ಉಡುಪಿಯಲ್ಲಿ ವಿವಿಧ ಇಲಾಖೆಯ ಭಾಗೀದಾರರಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮವನ್ನು ನ್ಯಾ. ಮನು ಪಟೇಲ್ ಬಿ.ವೈ. ಉದ್ಘಾಟಿಸಿದರು. ನಾಗರತ್ನಾ ನಾಯಕ್, ಅನುರಾಧಾ ಹಾದಿಮನೆ, ಪ್ರೇಮಾನಂದ ಕಲ್ಮಾಡಿ, ಭಾನುಮತಿ ಉಪಸ್ಥಿತರಿದ್ದರು.
* ನ್ಯಾಯಾಧೀಶ ಮನು ಪಟೇಲ್ ಬಿ.ವೈ. ಸೂಚನೆ
* ಭಾಗೀದಾರರಿಗೆ ಜಿಲ್ಲಾ ಮಟ್ಟದ ತರಬೇತಿ
ಉಡುಪಿ: ದೇಶದ ಅತಿ ದೊಡ್ಡ ಕಾನೂನು ಬಾಹಿರ ಚಟುವಟಿಕೆಯಾಗಿ ಬೆಳೆಯುತ್ತಿರುವ ಮಾನವ ಕಳ್ಳ ಸಾಗಾಣಿಕೆ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕಿದೆ. ಅಂತಹ ಅಮಾನವೀಯ ಕೃತ್ಯಗಳಿಗೆ ಕಡಿವಾಣ ಹಾಕಲು ಕ್ಷೇತ್ರ ಮಟ್ಟದ ಅಧಿಕಾರಿಗಳು ಕಟ್ಟುನಿಟ್ಟಾಗಿ ಕಾನೂನು ಕ್ರಮ ಅನುಷ್ಠಾನ ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್ ಬಿ.ವೈ. ಸೂಚಿಸಿದರು.
ಉಡುಪಿ ಬ್ರಹ್ಮಗಿರಿಯ ಜಿಲ್ಲಾ ಬಾಲಭವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಭಾಗಿತ್ವದಲ್ಲಿ ಸೋಮವಾರ (ಫೆ.9) ಆಯೋಜಿಸಿದ್ದ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆ ಕುರಿತು ಕ್ಷೇತ್ರ ಮಟ್ಟದ ವಿವಿಧ ಇಲಾಖೆಯ ಭಾಗೀದಾರರಿಗೆ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜವಾಬ್ದಾರಿ ನಿಭಾಯಿಸಿ
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನಾ ನಾಯಕ್ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ನೇರವಾಗಿ ಗೋಚರಿಸುವ ಕಾರ್ಯವಲ್ಲ. ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ರಕ್ಷಣಾ ಸಮಿತಿ ರಚಿಸಲಾಗಿದೆ. ಅವರೊಂದಿಗೆ ವಿವಿಧ ಇಲಾಖೆಗಳು ತಮ್ಮ ಜವಾಬ್ದಾರಿ ಅರಿತು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕಿದೆ ಎಂದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅನುರಾಧಾ ಹಾದಿಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ನೇಟಿವ್ ಆರ್ಗನೈಜೇಷನ್ನ ವ್ಯವಸ್ಥಾಪಕ ಪ್ರೇಮಾನಂದ ಕಲ್ಮಾಡಿ, ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆ ಕುರಿತ ಕ್ರಮಬದ್ಧ ಕಾರ್ಯವಿಧಾನದ ಕುರಿತು ಹಾಗೂ ವಕೀಲೆ ಭಾನುಮತಿ ಅವರು 'ಇಮ್ಮೋರಲ್ ಟ್ರಾಫಿಕಿಂಗ್ ಪ್ರಿವೆನ್ಶನ್ ಆ್ಯಕ್ಟ್- 1956 ಕಾಯಿದೆ' ಕುರಿತು ಮಾಹಿತಿ ನೀಡಿದರು.
ಜೀತ ಪದ್ಧತಿ ನಿಮೂರ್ಲನಾ ದಿನದ ಅಂಗವಾಗಿ ಪ್ರಮಾಣ ವಚನ ಸ್ವೀಕರಿಸಲಾಯಿತು. ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ವಿವಿಧ ಇಲಾಖೆಗಳ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಜೆಂಡರ್ ಸ್ಪೆಷಲಿಸ್ಟ್ ದೀಪಾ ಕಾರ್ಯಕ್ರಮ ನಿರ್ವಹಿಸಿದರು.
ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಸೇರಿದಂತೆ ಇನ್ನಿತರ ಕಾನೂನು ಬಾಹಿರ ಚಟುವಟಿಕೆ ನಡೆದರೂ ಮೌನವಹಿಸಿದೆ ಅಂತಹ ದುಷತ್ಯ ತಪ್ಪಿಸುವುದು ಭಾಗೀದಾರ ಇಲಾಖೆಗಳ ಕರ್ತವ್ಯವಾಗಿದೆ. ಅಲ್ಲದೆ, ಪ್ರತಿ ನಾಗರಿಕರ ಬದ್ಧತೆಯಾಗಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸ್ ಇಲಾಖೆ ಸಮನ್ವಯದಿಂದ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ದುರ್ಬಲ ಸ್ಥಿತಿಯಲ್ಲಿರುವ ಕುಟುಂಬ ವಾಸಿಸುತ್ತಿದ್ದಲ್ಲಿ ಅವರ ಮೇಲೆ ನಿಗಾ ವಹಿಸಬೇಕು.