ಉಡುಪಿಯ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತಾ ಸಮಿತಿ ಸಭೆಯಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ಅನಿತಾ ಮಡ್ಲೂರು, ಸುಬ್ರಹ್ಮಣ್ಯ ಶೆಟ್ಟಿ, ಮಹಾಂತೇಶ್​ ಹಂಗರಗಿ ಇತರರಿದ್ದರು. 
ಉಡುಪಿ

ಸುರಕ್ಷತಾ ಪರಿಕರ ಬಳಕೆ ಕಡ್ಡಾಯ

* ಪೌರ ಕಾರ್ಮಿಕರಿಗೆ ಡಿಸಿ ಸ್ವರೂಪಾ ಟಿ.ಕೆ. ಸೂಚನೆ

* ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತಾ ಸಮಿತಿ ಸಭೆ

ಉಡುಪಿ: ಪೌರ ಕಾರ್ಮಿಕರು ತಮ್ಮ ದೈನಂದಿನ ಕಾರ್ಯ ನಿರ್ವಹಿಸುವಾಗ ಅಗತ್ಯ ಸುರಕ್ಷತಾ ಪರಿಕರಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಬೇಕು. ಅವರೂ ಉತ್ತಮ ಅರೋಗ್ಯ ಹೊಂದಿ ಸದೃಢವಾಗಿ ಕಾರ್ಯ ನಿರ್ವಹಿಸಲೆಂದು ಸರ್ಕಾರ ಸುರಕ್ಷತಾ ಪರಿಕರ ನೀಡುತ್ತಿದೆ. ಈ ಬಗ್ಗೆ ಸ್ಥಳೀಯ ಸಂಸ್ಥೆಯ ಮುಖ್ಯ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಧಿಕಾರಿಗಳಿಗೆ ಸೂಚಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ (ಜು.15) ಆಯೋಜಿಸಿದ್ದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತಾ ಸಮಿತಿಯ ದ್ವಿತೀಯ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದರು.

ವೇತನಕ್ಕೆ ವಿಳಂಬ ಮಾಡಬೇಡಿ

ಸ್ಥಳಿಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ಲೋಡರ್ಸ್​, ಕ್ಲೀನರ್ಸ್​ ಹಾಗೂ ಚಾಲಕರಿಗೆ ಪ್ರತಿ ತಿಂಗಳ ವೇತನವನ್ನು ವಿಳಂಬವಿಲ್ಲದೆ ಪಾವತಿಸಬೇಕು. ಜತೆಗೆ ಇಎಸ್​ಐ ಹಾಗೂ ಪಿಎಫ್​ ಮೊತ್ತ ಪಾವತಿಯಾಗಿದೆಯೇ ಇಲ್ಲವೇ ಎಂದು  ಅಧಿಕಾರಿಗಳು ಪರಿಶೀಲಿಸಬೇಕು. ಶೇ.24.01ರ ಅನುದಾನವನ್ನು ಪೌರ ಕಾರ್ಮಿಕರಿಗೆ ಮೀಸಲಿಟ್ಟಿದ್ದು ಆದೇಶದನ್ವಯ ಉಪಯೋಗಿಸಬೇಕು ಎಂದರು.

ನಿಗದಿತ ಆರೋಗ್ಯ ತಪಾಸಣೆ ಮಾಡಿ

ಪೌರಾಡಳಿತ ನಿರ್ದೇಶನಲಾಯದ ನಿರ್ದೇಶನದಂತೆ ಪೌರ ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಬೇಕು. ವರ್ಷಕ್ಕೊಮ್ಮೆ ಮಾಸ್ಟರ್​ ಹೆಲ್ತ್​ ಚೆಕ್​-ಅಪ್​ಗೆ ಕ್ರಮವಹಿಸಬೇಕು. ಸಫಾಯಿ ಕಮಾರ್ಚಾರಿಗಳ ಒಳಿತಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಅವರಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಡಿಸಿ ಸಲಹೆ ನೀಡಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಅನಿತಾ ಮಡ್ಲೂರು, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಶೆಟ್ಟಿ, ನಗರಸಭಾ ಪೌರಯುಕ್ತ ಮಹಾಂತೇಶ್​ ಹಂಗರಗಿ, ಸಮಿತಿಯ ಸದಸ್ಯರಾದ ಪ್ರಶಾಂತಿ, ನಾಗರಾಜ್​, ಕೊಟ್ರಿಬಾಯಿ ಹಾಗೂ ಶಂಕರ್​, ಜಿಲ್ಲಾ ಮಟ್ಟದ ವಿವಿಧ ಅನುಷ್ಠಾನ ಅಧಿಕಾರಿಗಳು ಉಪಸ್ಥಿತರಿದ್ದರು.
"

ಪೌರ ಕಾರ್ಮಿಕರ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನ ಹೊಂದುವಂತಾಗಲು ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಮೆನ್ಯುವಲ್​ ಸ್ಕ್ಯಾವೆಂಜೆರ್ಸ್​ ಮಕ್ಕಳಿಗೆ ಶೇ.5ರಷ್ಟು ನೇರ ಪ್ರವೇಶಕ್ಕೆ ಅವಕಾಶವಿದೆ. ಇದರ ಸದುಪಯೋಗ ಆಗುವಂತೆ ಹಾಗೂ ಅವರ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು.

— ಸ್ವರೂಪಾ ಟಿ.ಕೆ. ಉಡುಪಿ ಜಿಲ್ಲಾಧಿಕಾರಿ.