ಉಡುಪಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ಯಶ್​ಪಾಲ್​ ಸುವರ್ಣ, ಕಿರಣಕುಮಾರ್​ ಕೊಡ್ಗಿ, ಪ್ರತೀಕ್​ ಬಾಯಲ್​, ಹರಿರಾಂ ಶಂಕರ್​, ವಿಂದ್ಯಾ ಎನ್​.ಎಂ. ಇತರರಿದ್ದರು. 
ಉಡುಪಿ

ಪ್ರವಾಸಿಗರ ಸುರಕ್ಷತೆಗೆ ನೀಡಿ ಆದ್ಯತೆ

 * ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಆದೇಶ

* ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ

ಉಡುಪಿ: ಜಿಲ್ಲೆಗೆ ಬರುವ ಪ್ರವಾಸಿಗರು ಬೋಟ್​ಗಳಲ್ಲಿ ಸಂಚರಿಸುವಾಗ ತಪ್ಪದೇ ಲೈಫ್​ ಜಾಕೆಟ್​ ಧರಿಸಬೇಕು. ತಪ್ಪಿದ್ದಲ್ಲಿ ಅಂತಹವರಿಗೆ ದಂಡ ವಿಧಿಸಲಾಗುವುದು. ಲೈಫ್​ ಜಾಕೆಟ್​ ಧರಿಸಿದರೆ ಮಾತ್ರ ಬೋಟ್​ ಏರಲು ಮಾಲೀಕರು ಅವಕಾಶ ಕೊಡಬೇಕು. ಈ ಬಗ್ಗೆ ಕರಾವಳಿ ಕಾವಲು ಪಡೆ ಪರಿಶೀಲಿಸಬೇಕು. ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಉಪಯೋಗಕ್ಕೆ ಅಗತ್ಯವಿರುವ ಎಲ್ಲ ರೀತಿಯ ಮೂಲ ಸೌಕರ್ಯ ಕಲ್ಪಿಸುವುದರೊಂದಿಗೆ ಅವರ ಜೀವ ಸುರಕ್ಷತೆಗೂ ಪ್ರಥಮ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಧಿಕಾರಿಗಳಿಗೆ ಆದೇಶಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ (ಫೆ.6) ಆಯೋಜಿಸಿದ್ದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದರು.

ಬೀಚ್​ಗಳಲ್ಲಿ ಅಭಿವೃದ್ಧಿ ಕಾಮಗಾರಿ

ಜಿಲ್ಲೆಯಲ್ಲಿರುವ ಕಡಲ ತೀರಗಳಾದ ಮಲ್ಪೆ ಬೀಚ್​, ಸೈಂಟ್​ ಮೇರಿಸ್​ ದ್ವೀಪದಲ್ಲಿ ಪ್ರವಾಸಿಗರ ರಕ್ಷನೆಗಾಗಿ ವಾಚ್​ ಟವರ್​ ನಿರ್ಮಾಣ, ಹೋರ್ಡಿಂಗ್​ ಬೋರ್ಡ್​ ಅಳವಡಿಕೆ, ಮಾಹಿತಿ ಫಲಕ, ಸಾರ್ವಜನಿಕ ಸೂಚನಾ ಫಲಕ, ಎಚ್ಚರಿಕೆಯ ಫಲಕ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು. ಮಲ್ಪೆ ಬೀಚ್​ನಲ್ಲಿ ಅಭಿವೃದ್ಧಿ ಕಾಮಗಾರಿಗಾಗಿ ನಿರ್ಮಿತಿ ಕೇಂದ್ರವು ಯೋಜನಾ ಕಾಮಗಾರಿಗಳ ನೀಲಿನಕ್ಷೆ ಹಾಗೂ ಅಂದಾಜು ಪಟ್ಟಿ ನೀಡಿದೆ. ಮಲ್ಪೆ ಬೀಚ್​ನ ಉತ್ತರ ಭಾಗದಲ್ಲಿರುವ ಜಾಗ ಸ್ವಾಧಿನಪಡಿಸಿಕೊಂಡು, ಮುಂಬರುವ ದಿನಗಳಲ್ಲಿ ಅನುದಾನದ ಲಭ್ಯತೆ ಆಧರಿಸಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ಎಚ್ಚರಿಕೆಯ ಫಲಕ ಅಳವಡಿಸಿ

ಶಾಸಕ ಯಶ್​ಪಾಲ್​ ಸುವರ್ಣ ಮಾತನಾಡಿ, ಮಲ್ಪೆ ಬೀಚ್​ನಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಾಗ ಸ್ಥಳೀಯ ಮೀನುಗಾರರಿಗೆ ಹಾಗೂ ಮೀನುಗಾರಿಕಾ ಚಟುವಟಿಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಜಿಲ್ಲೆಯ ಬೀಚ್​ ಹಾಗೂ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರಿಗೆ ಮಾಹಿತಿ ಕೊರತೆಯಿಂದಾಗಿ ಅವಘಡ ಉಂಟಾಗುತ್ತಿವೆ. ಎಲ್ಲೆಡೆ ಎಚ್ಚರಿಕೆಯ ಫಲಕ ಅಳವಡಿಸಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಜಿಪಂ ಸಿಇಒ ಪ್ರತೀಕ್​ ಬಾಯಲ್​, ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಂ ಶಂಕರ್​, ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ, ನಗರಸಭಾ ಆಯುಕ್ತ ಮಹಾಂತೇಶ್​ ಹಂಗರಗಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ವಿಂದ್ಯಾ ಎನ್​.ಎಂ., ಟೂರಿಸಂ ಅಸೋಶಿಯೇಷನ್​ನ ಅಧ್ಯಕ್ಷ ಮನೋಹರ್​ ಶೆಟ್ಟಿ, ಡಾ. ರೋಶನ್​ಕುಮಾರ್​ ಶೆಟ್ಟಿ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ವರ್ಷ ಕಳೆದರೂ ನೀಡಿಲ್ಲ ವರದಿ

ಉಡುಪಿ ತಾಲೂಕಿನ ಕದಿಕೆ ಕಡಲ ತೀರದ ನಿರ್ವಹಣೆ, ಜಲ ಸಾಹಸ ಚಟುವಟಿಕೆ, ಸೈಂಟ್​ ಮೇರಿಸ್​ ದ್ವೀಪಕ್ಕೆ ಪ್ರಯಾಣಿಕರ ದೋಣಿ ಸೇವೆಗೆ ಟೆಂಡರ್​ ಕರೆದು ಶೇಕಡವಾರು ಹಂಚಿಕೆ ಆಧಾರದಲ್ಲಿ ನೀಡಬೇಕು. ಮಲ್ಪೆ ಬೀಚ್​ ಹಾಗೂ ಸೀವಾಕ್​ ಪ್ರದೇಶಗಳಲ್ಲಿ ಅಂಗಡಿ, ಅಲ್ಲಿನ ಸ್ವಚ್ಛತೆ ಮತ್ತು ನಿರ್ವಹಣೆಗೂ ಟೆಂಡರ್​ ಪ್ರಕ್ರಿಯೆ ನಡೆಸಬೇಕು. ಜಿಲ್ಲೆಯಲ್ಲಿ ಯಾವ ಬೀಚ್​ಗಳಲ್ಲಿ ಜಲ ಸಾಹಸ ಕ್ರೀಡೆ ಆಯೋಜಿಸುವುದು ಸೂಕ್ತ ಎಂಬ ಬಗ್ಗೆ ಕಳೆದ ವರ್ಷವೇ ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಆಫ್​ ವಾಟರ್​ ಸ್ಪೋರ್ಟ್ಸ್​ನವರಿಗೆ ವರದಿ ನೀಡಲು ಸೂಚಿಸಲಾಗಿತ್ತು. ಆದರೆ, ಇನ್ನೂ ನೀಡಿಲ್ಲ. ಅದನ್ನು ಕೂಡಲೇ ಪಡೆಯಬೇಕು. ಪ್ರವಾಸಿಗರ ಜೀವ ರಕ್ಷಣೆಗೆ ಅಗತ್ಯವಿರುವ ಜೆಟ್​ ಸೀ ಬೈಕ್​ ಸರಬರಾಜು ಮಾಡಲು  ಕೆಆರ್​ಡಿಎಲ್​ ಮೂಲಕ ಟೆಂಡರ್​ ಕರೆಯಲಾಗಿತ್ತು. ಈ ಬಗ್ಗೆ ಸೂಕ್ತ ಕ್ರಮ ವಹಿಸಿ ಎಂದು ಡಿಸಿ ಸ್ವರೂಪಾ ತಿಳಿಸಿದರು.
"

ಕುಂದಾಪುರದ ಕೋಡಿ ಕಡಲ ಕಿನಾರೆಯಲ್ಲಿರುವ ಸೀ ವಾಕ್​ನಲ್ಲಿ ಪ್ರವಾಸಿಗರಿಗೆ ಅನುಕೂಲಕ್ಕಾಗಿ ಉದ್ಯಾನವನ, ಸಮುದ್ರ ವೀಕ್ಷಣೆಗೆ ಕುಳಿತುಕೊಳ್ಳಲು ಬೇಂಚ್​ ಸೇರಿದಂತೆ ಅಗತ್ಯವಿರುವ ಮೂಲ ಸೌಕರ್ಯ ಕಲ್ಪಿಸಬೇಕು. ಅಭಿವೃದ್ಧಿ ಕಾರ್ಯ ಪೂರ್ಣ ಪ್ರಮಾಣದಲ್ಲಿ ಸರ್ಕಾರದ ವತಿಯಿಂದ ಕೈಗೊಳ್ಳಲು ಸಾಧ್ಯವಾಗದಿದ್ದರೆ ಖಾಸಗಿ ಸಹಭಾಗಿತ್ವ ಪಡೆಯಬೇಕು.