ಕೇಂದ್ರ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಉಡುಪಿಯಲ್ಲಿ ಕಾಂಗ್ರೆಸ್​ ಪದಾಧಿಕಾರಿಗಳು ಪ್ರತಿಭಟಿಸಿದರು. ಜ್ಯೋತಿ ಹೆಬ್ಬಾರ್​, ರಮೇಶ್​ ಕಾಂಚನ್​, ಮ್ಯಾಕ್ಸಿಮ್​ ಡಿಸೋಜಾ, ಕೃಷ್ಣಾನಂದ ಪೈ, ಅನಂತಕೃಷ್ಣ ಪ್ರಭು, ಗೀತಾ ರವಿ, ಮಲ್ಲೇಶ್​, ಶಹನವಾಝ್​, ವಿನಯ ಕರ್ಕಡಾ, ಸುಶಾಂತ್​ ಸಾಲಿನ್ಸ್​, ಶೋಭಾ ಭಂಡಾರಿ, ಶಾಂತಾ, ರಮೇಶ್​ ರಘುರಾಮ್​ ಮೆಂಡನ್​ ಇನ್ನಿತರಿದ್ದರು. 
ಉಡುಪಿ

ಕಾಂಗ್ರೆಸ್ ಯೋಜನೆಗಳ ಹೆಸರು ಬದಲಿಸಿದ್ದೇ ಬಿಜೆಪಿ ಸಾಧನೆ

* ಮಹಿಳಾ ಜಿಲ್ಲಾಧ್ಯಕ್ಷೆ ಜ್ಯೋತಿ ಹೆಬ್ಬಾರ್​ ಆಕ್ರೋಶ

* ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆ

ಉಡುಪಿ: ಕೇಂದ್ರ ಬಿಜೆಪಿ ಸರ್ಕಾರ ಮಲತಾಯಿ ಧೋರಣೆ ಹೊಂದಿದ್ದು, ಬಡ ಕಾರ್ಮಿಕರ ಉದ್ಯೋಗದ ಹಕ್ಕು ಕಸಿಯುವ ಹುನ್ನಾರ ನಡೆಸಿದೆ. ಪ್ರಸ್ತುತ ಜಾರಿಗೆ ತಂದಿರುವ ಜನವಿರೋಧಿ ನೀತಿಯಾಗಿರುವ ವಿಬಿ&ಜಿ ರಾಮ್​ ಜಿ ಕೈಬಿಡಬೇಕು. ಈ ಹಿಂದೆ ಇದ್ದ ಉದ್ಯೋಗ ಖಾತರಿ ಯೋಜನೆಯನ್ನೇ ಮರು ಜಾರಿಗೊಳಿಸಬೇಕು. ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿದ್ದ ಜನಪರ ಯೋಜನೆಗಳ ಹೆಸರು ಬದಲಿಸುವುದೇ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಯಾಗಿದೆ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್​ನ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್​ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನರೇಗಾ ಹೆಸರು ಮತ್ತು ಅದರಲ್ಲಿದ್ದ ಜನಪರ ಅಂಶಗಳನ್ನು ಬದಲಿಸಿ ವಿಬಿ-ಜಿ ರಾಮ್​ ಜಿ ಎಂಬ ಮರುನಾಮಕರಣ ವಿರೋಧಿಸಿ 31ನೇ ಬೈಲೂರು ವಾರ್ಡ್​ನ ಮಿಷನ್​ ಆಸ್ಪತ್ರೆಯ ವೃತ್ತದ ಬಳಿ ಕಾಂಗ್ರೆಸ್​ ವತಿಯಿಂದ ಶುಕ್ರವಾರ (ಜ.30) ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಕೇಂದ್ರದಿಂದ ಜನವಿರೋಧಿ ನೀತಿ
ಉಡುಪಿ ಬ್ಲಾಕ್​ ಕಾಂಗ್ರೆಸ್​ ಸಮಿತಿಯ ಅಧ್ಯಕ್ಷ ರಮೇಶ್​ ಕಾಂಚನ್​ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರದ ಇಂತಹ ಹುನ್ನಾರವನ್ನು ಜನಸಾಮಾನ್ಯರು ಸಹಿಸುವುದಿಲ್ಲ. ಕಾಂಗ್ರೆಸ್​ ಎಂದಿಗೂ ಬಡವರ ಪಕ್ಷ. ಜನಸಾಮಾನ್ಯರಿಗೆ ನೆಮ್ಮದಿಯ ಬದುಕು ಕಲ್ಪಿಸಲು ಕಾಂಗ್ರೆಸ್​ ಅಧಿಕಾರದಲ್ಲಿದ್ದಾಗ ನರೇಗಾದಂತಹ ಅನೇಕ ಜನಪರ ಯೋಜನೆ ಜಾರಿಗೆ ತಂದಿದೆ. ಅವುಗಳನ್ನು ಕೈಬಿಡುವ ಮೂಲಕ ಬಿಜೆಪಿ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಮಾಜಿ ಸಂಸದ ಕೆ.ಜಯಪ್ರಕಾಶ್​ ಹೆಗ್ಡೆ, ಬೂತ್​ ಅಧ್ಯಕ್ಷರು, ಬಿಎಲ್​ಎ 2, ವಾರ್ಡ್​ನ ಪ್ರಮುಖರಾದ ಮ್ಯಾಕ್ಸಿಮ್​ ಡಿಸೋಜಾ, ಕೃಷ್ಣಾನಂದ ಪೈ, ಅನಂತಕೃಷ್ಣ ಪ್ರಭು, ಮಲ್ಲೇಶ್​, ಲಿಖಿತ್​, ಗೀತಾ ರವಿ, ಶಹನವಾಝ್​, ವಿನಯ ಕರ್ಕಡಾ, ಸುಶಾಂತ್​ ಸಾಲಿನ್ಸ್​, ಶೋಭಾ ಭಂಡಾರಿ, ಶಾಂತಾ, ರಮೇಶ್​ ರಘುರಾಮ್​ ಮೆಂಡನ್​ ಇನ್ನಿತರರು ಉಪಸ್ಥಿತರಿದ್ದರು.