ಉಡುಪಿ: ಪ್ರಸಕ್ತ ಸಾಲಿನ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟವನ್ನು ಸೆ.27ರಂದು ಉಡುಪಿಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಂಘಟಿಸಲಾಗಿದೆ.
ವಾಲಿಬಾಲ್, ಕಬಡ್ಡಿ, ಲಾನ್ ಟೆನ್ನಿಸ್, ಟೇಬಲ್ ಟೆನ್ನಿಸ್, ಕುಸ್ತಿ, ಬಾಕ್ಸಿಂಗ್ ಮತ್ತು ವುಷು ಸ್ಪರ್ಧೆ ನಡೆಯಲಿದೆ.
ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟದ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಹಾಗೂ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
ಉಡುಪಿ ಜಿಲ್ಲೆಯಿಂದ ಭಾಗವಹಿಸುವ ಕ್ರೀಡಾಪಟುಗಳು ಆನ್ಲೈನ್ ಮೂಲಕ ನೋಂದಣಿ ಮಾಡಿದ ಗುರುತಿನ ಚೀಟಿ ಹಾಗೂ ಇನ್ನಿತರ ದಾಖಲೆಗಳೊಂದಿಗೆ ನಿಗದಿತ ದಿನಾಂಕದಂದು ಸಂಘಟಕರಲ್ಲಿ ವರದಿ ಮಾಡಿಕೊಳ್ಳಬೇಕು.
ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ಕಚೇರಿ ಅಥವಾ ದೂ.ಸಂ. 0820-2521324 ಸಂಪರ್ಕಿಸಬಹುದು ಎಂದು ಇಲಾಖಾಧಿಕಾರಿ ಡಾ. ರೋಶನ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.