ಉಡುಪಿಯಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಸಮ್ಮೇಳನವನ್ನು ಡಾ. ಕೆ.ಶ್ರೀಧರ್​ ಆರ್​. ಪೈ ಉದ್ಘಾಟಿಸಿದರು. ರವೀಂದ್ರ ಉಪಾಧ್ಯಾಯ, ಸುಬ್ರಹ್ಮಣ್ಯ ಜಿ. ಜೋಶಿ, ಲೀಲಾಬಾಯಿ ಭಟ್​, ಮಂಜುನಾಥ್​ ಭಟ್​, ರಮೇಶ್​ ಎಸ್​.ಸಿ. ಇತರರಿದ್ದರು. 
ಉಡುಪಿ

ಶೈಕ್ಷಣಿಕ ಬುನಾದಿಗೆ ಶಿಕ್ಷಕರ ಸಮರ್ಪಣೆಯೇ ಶಕ್ತಿ

ಮಾಹೆ ಆಡಳಿತಾಧಿಕಾರಿ 

ಡಾ. ಕೆ.ಶ್ರೀಧರ್​ ಆರ್​. ಪೈ ಅಭಿಮತ

* ಪ.ಪೂ. ಕಾಲೇಜು ಪ್ರಾಂಶುಪಾಲರ ಶೈಕ್ಷಣಿಕ ಸಮ್ಮೇಳನ 

ಉಡುಪಿ: ಜ್ಞಾನಯಾತ್ರೆಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ಜ್ಞಾನವು ಒಂದೇ ಮೂಲದಿಂದ ದೊರೆಯದು. ಅದು ಹಿರಿಯರ ಮಾರ್ಗದರ್ಶನ, ಸಹಪಾಠಿಗಳ ಸಹಕಾರ ಹಾಗೂ ಸ್ವಂತ ಅನುಭವಗಳ ಮೂಲಕ ವಿಸ್ತಾರಗೊಳ್ಳುತ್ತದೆ. ಮಳೆಯ ಪ್ರತಿ ಹನಿಯೂ ಸಾಗರ ಸೇರುವಂತೆಯೇ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರು ಮಾಡುವ ಪ್ರತಿ ಕಾರ್ಯ, ಸಣ್ಣ ಸೇವೆಯೂ ಸಹ ಭವಿಷ್ಯದ ಮಹತ್ತರ ಬದಲಾವಣೆಗೆ ಕಾರಣವಾಗುತ್ತದೆ ಎಂದು ಮಣಿಪಾಲದ ಮಾಹೆ ಆಡಳಿತಾಧಿಕಾರಿ ಡಾ. ಕೆ.ಶ್ರೀಧರ್​ ಆರ್​. ಪೈ ಅಭಿಮತ ವ್ಯಕ್ತಪಡಿಸಿದರು.
ಉಡುಪಿಯಲ್ಲಿರುವ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಉಡುಪಿ ಜಿಲ್ಲಾ ಪ್ರಾಂಶುಪಾಲರ ಸಂಘ (ರಿ.)ದ ವತಿಯಿಂದ ಬುಧವಾರ (ಆ.26) ಆಯೋಜಿಸಿದ್ದ ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಶೈಕ್ಷಣಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ತಂತ್ರಜ್ಞಾನವೂ ಅಗತ್ಯ

ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ಅಧ್ಯಾಪಕರೆಲ್ಲರೂ ನಿರಂತರವಾಗಿ ತಮ್ಮ ಜ್ಞಾನ ನವೀಕರಿಸಿಕೊಳ್ಳಬೇಕು. ತಂತ್ರಜ್ಞಾನದ ವೇಗಕ್ಕೆ ಶಿಕ್ಷಣ ಕ್ಷೇತ್ರವೂ ಹೆಜ್ಜೆ ಹಾಕಬೇಕಾಗಿದ್ದು ಎಲ್ಲ ಶಿಕ್ಷಕರೂ ತಂತ್ರಜ್ಞಾನವನ್ನು ಶಿಕ್ಷಣದ ಅವಿಭಾಜ್ಯ ಅಂಗವಾಗಿ ಅಳವಡಿಸಿಕೊಳ್ಳಬೇಕು. ಒಂದು ಶಿಕ್ಷಣ ಸಂಸ್ಥೆ ಎತ್ತರಕ್ಕೆ ಬೆಳೆಯಲು ಶಿಕ್ಷಕರ ಕಠಿಣ ಪರಿಶ್ರಮ, ಬದ್ಧತೆ, ಸಮರ್ಪಣಾ ಮನೋಭಾವ ಹಾಗೂ ನಿರಂತರ ತರಬೇತಿಯೂ ಅಗತ್ಯ ಎಂದರು.

ಶಾಲಾ ಶಿಕ್ಷಣ ಇಲಾಖೆ (ಪ.ಪೂ.) ಉಪನಿರ್ದೇಶಕ ರವೀಂದ್ರ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಉಪನಿರ್ದೇಶಕರಾದ ಸುಬ್ರಹ್ಮಣ್ಯ ಜಿ. ಜೋಶಿ, ಕರ್ನಾಟಕ ರಾಜ್ಯ ಪರೀಕ್ಷೆ ಮತ್ತು ಮೌಲ್ಯರ್ನಿಣಯ ಮಂಡಳಿಯ ಉಪನಿರ್ದೇಶಕಿ ಲೀಲಾಬಾಯಿ ಭಟ್​ ಉಪಸ್ಥಿತರಿದ್ದರು. 
ಸಂದ ನಿಕಟಪೂರ್ವ ಅಧ್ಯಕ್ಷ ವರ್ಗಿಸ್​ ಪಿ., ಸಾಂಸ್ಕೃತಿಕ ಸಂಚಾಲಕ ಜಗದೀಶ್​ ನಾವುಡ, ಕ್ರೀಡಾ ಸಂಚಾಲಕ ಪ್ರಕಾಶ್​ ಶೆಟ್ಟಿ, ಪರೀಕ್ಷಾ ಸಂಚಾಲಕ ಜಗದೀಶ್​ ಕುಮಾರ್​ ಪಾಲ್ಗೊಂಡಿದ್ದರು.
ಸಂಘದ ಅಧ್ಯಕ್ಷ ಮಂಜುನಾಥ್​ ಭಟ್​ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ರಮೇಶ್​ ಎಸ್​.ಸಿ. ವರದಿ ವಾಚಿಸಿದರು. ಪ್ರಾಂಶುಪಾಲರಾದ ಸುಶೀಲಾ ಹೊಳ್ಳ ಹಾಗೂ ಡಾ. ಸುಮಾ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಹರಿಪ್ರಸಾದ್​ ವಂದಿಸಿದರು. ಪ್ರಾಂಶುಪಾಲ ವಿಶ್ವನಾಥ ಕರಬ ಹಾಗೂ ಶಾರದಾ ಹೊಳ್ಳ ಸಹಕರಿಸಿದರು.

ಸಾಧನೆ ಮಾಡಿದ ವಿದ್ಯಾರ್ಥಿಗಳು, ಸಂಸ್ಥೆಗೆ ಸನ್ಮಾನ

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶೇ.100 ಹಾಗೂ ಶೇ.90ಕ್ಕಿಂತ ಅಧಿಕ ಫಲಿತಾಂಶ ದಾಖಲಿಸಿದ ಪ.ಪೂ. ಕಾಲೇಜುಗಳಿಗೆ ಅಭಿನಂದನಾ ಪತ್ರ ವಿತರಿಸಲಾಯಿತು. 2026ರ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ.ಪೂ. ಕಾಲೇಜುಗಳ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳ ಒಟ್ಟು 14 ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ಹಾಗೂ ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ನಿವೃತ್ತ ಪ್ರಾಂಶುಪಾಲರಾದ ಬೇಬಿ ಕೆ., ಈಶ್ವರಮಂಗಲ, ಬಿ.ವಿಘ್ನೇಶ್ವರ ಭಟ್​, ಪ್ರವಿಣ್​ ಶೆಟ್ಟಿ ಹಾಗೂ ಉಪನಿರ್ದೇಶಕರಾಗಿ ಪದೋನ್ನತಿ ಹೊಂದಿದ ಲೀಲಾಬಾಯಿ ಭಟ್​ ಅವರನ್ನು ಸನ್ಮಾನಿಸಲಾಯಿತು. ವಿವಿಧ ವಿಷಯಗಳ ಫೋರಂನ ಅಧ್ಯಕ್ಷರು, ಕಾರ್ಯದರ್ಶಿಗಳನ್ನು ಗೌರವಿಸಲಾಯಿತು.