ಉಡುಪಿ ಜಿಲ್ಲೆಯಿಂದ ಗಡಿಪಾರು ಆದೇಶಕ್ಕೆ ಗುರಿಯಾದ ಆರೋಪಿತರು.
* ಆರೋಪಿಗಳ ವಿರುದ್ಧ ಒಟ್ಟು 30 ಪ್ರಕರಣ
ಉಡುಪಿ: ಜಿಲ್ಲೆಯ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮೊಹಮ್ಮದ್ ದಾನೀಶ್ ಮದನಿ (23), ಕರಾಣಿ ಮುಸೀನ್ (44) ಹಾಗೂ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಇಲಿಯಾಸ್ (36) ಎಂಬವರಿಗೆ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ವಿಶೇಷ ಕಾರ್ಯಾಂಗ ದಂಡಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಮ್ ಶಂಕರ್ ಗಡಿಪಾರು ಆದೇಶ ಹೊರಡಿಸಿದ್ದಾರೆ.
ಮೊಹಮ್ಮದ್ ದಾನೀಶ್ ಈತನ ವಿರುದ್ಧ 8 ವಿವಿಧ ಪ್ರಕರಣ, ಕರಾಣಿ ಮುಸೀನ್ ವಿರುದ್ಧ 7 ಪ್ರಕರಣ, ಇಲಿಯಾಸ್ ವಿರುದ್ಧ 15 ಪ್ರಕರಣಗಳು ದಾಖಲಾಗಿದ್ದು, ಆಯಾ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ತೆರೆಯಲಾಗಿದೆ.
ಗಡಿಪಾರು ಕ್ರಮಕ್ಕೆ ಒಳಗಾದವರ ವಿರುದ್ಧ ಕೊಲೆ, ಕೊಲೆಯತ್ನ, ಪೊಲೀಸ್ ಠಾಣೆಗೆ ಕಲ್ಲೆಸೆತ, ಕನ್ನ-ಕಳವು, ಜಾನುವಾರು ಕಳವು, ಜಾನುವಾರು ಹತ್ಯೆ, ರೌಡಿಸಂ ಸಹಿತ ಒಟ್ಟು 30 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.
ಮೊಹಮ್ಮದ್ ದಾನೀಶ್ನನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ, ಕರಾಣಿ ಮುಸೀನ್ನನ್ನು ಬೀದರ್ ಜಿಲ್ಲೆಯ ಗಾಂಧಿ ಗಂಜ ಪೊಲೀಸ್ ಠಾಣಾ ವ್ಯಾಪ್ತಿಗೆ ಮತ್ತು ಇಲಿಯಾಸ್ನನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ಒಂದು ವರ್ಷದ ಅವಧಿಯಲ್ಲಿ ಅಕ್ರಮ ಚಟುವಟಿಕೆ ಹಾಗೂ ರೌಡಿಸಂ ಮಟ್ಟಹಾಕುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ 3 ಆಸಾಮಿಗಳ ವಿರುದ್ಧ ಪಿಐಟಿ, ಎನ್ಡಿಪಿಎಸ್ ಕಾಯಿದೆ ಹಾಗೂ 4 ಜನರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಕಾರಾಗೃಹದಲ್ಲಿ ಇಡಲಾಗಿದೆ. ಅಲ್ಲದೆ, 14 ಜನರ ವಿರುದ್ಧ ಗಡಿಪಾರು ಕ್ರಮ ಕೈಗೊಳ್ಳಲಾಗಿದೆ.
— ಹರಿರಾಮ್ ಶಂಕರ್. ಜಿಲ್ಲಾ ಪೊಲೀಸ್ ವರಿಷ್ಠ.