ಉಡುಪಿಯಲ್ಲಿ ನಡೆದ ಜಿಲ್ಲಾ ಲೀಡ್​ ಬ್ಯಾಂಕ್​ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತೀಕ್​ ಬಾಯಲ್​ ಮಾತನಾಡಿದರು. ಮಹಾಮಾಯಪ್ರಸಾದ್​, ನಿಶಾ ಠಾಕೂರ್​, ಸಂಗೀತಾ ಕೆ., ಹರೀಶ್​ ಜಿ. ಇತರರಿದ್ದರು. 
ಉಡುಪಿ

ಸಣ್ಣ, ಮಧ್ಯಮ ಕೈಗಾರಿಕೆಗೆ ನೀಡಿ ಪ್ರೋತ್ಸಾಹ

* ಜಿಪಂ ಸಿಇಒ ಪ್ರತೀಕ್​ ಬಾಯಲ್​ ಸೂಚನೆ

ಜಿಲ್ಲಾ ಲೀಡ್​ ಬ್ಯಾಂಕ್​ ಪ್ರಗತಿ ಪರಿಶೀಲನಾ ಸಭೆ

ಉಡುಪಿ: ಜಿಲ್ಲೆಯ ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಿಗಳಿಗೆ ವಿಶ್ವಾಸ ಹೆಚ್ಚಿಸುವ ಕೆಲಸ ಇಲಾಖೆಗಳಿಂದ ಆಗಬೇಕು. ಜತೆಗೆ ಬ್ಯಾಂಕ್​ಗಳೂ ಸಹ ಸೂಕ್ತ ಆರ್ಥಿಕ ನೆರವು ನೀಡುವ ಮೂಲಕ ಉದ್ಯಮ ಅಭಿವೃದ್ಧಿಗೊಂಡು, ಹೆಚ್ಚಿನ ಉದ್ಯೋಗ ಅವಕಾಶ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಗಳಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದು ಅಧಿಕಾರಿಗಳಿಗೆ ಜಿಪಂ ಸಿಇಒ ಪ್ರತೀಕ್​ ಬಾಯಲ್​ ಸೂಚನೆ ನೀಡಿದರು.
ಉಡುಪಿಯ ಜಿಪಂನ ಡಾ. ವಿ.ಎಸ್​. ಆಚಾರ್ಯ ಸಭಾಂಗಣದಲ್ಲಿ ಸೋಮವಾರ (ಜೂ.22) ಆಯೋಜಿಸಿದ್ದ ಉಡುಪಿ ಜಿಲ್ಲಾ ಲೀಡ್​ ಬ್ಯಾಂಕ್​ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ನೋಂದಣಿ ಮಾಡಿಸಿ
ಜಿಲ್ಲೆಯಲ್ಲಿ 15 ಸಾವಿರಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ಹೆಚ್ಚಿನದಾಗಿ ಗೋಡಂಬಿ ಸಂಸ್ಕರಣಾ ಘಟಕ, ಮರೈನ್​ ಪ್ರಾಡಕ್ಟ್​, ಸಿದ್ಧ ಆಹಾರ ಘಟಕ ಸೇರಿದಂತೆ ವಿವಿಧ ಕೈಗಾರಿಕೆಗಳಿವೆ. ಅವುಗಳ ಮಾಲೀಕರಿಗೆ ಆರ್ಥಿಕ ನೆರವು ಬೇಕಿದ್ದಲ್ಲಿ ಎಂಎಸ್​ಎಂಇ ಯಲ್ಲಿ ನೋಂದಣಿ ಮಾಡಿಸಬೇಕು. ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಸರಿಯಾದ ಸಹಕಾರ ಬ್ಯಾಂಕ್​ಗಳಿಂದ ಸಿಗುತ್ತಿಲ್ಲ ಎಂಬ ದೂರುಗಳಿದ್ದು, ಎಚ್ಚರವಹಿಸಬೇಕು. ಮಹಿಳಾ ಸಂಘಗಳು ಸ್ವಯಂ ಉದ್ಯೋಗಕ್ಕಾಗಿ ಸಾಲ ಕೇಳಿದಾಗ ಅಗತ್ಯ ನೆರವು ಕಲ್ಪಿಸಬೇಕು ಎಂದರು.

ಸರ್ಕಾರಿ ಯೋಜನೆ ತಲುಪಿಸಿ

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಬ್ಯಾಂಕ್​ಗಳ ಪಾತ್ರ ಮಹತ್ವದ್ದಾಗಿದೆ. ಸರ್ಕಾರದ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಬ್ಯಾಂಕ್​ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಬೇಕು. ಅರ್ಜಿ ಸಲ್ಲಿಸುವಾಗ ತಾಂತ್ರಿಕ ಸಮಸ್ಯೆಯಿದ್ದಲ್ಲಿ ಸರಿಪಡಿಸಿ ಅವಶ್ಯಕತೆ ಇರುವವರಿಗೆ ಆದ್ಯತೆಯ ಮೇಲೆ ಆರ್ಥಿಕ ನೆರವು ಒದಗಿಸಬೇಕು ಎಂದರು.

ವಾರ್ಷಿಕ ಗುರಿಯಲ್ಲಿ ಸಾಧನೆ

ಕೆನರಾ ಬ್ಯಾಂಕ್​ ಪ್ರಾದೇಶಿಕ ಕಚೇರಿಯ ಉಪ ಮಹಾಪ್ರಬಂಧಕ ಮಹಾಮಾಯಪ್ರಸಾದ್​ ಮಾತನಾಡಿ, ಕಳೆದ ಸಾಲಿನಲ್ಲಿ ಜಿಲ್ಲೆಗೆ ಆದ್ಯತೆಯ ಮತ್ತು ಆದ್ಯತೆಯೇತರ ವಲಯಗಳಿಗೆ ಒಟ್ಟಾರೆಯಾಗಿ 15,514.08 ಕೋಟಿ ರೂ. ವಾರ್ಷಿಕ ಕ್ರೆಡಿಟ್​ ಯೋಜನೆ ಗುರಿ ನಿಗದಿಪಡಿಸಲಾಗಿದೆ. 2026ರ ಮಾರ್ಚ್​ ಅಂತ್ಯದವರೆಗೆ 17,191.28 ಗುರಿ ಸಾಧಿಸಿ, ಶೇ. 110.81 ಸಾಧನೆ ಮಾಡಲಾಗಿದೆ. ಕೃಷಿ ವಲಯದಲ್ಲಿ 4230.28 ನಿಗದಿತ ಗುರಿಗೆ 4738.22 ಗುರಿ ಸಾಧಿಸಿ ಶೇ.112.01, ಎಂಎಸ್​ಎಂಇ ವಲಯಕ್ಕೆ 3712.58 ನಿಗದಿತ ಗುರಿಗೆ 3709.94 ಗುರಿ ಸಾಧಿಸಿ ಶೇ.99.93ರಷ್ಟು, ಶಿಕ್ಷಣ ವಲಯದಲ್ಲಿ 187.07 ನಿಗದಿತ ಗುರಿಗೆ 168.75 ಗುರಿ ಸಾಧಿಸಿ ಶೇ.90.21ರಷ್ಟು, ವಸತಿ ಕ್ಷೇತ್ರಗಳಿಗೆ 510 ನಿಗದಿತ ಗುರಿಗೆ 270.92 ಗುರಿ ಸಾಧಿಸಿ ಶೇ.53.12ರಷ್ಟು, ಇನ್ನಿತರ ಕ್ಷೇತ್ರಗಳಿಗೆ 395.31 ನಿಗದಿತ ಗುರಿಗೆ 407.77 ಗುರಿ ಸಾಧಿಸಿ ಶೇ.103.15, ಆದ್ಯತೇತರ ವಲಯಗಳಿಗೆ 6474.31 ನಿಗದಿತ ಗುರಿಗೆ 7890.36 ಗುರಿ ಸಾಧಿಸಿ ಶೇ.121.87ರಷ್ಟು ಸಾಧನೆ ಮಾಡಲಾಗಿದೆ ಎಂದು ವಿವರಿಸಿದರು.
ಸಭೆಯಲ್ಲಿ ಆರ್​ಬಿಐ ಎಜಿಎಂ ನಿಶಾ ಠಾಕೂರ್​, ನಬಾರ್ಡ್​ನ ಡಿಡಿಎಂ ಸಂಗೀತಾ ಕೆ., ಜಿಲ್ಲಾ ಲೀಡ್​ ಬ್ಯಾಂಕ್​ ಮೆನೇಜರ್​ ಹರೀಶ್​ ಜಿ., ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ಬ್ಯಾಂಕ್​ಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ 104.7 ಕೋಟಿ ರೂ. ಸಾಲ ವಿತರಣೆ

ಜಿಲ್ಲೆಯಲ್ಲಿ ಕಳೆದ ವರ್ಷ ಸಾಲ ಮತ್ತು ಠೇವಣಿ ಅನುಪಾತ ಶೇ.48.99 ಇದ್ದು, ರಿಸರ್ವ್​ ಬ್ಯಾಂಕ್​ ಮಾರ್ಗಸೂಚಿಯಂತೆ ಕನಿಷ್ಠ ಶೇ.60 ಇರಬೇಕಿದೆ. ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಆದಷ್ಟು ಸೌಲಭ್ಯ ಕಲ್ಪಿಸಬೇಕು. ಪಿಎಂಎಫ್​ಎಂಇ ಯೋಜನೆಯಡಿ 516 ಫಲಾನುಭವಿಗಳಿಗೆ 59.34 ಕೋಟಿ ರೂ. ಹಾಗೂ ಪಿಎಂಎಸ್​ಜಿಎಂಬಿವೈ ಅಡಿಯಲ್ಲಿ ಕಳೆದ ಸಾಲಿನಲ್ಲಿ ಬ್ಯಾಂಕ್​ಗಳಿಗೆ 837 ಅರ್ಜಿ ಸಲ್ಲಿಕೆಯಾಗಿದ್ದು, 229 ಅರ್ಜಿ ತಿರಸತಗೊಂಡು 558 ಫಲಾನುಭವಿಗಳಿಗೆ 8.20 ಕೋಟಿ ರೂ. ಆರ್ಥಿಕ ನೆರವು ಮಂಜೂರು ಮಾಡಲಾಗಿದೆ. ಪಿಎಂ ವಿಶ್ವಕರ್ಮ ಯೋಜನೆಯಡಿ ಏಪ್ರಿಲ್​ವರೆಗೆ 5,889 ಅರ್ಜಿ ಸ್ವೀಕೃತವಾಗಿದ್ದು, 4,079 ಫಲಾನುಭವಿಗಳಿಗೆ 37.16 ಕೋಟಿ ರೂ. ಸಾಲ ವಿತರಣೆ ಆಗಿರುವ ಮಾಹಿತಿ ಸಭೆಯಲ್ಲಿ ತಿಳಿದುಬಂತು.
"

ಹವಾಮಾನಾಧಾರಿತ ಬೆಳೆ ವಿಮೆ ನೋಂದಣಿಗೆ ರೈತರಿಗೆ ಸಾಕಷ್ಟು ಕಾಲಾವಕಾಶ ಕಲ್ಪಿಸಿ, ಈ ಬಗ್ಗೆ ಅರಿವು ಮೂಡಿಸಿ, ನಷ್ಟವಾದಾಗ ಹೆಚ್ಚಿನ ರೈತರು ಪ್ರಯೋಜನ ಪಡೆಯುವಂತಾಗಬೇಕು. ತಾಂತ್ರಿಕ ಸಮಸ್ಯೆ ಕಂಡುಬಂದಲ್ಲಿ ಕೂಡಲೇ ಬಗೆಹರಿಸಿ, ವಿಮಾ ಕಂತು ತುಂಬಲು ರೈತರಿಗೆ ಅವಕಾಶ ಕಲ್ಪಿಸಬೇಕು.

— ಪ್ರತೀಕ್​ ಬಾಯಲ್​. ಜಿಪಂ ಸಿಇಒ.