ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ನ್ಯಾ.ಎಂ.ಪುರುಷೋತ್ತಮ್​ ಉದ್ಘಾಟಿಸಿದರು. ಎಂ.ಎ. ಗಫೂರ್​, ಅಬೀದ್​ ಗದ್ಯಾಳ್​, ರಾಜಶೇಖರ್​ ಬಿ. ಪುರಾಣಿಕ್​, ಡಾ. ಅಶೋಕ್​ ಕಾಮತ್​, ಇಂದ್ರಾಳಿ ಜಯಕರ್​ ಶೆಟ್ಟಿ, ಡಾ. ಅಮೃತಾ ಎ.ಎಸ್​., ಕೆ.ಕೀರ್ತಿಕುಮಾರ್​ ಇತರರಿದ್ದರು. 
ಉಡುಪಿ

ಪರಿಸರ ಸಂರಕ್ಷಣೆ ನಾಗರಿಕರ ಹೊಣೆ

ಪ್ರಶಾಂತ ಜಿ. ಭಾಗ್ವತ

* ನ್ಯಾಯಾಧೀಶ ಎಂ.ಪುರುಷೋತ್ತಮ್​ ಅನಿಸಿಕೆ

* ಜಿಲ್ಲಾ ಮಟ್ಟದ ವಿಶ್ವ ಪರಿಸರ ದಿನ ಉದ್ಘಾಟನೆ

ಉಡುಪಿ: ಮಾನವ ಸಂಕುಲದ ಉಳಿವಿಗೆ ಪ್ರಕೃತಿ ಹಾಗೂ ಜೀವವೈವಿಧ್ಯಗಳು ತನ್ನದೇ ರೀತಿಯಲ್ಲಿ ಕೊಡುಗೆ ನೀಡುತ್ತವೆ. ಹೀಗಾಗಿ ಎಲ್ಲ ಪ್ರಜ್ಞಾವಂತ ನಾಗರಿಕರು ನಿಷ್ಠೆಯಿಂದ ಪರಿಸರಕ್ಕೆ ಪೂರಕವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೂಲಕ ಪ್ರಕೃತಿ ಸಂರಕ್ಷಿಸುವ ಕೆಲಸ ಮಾಡಬೇಕು. ಪರಿಸರ ದಿನ ಆಚರಣೆ ಕಾರ್ಯಕ್ರಮಕ್ಕೆ ಸೀಮಿತವಾಗದೆ ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಹಿರಿಯ ಸಿವಿಲ್​ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಪುರುಷೋತ್ತಮ್​ ಅಭಿಪ್ರಾಯಪಟ್ಟರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್​ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಇಲಾಖೆ, ನಗರಸಭೆ, ಭಾರತ್​ ಸ್ಕೌಟ್ಸ್​ ಆ್ಯಡ್​ ಗೈಡ್ಸ್​ ಹಾಗೂ ಕೈಗಾರಿಕೆಗಳು ಉಡುಪಿ ಜಿಲ್ಲೆ ಆಶ್ರಯದಲ್ಲಿ ಶುಕ್ರವಾರ (ಜೂ.5) ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭೂಮಿ ರಕ್ಷಣೆಯ ಗುರಿ
ಕ.ರಾ.ಮಾ.ನಿ.ಮಂ. ಮಂಗಳೂರು ವಿಭಾಗೀಯ ಕಚೇರಿಯ ಹಿರಿಯ ಪರಿಸರ ಅಧಿಕಾರಿ ರಾಜಶೇಖರ್​ ಬಿ. ಪುರಾಣಿಕ್​ ಮಾತನಾಡಿ, ಪರಿಸರ ರಕ್ಷಣೆಗಾಗಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ವಿಶ್ವ ಪರಿಸರ ದಿನ ಆಚರಿಸಲಾಗುತ್ತದೆ. ಮಾನವ ಚಟುವಟಿಕೆಗಳಿಂದ ಪರಿಸರಕ್ಕೆ ಆಗುವ ಹಾನಿ ತಡೆಗಟ್ಟಿ ಭೂಮಿ ರಕ್ಷಿಸುವುದು ಆಚರಣೆಯ ಗುರಿಯಾಗಿದೆ. ತ್ಯಾಜ್ಯ ವಸ್ತುಗಳನ್ನು ಮೂಲದಲ್ಲಿಯೇ ಬೇರ್ಪಡಿಸಿ, ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್​ ವಸ್ತುಗಳ ಬಳಕೆಗೆ ಕಡಿವಾಣ ಹಾಕಬೇಕು ಎಂದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಡಾ. ಅಶೋಕ್​ ಕಾಮತ್​, ಭಾರತ್​ ಸ್ಕೌಟ್ಸ್​ ಆ್ಯಂಡ್​ ಗೈಡ್ಸ್​ನ ಜಿಲ್ಲಾ ಮುಖ್ಯ ಆಯುಕ್ತ ಇಂದ್ರಾಳಿ ಜಯಕರ್​ ಶೆಟ್ಟಿ ಮಾತನಾಡಿದರು. ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್​ ಅಧ್ಯಕ್ಷತೆ ವಹಿಸಿದ್ದರು.
ಮಣಿಪಾಲ ಎಂಐಟಿಯ ಅಧ್ಯಾಪಕರ ಕಲ್ಯಾಣಾಭಿವೃದ್ಧಿ ವಿಭಾಗದ ಸಹ ನಿರ್ದೇಶಕ ಡಾ.ರಾಘವೇಂದ್ರ ಕೆ. ಹೊಳ್ಳ ವಿಶೇಷ ಉಪನ್ಯಾಸ ನೀಡಿದರು. ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ್​ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಪ್ರತಿಜ್ಞಾವಿಧಿ ಬೋಧಿಸಿದರು. ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಆಯೋಜಿಸಲಾಗಿದ್ದ ಚಿತ್ರಕಲಾ ಸ್ಪರ್ಧೆ ಹಾಗೂ ರೀಲ್ಸ್​ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪರಿಸರಕ್ಕೆ ಪೂರಕವಾಗಿರುವ ಜೂಟ್​ ಬ್ಯಾಗ್​ಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು.
ಉಪ ಪರಿಸರ ಅಧಿಕಾರಿ ಡಾ. ಅಮೃತಾ ಎ.ಎಸ್​. ಸ್ವಾಗತಿಸಿದರು. ಕ.ರಾ.ಮಾ.ನಿ.ಮಂ. ಪ್ರಾದೇಶಿಕ ಕಚೇರಿಯ ಜಿಲ್ಲಾ ಪರಿಸರ ಅಧಿಕಾರಿ ಕೆ. ಕೀರ್ತಿಕುಮಾರ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಅವಿನಾಶ್​ ಕಾಮತ್​ ಕಾರ್ಯಕ್ರಮ ನಿರೂಪಿಸಿದರು. ಪರಿಸರ ಇಲಾಖೆಯ ಸಿಬ್ಬಂದಿ ರಾಜೇಶ್ವರಿ ವಂದಿಸಿದರು.

ಜಾಗೃತಿ ಜಾಥಾಕ್ಕೆ ಚಾಲನೆ

ಸಭಾ ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್​, ಹಿರಿಯ ಸಿವಿಲ್​ ನ್ಯಾಯಾಧೀಶ ಎಂ.ಪುರುಷೋತ್ತಮ್​, ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ್​ ಅವರು ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು. ಮಣಿಪಾಲ ಎಂ.ಜೆ.ಸಿ. ಕಾಲೇಜು ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿಯ ಅಟಲ್​ ಬಿಹಾರಿ ವಾಜಪೇಯಿ ಸಭಾಂಗಣದವರೆಗೆ ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿ ಜಾಥಾ ನಡೆಯಿತು. ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.
"

ಮನುಷ್ಯನಿಗೆ ಬದುಕಲು ಗಾಳಿ, ನೀರು, ಆಹಾರವನ್ನು ಉಚಿತವಾಗಿ ಪ್ರಕೃತಿ ನೀಡುತ್ತಿದೆ. ಆದರೆ, ನಮ್ಮ ಆಧುನಿಕ ಜೀವನ ಶೈಲಿಯ ಅವಶ್ಯಕತೆ ಪೂರೈಸಿಕೊಳ್ಳಲು ಆಧುನೀಕರಣ, ವ್ಯಾಪಾರೀಕರಣ, ಕೈಗಾರಿಕೀಕರಣ ಸೇರಿದಂತೆ ಅನೇಕ ರೀತಿಯಲ್ಲಿ ಪರಿಸರ ಮಾಲಿನ್ಯಕ್ಕೆ ಕಾರಣರಾಗಿದ್ದೇವೆ. ನಮ್ಮ ಜೀವನ ಶೈಲಿ ಬದಲಿಸಿಕೊಂಡು ಪ್ರಕೃತಿಯ ರಕ್ಷಣೆಗಾಗಿ ಪ್ರತಿಯೊಬ್ಬರೂ ಕೈಜೋಡಿಸಬೇಕು.

— ಎಂ.ಪುರುಷೋತ್ತಮ್​. ಹಿರಿಯ ಸಿವಿಲ್​ ನ್ಯಾಯಾಧೀಶ.