ಉಡುಪಿಯ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ನಾಗರಾಜ್​ ವಿ. ನಾಯಕ್​, ವಸಂತ ಕಿಣಿ, ಸೀತಾರಾಮ್​ ಶೆಟ್ಟಿ, ಮಂಹಾತೇಶ್​ ಹಂಗರಗಿ, ಅಮ್ಮುಂಜೆ ಪ್ರಭಾಕರ್​ ನಾಯಕ್​, ಹರೀಶ್​ ಕುಂದರ್​ ಇತರರಿದ್ದರು. 
ಉಡುಪಿ

ಯುವ ಸಮುದಾಯಕ್ಕೆ ನೀಡಿ ಕೌಶಲ ತರಬೇತಿ

* ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಸೂಚನೆ 

* ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆ

ಉಡುಪಿ: ಕೈಗಾರಿಕೆಗಳ ಸ್ಥಾಪನೆಯಿಂದ ರಾಜ್ಯದ ಆರ್ಥಿಕ ಪ್ರಗತಿಯೊಂದಿಗೆ ಸ್ಥಳೀಯರಿಗೆ ಉದ್ಯೋಗ ಅವಕಾಶ ಲಭ್ಯವಾಗುತ್ತದೆ. ಹೀಗಾಗಿ ಕೈಗಾರಿಕಾ ತರಬೇತಿ ಸಂಸ್ಥೆಗಳು ಜಿಲ್ಲೆಯಲ್ಲಿರುವ ಕೈಗಾರಿಕಾ ಘಟಕಗಳಲ್ಲಿ ಯುವಸಮುದಾಯಕ್ಕೆ ವೃತ್ತಿ ಕೈಗೊಳ್ಳಲು ಅವಶ್ಯವಿರುವ ಕೌಶಲ ತರಬೇತಿ ನೀಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚನೆ ನೀಡಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ (ಜೂ.16) ಆಯೋಜಿಸಿದ್ದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ, ಕೈಗಾರಿಕಾ ಸ್ಪಂದನ ಹಾಗೂ ಜಿಲ್ಲಾ ಮಟ್ಟದ ರಫ್ತು ಉತ್ತೇಜನ ಸಮಿತಿಯ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದರು.

ಕೌಶಲ ಕೋರ್ಸ್​ ಆರಂಭಿಸಿ

ಜಿಲ್ಲೆಯಲ್ಲಿ ಸಣ್ಣ, ಮಧ್ಯಮ ಹಾಗೂ ಬೃಹತ್​ ಕೈಗಾರಿಕಾ ಘಟಕ ಸ್ಥಾಪನೆಯಾದರೆ ಸ್ಥಳೀಯರಿಗೇ ಉದ್ಯೋಗ ದೊರೆಯುತ್ತವೆ. ಉದ್ಯೋಗ ಹುಡುಕಿ ಹೊರ ಜಿಲ್ಲೆಗೆ ತೆರಳುವುದೂ ಕಡಿಮೆಯಾಗುತ್ತದೆ. ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ಮೂಲಸೌಕರ್ಯಕ್ಕೆ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿರುವ ಐಟಿಐ, ಡಿಪ್ಲೊಮಾ, ಜಿಟಿಟಿಸಿ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಕೈಗಾರಿಕೆಗಳಿಗೆ ಅಗತ್ಯವಿರುವ ತರಬೇತಿ ಕೋರ್ಸ್​ಗಳನ್ನು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿಯೇ ಪ್ರಾರಂಭಿಸಬೇಕು. ಇಲ್ಲಿನ ವಿದ್ಯಾರ್ಥಿಗಳಿಗೆ ಇಂಟರ್ನಶಿಪ್​ಗೆ ಅವಕಾಶ ಕಲ್ಪಿಸಬೇಕು. ಡಾ. ಸರೋಜಿನಿ ಮಹಿಷಿ ವರದಿಯಂತೆ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದರು.
ಶಿವಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಘಟಕದ ಕೆಲವು ಚಟುವಟಿಕೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದಾರೆ. ರೆಡಿ ಮಿಕ್ಸ್​ ಕಾಂಕ್ರೀಟ್​ ಘಟಕ ಸ್ಥಾಪನೆಯ ಅರ್ಜಿಯೇ ಹೆಚ್ಚಿದ್ದು ಮಾನ್ಯತೆ ನೀಡುವ ಮೊದಲು ಸುತ್ತಮುತ್ತಲಿನ ಇನ್ನಿತರ ಘಟಕಗಳಿಗೆ ತೊಂದರೆಯಾಗಲಿದೆಯೆ ಎಂದು ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಡಿಸಿ ಸಲಹೆ ನೀಡಿದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್​ ವಿ. ನಾಯಕ್​, ಸಣ್ಣ ಕೈಗಾರಿಕಾ ಸಂಘದ ಜಿಲ್ಲಾಧ್ಯಕ್ಷ ವಸಂತ ಕಿಣಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸೀತಾರಾಮ್​ ಶೆಟ್ಟಿ, ನಗರಸಭಾ ಆಯುಕ್ತ ಮಂಹಾತೇಶ್​ ಹಂಗರಗಿ, ಛೇಂರ್ಬಸ್​ ಆಫ್​ ಕಾಮರ್ಸ್​ನ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ್​ ನಾಯಕ್​, ಕಾಸಿಯಾ ಪ್ರತಿನಿಧಿ ಹರೀಶ್​ ಕುಂದರ್​, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ಸಣ್ಣ ಕೈಗಾರಿಕಾ ಉದ್ದಿಮೆದಾರರು ಉಪಸ್ಥಿತರಿದ್ದರು.

ತ್ವರಿತವಾಗಲಿ ಭೂಸ್ವಾಧಿನ ಪ್ರಕ್ರಿಯೆ

ಹೆಬ್ರಿ ತಾಲೂಕಿನ ಶಿವಪುರದಲ್ಲಿ 74.84 ಎಕರೆ, ಕೆರೆಬೆಟ್ಟುವಿನಲ್ಲಿ 38.75 ಎಕರೆ, ಕಾರ್ಕಳದ ನಿಟ್ಟೆಯಲ್ಲಿ 50.42 ಎಕರೆ ಹಾಗೂ ಬ್ರಹ್ಮಾವರ ತಾಲೂಕಿನ ಉಪ್ಪೂರಿನಲ್ಲಿ 101.19 ಎಕರೆ ಪ್ರದೇಶದಲ್ಲಿ ಹೊಸ ಕೈಗಾರಿಕಾ ಪ್ರದೇಶ ನಿರ್ಮಿಸಲಾಗುತ್ತಿದೆ. ಅದಕ್ಕೆ ಬೇಕಾದ ಭೂಸ್ವಾಧಿನ ಸೇರಿದಂತೆ ಅಗತ್ಯ ಪ್ರಕ್ರಿಯೆಗಳನ್ನು ತ್ವರಿತವಾಗಿ ಆರಂಭಿಸಬೇಕು. ಜಿಲ್ಲೆಯಲ್ಲಿ ಕೈಗಾರಿಕಾ ಘಟಕ ಸ್ಥಾಪನೆಗೆ ನಿವೇಶನ ಹಂಚಿಕೆಯಾಗಿ ಮೂರ್ನಾಲ್ಕು ವರ್ಷ ಕಳೆದರೂ ಪೂರ್ಣ ಪ್ರಮಾಣದಲ್ಲಿ ಉದ್ದಿಮೆದಾರರು ಉದ್ದಿಮೆ ಪ್ರಾರಂಭಿಸಿಲ್ಲ. ಪ್ರತಿ ಸಭೆಯಲ್ಲಿಯೂ ಕಾಲಾವಕಾಶ ಕೋರಿ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಇದು ಸರಿಯಲ್ಲ. ನಿವೇಶನ ಪಡೆದವರು ಎರಡು ತಿಂಗಳೊಳಗಾಗಿ ಘಟಕ ಸ್ಥಾಪಿಸದಿದ್ದಲ್ಲಿ ಇತರರಿಗೆ ಹಂಚಿಕೆ ಮಾಡಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದರು.
"

ಜಿಲ್ಲೆಯಲ್ಲಿ 37 ಸಣ್ಣ ಪ್ರಮಾಣದ ಕೈಗಾರಿಕೆಗಳಲ್ಲಿ ಶೇ.91.8ರಷ್ಟು, 47 ಮಧ್ಯಮ ಪ್ರಮಾಣದ ಕೈಗಾರಿಕೆಗಳಲ್ಲಿ ಶೇ.95.1ರಷ್ಟು ಹಾಗೂ 7 ಬೃಹತ್​ ಕೈಗಾರಿಕೆಗಳಲ್ಲಿ ಶೇ. 92.4ರಷ್ಟು ಸೇರಿದಂತೆ ಒಟ್ಟು 91 ಘಟಕಗಳಲ್ಲಿ ಶೇ.93.7ರಷ್ಟು, ಉದ್ಯೋಗ ಕಲ್ಪಿಸಲಾಗಿದೆ. ಮರೈನ್​ ಪ್ರಾಡಕ್ಟ್​, ಕ್ಯಾಶ್ಯೂ ನಟ್​, ಕಾಫಿ ಬೀನ್​ ಸೇರಿದಂತೆ 9 ಉತ್ಪನ್ನಗಳು ಹೆಚ್ಚು ರಫ್ತಾಗಿದ್ದು 2,593 ಕೋಟಿ ರೂ. ವಹಿವಾಟು ನಡೆದಿದೆ. ಜಿಲ್ಲೆಯಿಂದ ಇನ್ನಷ್ಟು ಹೆಚ್ಚು ಪ್ರಮಾಣದಲ್ಲಿ ರಫ್ತು ನಡೆಯಲು ಉತ್ತೇಜನ ನೀಡಬೇಕು.

— ಸ್ವರೂಪಾ ಟಿ.ಕೆ. ಉಡುಪಿ ಜಿಲ್ಲಾಧಿಕಾರಿ.