ಜಿಲ್ಲೆಯಲ್ಲಿರುವ ಅಕ್ರಮ ಹೋಂ ಸ್ಟೇ ಹಾಗೂ ರೆಸಾರ್ಟ್ಗಳ ಪತ್ತೆಗೆ ಜಿಲ್ಲಾ ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸಿರುವುದು.
* ಜಿಲ್ಲಾ ಪೊಲೀಸರಿಂದ ವಿಶೇಷ ಕಾರ್ಯಾಚರಣೆ
* ಕೊಡಗು ಘಟನೆ ಬಳಿಕ ಎಚ್ಚೆತ್ತುಕೊಂಡ ಇಲಾಖೆ
ಉಡುಪಿ: ಕೊಡಗು ಜಿಲ್ಲೆಯ ಹೋಂ ಸ್ಟೇ ಒಂದರಲ್ಲಿ ಇತ್ತೀಚೆಗೆ ನಡೆದಿದ್ದ ವಿದೇಶಿ ಮಹಿಳೆಯ ಅತ್ಯಾಚಾರ ಪ್ರಕರಣದ ಬಳಿಕ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಉಡುಪಿ ಜಿಲ್ಲೆಯಲ್ಲಿರುವ ಹೋಂ ಸ್ಟೇ ಹಾಗೂ ವಿವಿಧ ರೆಸಾರ್ಟ್ಗಳ ಪರಿಶೀಲನೆಗಾಗಿ ಜಿಲ್ಲಾ ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸಿದ್ದು, ಜಿಲ್ಲೆಯಲ್ಲಿ ಒಟ್ಟು 71 ಅಕ್ರಮ ಹೋಂ ಸ್ಟೇ ಇರುವುದನ್ನು ಪತ್ತೆ ಮಾಡಿದ್ದಾರೆ.
ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 3 ಹೋಂ ಸ್ಟೇ, ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 15, ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2, ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 7, ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 5, ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ 16, ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ 15 ಮತ್ತು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ 8 ಹೋಂ ಸ್ಟೇ, ರೆಸಾರ್ಟ್ ಅಕ್ರಮವಾಗಿ ನಡೆಸುತ್ತಿರುವುದನ್ನು ಪತ್ತೆ ಮಾಡಿದ್ದಾರೆ.
ನಿಯಮ ಪಾಲನೆ ಕಡ್ಡಾಯ
ಹೋಂ ಸ್ಟೇ ಅಥವಾ ರೆಸಾರ್ಟ್ಗಳನ್ನು ಆರಂಭಿಸುವಾಗ ಪರವಾನಗಿ ನಿಯಮ ಹಾಗೂ ನಿಬಂಧನೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲದಿದ್ದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಅಥವಾ ಪರವಾನಗಿ ಪಡೆದೂ ಸಹ ನಿಯಮ, ನಿಬಂಧನೆ ಪಾಲಿಸದಿದ್ದಲ್ಲಿ ಅಂಥವರ ಪರವಾನಗಿ ರದ್ದು ಪಡಿಸಲಾಗುವುದು. ಯಾವುದೇ ವಿದೇಶಿ ಪ್ರಜೆಗಳು ಆಗಮಿಸಿದಾಗ ನಿಯಾಮಾನುಸಾರ ಅವರ ವಿಳಾಸ ಇನ್ನಿತರ ವಿವರ ಒಳಗೊಂಡ "ಾಮ್ರ್&ಸಿ'ಯನ್ನು ಎ್ಆರ್ಆರ್ಒ ಆನ್ಲೈನ್ ಮೂಲಕ ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು. ಆ ಮಾಹಿತಿಯನ್ನು ಸ್ಥಳಿಯ ಪೊಲೀಸ್ ಠಾಣೆಗೂ ನೀಡಬೇಕು. ಅಲ್ಲದೆ, ಹೋಂ ಸ್ಟೇ ಅಥವಾ ರೆಸಾರ್ಟ್ಗಳಲ್ಲಿ ವಾಸವಾಗಿರುವ ವಿದೇಶಿಗರ ಭದ್ರತೆಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರ (ಕಾನೂನು ಸುವಸ್ಥೆ) ಸೂಚನೆಯಂತೆ ಉಡುಪಿ ಜಿಲ್ಲೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಈವರೆಗೆ ಒಟ್ಟು 71 ಹೋಂ ಸ್ಟೇಗಳನ್ನು ಅಕ್ರಮವಾಗಿ ನಡೆಸುತ್ತಿರುವುದು ಕಂಡುಬಂದಿದೆ. ಅವುಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಗೆ ವರದಿ ನೀಡಲಾಗಿದೆ.