಭಾನುವಾರ ನರಕ ಚರ್ತುದಶಿ ಅಂಗವಾಗಿ ಬೆಳಗ್ಗೆ ಅಭ್ಯಂಗ ಸ್ನಾನ, ಸಂಜೆ ಅಂಗಡಿ ಪೂಜೆ, ಲಕ್ಷ್ಮೀ ಪೂಜೆ ನಡೆಯಿತು.
ಜಿಲ್ಲೆಯ ದೇವಸ್ಥಾನಗಳು, ಮನೆಗಳಲ್ಲಿ ನರಕ ಚತುದರ್ಶಿ ಪ್ರಯುಕ್ತ ಪ್ರಾತಃ ಚಂದ್ರೋದಯ ಕಾಲದಲ್ಲಿ ಎಣ್ಣೆಶಾಸ ಹಾಗೂ ತೈಲಾಭ್ಯಂಗ ನಡೆಯಿತು. ಕೃಷ್ಣ ಮಠದ ಚಂದ್ರಶಾಲೆಯಲ್ಲಿ ಪರ್ಯಾಯ ಶೀರೂರು ಶ್ರೀ ವೇದವರ್ಧನತೀರ್ಥರು ತಮ್ಮ ವಿದ್ಯಾಗುರುಗಳಾದ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರ ತೀರ್ಥರು ಹಾಗೂ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥರ ಸಮ್ಮುಖದಲ್ಲಿ ಎಣ್ಣೆ ಶಾಸ್ತ್ರ ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀಗಳು ಎಣ್ಣೆ ಶಾಸ್ತ್ರ ಪೂರೈಸಿ, ಭಕ್ತಾದಿಗಳಿಗೆ ತೈಲ ಹಚ್ಚಿದರು. ಪರ್ಯಾಯ ಮಠದ ದಿವಾನ್ ಡಾ.ಉದಯಕುಮಾರ್ ಸರಳತ್ತಾಯ, ಪಾರುಪತ್ಯೆದಾರ ಶ್ರೀಶ ಭಟ್ ಕಡೆಕಾರು ಮೊದಲಾದವರು ಉಪಸ್ಥಿತರಿದ್ದರು.
ವ್ಯಾಪಾರ ಬಿರುಸು
ದೀಪಾವಳಿ ಸಂಭ್ರಮದಲ್ಲಿ ಹೂವು, ಹಣ್ಣು, ತರಕಾರಿ ಮಾರಾಟ ಭರದಿಂದ ನಡೆಯುತ್ತಿದೆ. ಹೊರ ಜಿಲ್ಲೆಗಳಿಂದ ಆಗಮಿಸಿದ ಹೂವಿನ ವ್ಯಾಪಾರಿಗಳು ನಗರದ ಕೆಎಂ ಮಾರ್ಗ, ಕನಕದಾಸ ರಸ್ತೆ, ರಥಬೀದಿ ಸಹಿತ ವಿವಿಧೆಡೆ ಬೀಡುಬಿಟ್ಟಿದ್ದಾರೆ. ಹೂವಿನ ದರ ಹಾಗೂ ತರಕಾರಿ ದರ ಸ್ಥಿರವಾಗಿದೆ. ಗೂಡು ದೀಪ, ಮಣ್ಣಿನಿಂದ ತಯಾರಿಸಿದ ಹಾಗೂ ಪಿಂಗಾಣಿ ಹಣತೆಗಳ ಖರೀದಿಯೂ ಮಾರುಕಟ್ಟೆಯಲ್ಲಿ ಜೋರಾಗಿದೆ. ಪಿಂಗಾಣಿ ಹಣತೆಗಳಿಗೆ ಹೋಲಿಕೆ ಮಾಡಿದಲ್ಲಿ ಮಣ್ಣಿನ ಹಣತೆಗಳ ಬೆಲೆ ತುಸು ಕಡಿಮೆ. ನಗರದ ಬಟ್ಟೆ ಅಂಗಡಿಗಳಲ್ಲಿ ಹೆಚ್ಚಿನ ಜನ ಸಂದಣಿ ಇದ್ದು, ಬಟ್ಟೆಗಳ ಖರೀದಿಗೆ ಜನರು ಮುಗಿ ಬಿದ್ದಿದ್ದರು.
ಟ್ರಾಫಿಕ್ ಜಾಮ್
ದೀಪಾವಳಿ ಶಾಪಿಂಗ್ಗಾಗಿ ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರಿಂದ ಕಲ್ಸಂಕ, ಸಿಟಿ ಬಸ್ ಸ್ಟಾಂಡ್, ಕೆಎಂ ಮಾರ್ಗ, ಕಾರ್ಪೊರೇಶನ್ ಬ್ಯಾಂಕ್-ಮಸೀದಿ ರಸ್ತೆ, ಸರ್ವೀಸ್ ಬಸ್ ಸ್ಟಾಂಡ್ ರಸ್ತೆಯ ಇಕ್ಕೆಲಗಳಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿತ್ತು. ಸಾರ್ವಜನಿಕರು&ಸಂಚಾರಿ ಪೊಲೀಸರು ಸಂಚಾರ ವ್ಯವಸ್ಥೆ ನಿಯಂತ್ರಿಸಲು ಹರ ಸಾಹಸಪಟ್ಟರು. ಬಟ್ಟೆ, ಗೃಹೋಪಯೋಗಿ ಮತ್ತು ಇಲೆಕ್ಟ್ರಾನಿಕ್ಸ್ ಮಳಿಗೆ, ಸಿಹಿ ತಿಂಡಿ ಬೇಕರಿಗಳಲ್ಲಿ ಜನ ಸಂದಣಿ ಹೆಚ್ಚಿತ್ತು.