ಉಡುಪಿಯಲ್ಲಿ ಆಯೋಜಿಸಿದ್ದ ಡಾ. ಅಂಬೇಡ್ಕರ್​ ಜಯಂತಿ ಕಾರ್ಯಕ್ರಮವನ್ನು ಯಶ್​ಪಾಲ್​ ಸುವರ್ಣ ಉದ್ಘಾಟಿಸಿದರು. ಎಂ.ಎ. ಗಫೂರ್​, ಸ್ವರೂಪಾ ಟಿ.ಕೆ., ಪ್ರೊ. ಎಂ.ಬಾಲಕೃಷ್ಣ ಶೆಟ್ಟಿ, ಪ್ರತಿಕ್​ ಬಾಯಲ್​, ಹರಿರಾಂ ಶಂಕರ್​ ಇದ್ದರು. 
ಉಡುಪಿ

ಸಹಬಾಳ್ವೆಯ 'ಸಂವಿಧಾನ' ನೀಡಿದ ಭಾರತ ರತ್ನ

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಬಣ್ಣನೆ

* ಜಿಲ್ಲಾ ಮಟ್ಟದ ಡಾ.ಅಂಬೇಡ್ಕರ್​ ಜಯಂತಿ

ಉಡುಪಿ: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತಕ್ಕೆ ವಿಸ್ತೃತ ಸಂವಿಧಾನ ರಚಿಸಿದ ಸಂವಿಧಾನ ಶಿಲ್ಪಿ ಡಾ. ಭೀಮರಾವ್​ ಅಂಬೇಡ್ಕರ್​ ಅವರ ಜೀವನವೇ ನಮಗೆಲ್ಲರಿಗೂ ಆದರ್ಶ. ದೇಶದಲ್ಲಿ ಎಲ್ಲರೂ ಸಹಬಾಳ್ವೆಯಿಂದ ಬದುಕುತ್ತಿದ್ದರೆ ಅದಕ್ಕೆ ಬಾಬಾ ಸಾಹೇಬರ ಸಂವಿಧಾನ ಕಾರಣ. ಸಂಘರ್ಷಗಳ ಮಧ್ಯೆಯೂ ಸಾಧನೆ ಮಾಡಿ ಸಮಾನತೆಯ ದಾರಿದೀಪ ತೋರಿದ, ಸಮ ಸಮಾಜ ನಿರ್ಮಿಸಿದ ಅವರನ್ನು ನಿತ್ಯ ಸ್ಮರಿಸೋಣ ಎಂದು ಶಾಸಕ ಯಶ್​ಪಾಲ್​ ಸುವರ್ಣ ಕರೆ ನೀಡಿದರು.
ಉಡುಪಿಯ ಜಿಪಂ ಕಚೇರಿಯ ಅಟಲ್​ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ, ಸಮಾಜ ಕಲ್ಯಾಣ ಇಲಾಖೆ, ಪ.ಜಾತಿ, ಪ.ಪಂಗಡ ಸಂಘಟನೆಗಳ ಸಹಭಾಗಿತ್ವದಲ್ಲಿ ಮಂಗಳವಾರ (ಏ.14) ಆಯೋಜಿಸಿದ್ದ ಭಾರತ ರತ್ನ ಡಾ. ಬಿ.ಆರ್​. ಅಂಬೇಡ್ಕರ್​ ಅವರ 135ನೇ ಜನ್ಮದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನ ಬಲಿಷ್ಠಗೊಳಿಸೋಣ

ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್​ ಮಾತನಾಡಿ, ಅಂಬೇಡ್ಕರ್​ ಎಂದರೆ ಶಕ್ತಿ. ಎಲ್ಲಿಯೂ ಪಡೆಯಲಾಗದ ಮಾಣಿಕ್ಯ. ಮಹಾತ್ಮ ಗಾಂಧಿ, ಜವಾಹರಲಾಲ್​ ನೆಹರು, ಸರ್ದಾರ್​ ವಲ್ಲಭ ಭಾಯ್​ ಪಟೇಲ್​ ಅವರೊಂದಿಗೆ ಸರಿಸಮನಾಗಿ ದೇಶದ ಏಳಿಗೆಗಾಗಿ ದುಡಿದರು. ಕಾನೂನು ಸಚಿವರಾಗಿ ಅಂದು ರೂಪಿಸಿದ್ದ ಕಾನೂನುಗಳು ನಮಗೆ ಇಂದಿಗೂ ಬಲ ನೀಡುತ್ತಿವೆ. ಅವರು ರಚಿಸಿರುವ ಪವಿತ್ರ ಸಂವಿಧಾನ ಬಲಿಷ್ಠಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ದೇಶದ ಧರ್ಮಗ್ರಂಥ ಸಂವಿಧಾನ

ನಿವೃತ್ತ ಪ್ರಾಂಶುಪಾಲ ಪ್ರೊ. ಎಂ.ಬಾಲಕೃಷ್ಣ ಶೆಟ್ಟಿ ಉಪನ್ಯಾಸ ನೀಡಿ, ಅಂಬೇಡ್ಕರ್​ರು ರಚಿಸಿರುವ ಸಂವಿಧಾನವನ್ನು ದೇಶದ ಧರ್ಮಗ್ರಂಥ ಎಂದು ಕರೆಯಬಹುದು. ದೇಶದ ನಾಗರಿಕರಿಗಷ್ಟೇ ಅಲ್ಲದೆ, ಗಿಡ-ಮರ, ಪ್ರಾಣಿ-ಪಕ್ಷಿಗಳಿಗೂ ಸಂವಿಧಾನಬದ್ಧ ಹಕ್ಕು ನೀಡಿದ್ದಾರೆ. ಎಲ್ಲರಿಗೂ ಸಮಾನತೆ ಒದಗಿಸಿದ್ದಾರೆ ಎಂದರು.
ವೇದಿಕೆಯಲ್ಲಿ ಜಿಪಂ ಸಿಇಒ ಪ್ರತೀಕ್​ ಬಾಯಲ್​, ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಂ ಶಂಕರ್​, ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಉಪಸ್ಥಿತರಿದ್ದರು.
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣ ಸ್ವಾಮಿ ಸ್ವಾಗತಿಸಿದರು. ಕಾಪು ತಾಲೂಕು ಸಮಾಜ ಕಲ್ಯಾಲ್ಯಾಣ ಇಲಾಖೆಯ ಅಧಿಕಾರಿ ಬಸವರಾಜ್​ ವಂದಿಸಿದರು. ಪ್ರಶಾಂತ್​ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು. 

ಬುದ್ಧ ವಂದನೆ, ಸಾಧಕರಿಗೆ ಸನ್ಮಾನ

ಸಭಾ ಕಾರ್ಯಕ್ರಮಕ್ಕೂ ಮುನ್ನ ಡಾ. ಬಿ.ಆರ್​. ಅಂಬೇಡ್ಕರ್​ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು. ಅಂಬೇಡ್ಕರ್​ ಪುತ್ಥಳಿ ಮುಂಭಾಗದಲ್ಲಿ ಶಾಸಕ ಯಶ್​ಪಾಲ್​ ಸುವರ್ಣ ದೀಪ ಬೆಳಗುವ ಮೂಲಕ ಬುದ್ಧ ವಂದನೆ ಕಾರ್ಯಕ್ರಮ ನೆರವೇರಿಸಿದರು. ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಹಿರಿಯ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಅಲ್ಲದೆ, ಸಾಂಪ್ರದಾಯಿಕ ಚರ್ಮ ಕುಶಲಕರ್ಮಿ ಪಾಂಚಾಲಿ ಅವರನ್ನು ಗೌರವಿಸಲಾಯಿತು.
"

ಬಾಬಾ ಸಾಹೇಬರು ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಸ್ವಾತಂತ್ರ್ಯಕ್ಕೆ ಅಡಿಪಾಯ ಹಾಕಿದವರು. ಮಹಿಳೆ ಇಂದು ಇಷ್ಟೆಲ್ಲ ಸಾಧನೆ ಮಾಡಲು ಅವಕಾಶ ಮಾಡಿಕೊಟ್ಟವರು. ತಮ್ಮ ಆಳವಾದ ಅಧ್ಯಯನದಿಂದ ದೇಶಕ್ಕೆ ಶ್ರೇಷ್ಠ ಸಂವಿಧಾನದ ರಚಿಸಿದರು. ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಅವರ ಮೂಲ ಮಂತ್ರವಾಗಿತ್ತು. ಕಷ್ಟಗಳನ್ನು ಮೆಟ್ಟಿನಿಂತು ಅಂಬೇಡ್ಕರ್​ರಂತೆ ಸಾಧಿಸುವ ಆತ್ಮವಿಶ್ವಾಸ ಬೆಳೆಸಿಕೊಳ್ಳೋಣ.