ಉಡುಪಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಂಗಳೂರು ವಿಭಾಗ ಪ್ರಭಾರಿ ಭಾರತೀಶ್ ಕೊಡಗು ಅವರನ್ನು ಕುತ್ಯಾರು ನವೀನ್ ಶೆಟ್ಟಿ ಸನ್ಮಾನಿಸಿದರು. ಕಿರಣಕುಮಾರ್ ಬೈಲೂರು, ದಿನಕರ್ ಶೆಟ್ಟಿ ಹೆರ್ಗ, ಸತ್ಯಾನಂದ ನಾಯಕ್ ಇದ್ದರು.
* ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕರೆ
* ಉಡುಪಿ ಜಿಲ್ಲಾ ಕಾರ್ಯ ತಂಡದ ಸಭೆ
ಉಡುಪಿ: ಸಮಗ್ರ ರಾಷ್ಟ್ರ ನಿರ್ಮಾಣದಲ್ಲಿ ಸಮರ್ಪಿಸಿಕೊಂಡಿರುವ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿರುವ ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನಾ ದಿನ ಕಾರ್ಯಕ್ರಮ ಏ.6ರಂದು ನಡೆಯಲಿದೆ. ಜಿಲ್ಲಾದ್ಯಂತ ಸಂಭ್ರಮದಿಂದ ಆಚರಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕರೆ ನೀಡಿದರು.
ಉಡುಪಿಯ ಜಿಲ್ಲಾ ಕಚೇರಿಯಲ್ಲಿ ಗುರುವಾರ (ಏ.2) ಆಯೋಜಿಸಿದ್ದ ಜಿಲ್ಲಾ ಕಾರ್ಯ ತಂಡದ ಸಭೆ ಹಾಗೂ ಮಂಗಳೂರು ವಿಭಾಗದ ನೂತನ ಪ್ರಭಾರಿಯಾಗಿ ನೇಮಕಗೊಂಡ ಭಾರತೀಶ್ ಕೊಡಗು ಅವರನ್ನು ಜಿಲ್ಲಾ ಬಿಜೆಪಿ ವತಿಯಿಂದ ಸನ್ಮಾನಿಸಿ ಮಾತನಾಡಿದರು.
ಮನೆಯ ಮೇಲೆ ಬಿಜೆಪಿಯ ಧ್ವಜ ಹಾರಿಸಿ
ಏ.6ರಂದು ಜಿಲ್ಲೆಯ ಎಲ್ಲ 1,112 ಬೂತ್ಗಳ ಅಧ್ಯಕ್ಷರು ಹಾಗೂ ಪಕ್ಷದ ಪ್ರತಿ ಕಾರ್ಯಕರ್ತನೂ ತನ್ನ ಮನೆಯ ಮೇಲೆ ಬಿಜೆಪಿಯ ಧ್ವಜ ಹಾರಿಸಬೇಕು. ಬೂತ್ ಸಮಿತಿ ಸಭೆ ಆಯೋಜಿಸಬೇಕು. ಪಕ್ಷದ ಸ್ಥಾಪನೆ, ಇತಿಹಾಸ ಮತ್ತು ಸಾಧನೆಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯಕ್ರಮ ಆಯೋಜಿಸಿ, ಪಕ್ಷದ ಹಿರಿಯರನ್ನು ಗೌರವಿಸಿ, ಭಾವನಾತ್ಮಕವಾಗಿ ಸ್ಥಾಪನಾ ದಿನ ಆಚರಿಸಬೇಕು. ಅಲ್ಲದೆ, ಏ.14ರಂದು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಜಿಲ್ಲೆಯ ಎಲ್ಲ ಬೂತ್ ಗಳಲ್ಲಿ ವ್ಯವಸ್ಥಿತವಾಗಿ ಆಚರಿಸಬೇಕು ಎಂದು ಸಲಹೆ ನೀಡಿದರು.
ಮಂಗಳೂರು ವಿಭಾಗ ಪ್ರಭಾರಿ ಭಾರತೀಶ್ ಕೊಡಗು ಎಸ್ಐಆರ್ ಅಭಿಯಾನ, ಪ್ರಶಿಕ್ಷಣ ವರ್ಗ ಸಹಿತ ಪಕ್ಷದ ಸಂಘಟನಾತ್ಮಕ ವಿಚಾರಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್ ಮಂಡಲವಾರು ಸಂಘಟನಾತ್ಮಕ ಚಟುವಟಿಕೆಗಳ ವರದಿ ಸಂಗ್ರಹಿಸಿದರು.
ಪಕ್ಷದ ಪ್ರಮುಖರು, ಬಿಜೆಪಿ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪ್ರಕೋಷ್ಠಗಳ ಸಂಚಾಲಕರು, ಬಿಎಲ್ಎ ಮತ್ತು ಪ್ರಶಿಕ್ಷಣ ತಂಡದ ಸದಸ್ಯರು ಉಪಸ್ಥಿತರಿದ್ದರು.
ಜಿಲ್ಲಾ ಪ್ರಕೋಷ್ಠಗಳ ಸಹ ಸಂಯೋಜಕ ಶಂಕರ್ ಅಂಕದಕಟ್ಟೆ ವಂದೇ ಮಾತರಂ ಗೀತೆ ಹಾಡಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿರಣಕುಮಾರ್ ಬೈಲೂರು ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ್ ಶೆಟ್ಟಿ ಹೆರ್ಗ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾರ್ಯದರ್ಶಿ ಉಮೇಶ್ ಎ. ನಾಯ್ಕ್ ವಂದಿಸಿದರು.