ಉಡುಪಿಯಲ್ಲಿ ನಡೆದ ಸಭೆಯಲ್ಲಿ ಯು.ಟಿ. ಖಾದರ್ ಮಾತನಾಡಿದರು. ಯಶ್ಪಾಲ್ ಸುವರ್ಣ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಎ. ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಎಂ.ಎ. ಗಫೂರ್, ಸ್ವರೂಪಾ ಟಿ.ಕೆ., ಪ್ರತೀಕ್ ಬಾಯಲ್ ಇತರರಿದ್ದರು.
* ಅಧಿಕಾರಿಗಳಿಗೆ ಸಚಿವ ಯು.ಟಿ. ಖಾದರ್ ಸೂಚನೆ
* ಜಿಪಂ ಕಚೇರಿಯಲ್ಲಿ ವಿಪತ್ತು ನಿರ್ವಹಣಾ ಸಭೆ
ಉಡುಪಿ: ಮುಂಬರುವ ದಿನದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು ನೆರೆ, ಸಿಡಿಲು ಬಡಿತದಿಂದ ಹಾನಿ ಸೇರಿದಂತೆ ಇನ್ನಿತರ ಜೀವಾಪಾಯದ ಅವಘಡ ಸಂಭವಿಸಬಹುದು. ಆ ವೇಳೆಯಲ್ಲಿ ಕೂಡಲೇ ಗ್ರಾಮ ಲೆಕ್ಕಾಧಿಕಾರಿಗಳು, ಪಿಡಿಒಗಳು ಸ್ಥಳಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ನೀಡಬೇಕು. ನಿಯಮಾನುಸಾರ ಸರ್ಕಾರದಿಂದ ಸಿಗುವ ಪರಿಹಾರವನ್ನೂ ಕೊಡಬೇಕು. ಯಾರೂ ಬರಲಿಲ್ಲ ಎಂಬ ಭಾವನೆ ಬರದಂತೆ ಎಚ್ಚರ ವಹಿಸಬೇಕು. ಪ್ರಾಕೃತಿಕ ವಿಕೋಪ ಎದುರಿಸಲು ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ನೂತನ ಉಸ್ತುವಾರಿ ಸಚಿವ ಯು.ಟಿ. ಖಾದರ್ ಫರೀದ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಉಡುಪಿ ಜಿಪಂ ಕಚೇರಿಯ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಶನಿವಾರ (ಜು.4) ಸಂಜೆ ಆಯೋಜಿಸಿದ್ದ ವಿಪತ್ತು ನಿರ್ವಹಣಾ ಸಭೆಯಲ್ಲಿ ಮಳೆಯಿಂದ ಆಗಿರುವ ಹಾನಿ ಹಾಗೂ ಕುಡಿಯುವ ನೀರಿನ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಮಳೆ ಸೇರಿದಂತೆ ಪ್ರಕೃತಿ ವಿಕೋಪಗಳಿಂದ ತೊಂದರೆ ಉಂಟಾದ ಕುಟುಂಬಕ್ಕೆ ತುರ್ತಾಗಿ 5 ಸಾವಿರ ರೂ. ಪರಿಹಾರ ಕೂಡಲೇ ನೀಡಬೇಕು. ಒಂದೊಮ್ಮೆ ಮರಣ ಸಂಭವಿಸಿದಲ್ಲಿ 5 ಲಕ್ಷ ರೂ., ಸಂಪೂರ್ಣವಾಗಿ ಮನೆ ಹಾನಿಯಾದರೆ 1.20 ಲಕ್ಷ ರೂ. ನೀಡಬೇಕು. ಹೆಚ್ಚುವರಿಯಾಗಿ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ನಿಂದ ಮನೆ ಕಟ್ಟಲು 3.75 ಲಕ್ಷ ರೂ. ನೀಡಿ ಅನುಕೂಲ ಮಾಡಿಕೊಡಬೇಕೆಂದು ಸೂಚಿಸಿದರು.
ಎಲ್ಲೆಡೆ ನಿಗಾ ವಹಿಸಿ
ಶಾಲಾ ಕೊಠಡಿಗಳು ಸೋರುತ್ತಿದ್ದರೆ, ದುರಸ್ತಿಗೊಳಪಟ್ಟಿದ್ದರೆ ಅಂತಹ ಕೊಠಡಿಗಳಲ್ಲಿ ತರಗತಿ ನಡೆಸಬೇಡಿ. ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ, ಸಮವಸ್ತ್ರ ವಿತರಣೆ ಬಾಖಿ ಇದ್ದರೆ ಕೂಡಲೇ ವಿತರಿಸಿ. ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಕೊರತೆ ಆಗದಂತೆ ದಾಸ್ತಾನು ಮಾಡಿಟ್ಟುಕೊಳ್ಳಬೇಕು. ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಯಲ್ಲಿ ಕೊರತೆ ಆಗದಂತೆ ನಿಗಾವಹಿಸಬೇಕು. ಹೆಚ್ಚು ರೈತರು ಬೆಳೆ ವಿಮೆ ಹೊಂದುವಂತೆ ಮಾಡಬೇಕು ಎಂದರು.
ಜಾಗೃತಿ ಮೂಡಿಸಿ
ಸಾಂಕ್ರಾಮಿಕ ರೋಗ ಉಲ್ಬಣಗೊಳ್ಳದಂತೆ ಆರೋಗ್ಯ ಇಲಾಖೆಯಿಂದ ಅಗತ್ಯದ ಸಿದ್ಧತೆ ಮಾಡಿಕೊಳ್ಳಬೇಕು. ಅಲ್ಲದ, ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಸೊಳ್ಳೆ ಉತ್ಪಾದನಾ ಸ್ಥಳಕ್ಕೆ ಕಾರಣವಾಗುವ ವಾಣಿಜ್ಯ ಸಂಸ್ಥೆಗಳ ಲೈಸನ್ಸ್ ರದ್ದು ಮಾಡಬೇಕು. ಡೆಂ, ಮಲೇರಿಯಾ, ಚಿಕೂನ್ಗುನ್ಯಾ ಉಲ್ಬಣಗೊಂಡ ಸ್ಥಳಗಳಲ್ಲಿ ಫಾಗಿಂಗ್ ಮತ್ತಿತರ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಬೀದಿ ನಾಯಿಗಳ ನಿಯಂತ್ರಣಕ್ಕೆ ಸ್ಥಳಿಯ ಸಂಸ್ಥೆಗಳ ಸಹಕಾರದಲ್ಲಿ ಅಗತ್ಯ ಕ್ರಮ ಕೈಗೊಂಡು ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು. ನಾಯಿಗಳ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ಕಾರ್ಯ ಹೆಚ್ಚು ಮಾಡಬೇಕು ಎಂದರು.
ಸಭೆಯಲ್ಲಿ ಶಾಸಕರಾದ ಯಶ್ಪಾಲ್ ಸುವರ್ಣ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಎ. ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಜಿಪಂ ಸಿಇಒ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಅರಣ್ಯ ಸಂರಕ್ಷಣಾಧಿಕಾರಿ ರುಥ್ರನ್ ಇತರರು ಉಪಸ್ಥಿತರಿದ್ದರು.
ಸರ್ಕಾರಿ ಸೌಲಭ್ಯ ಪಡೆಯುವಾಗ ಕಾನೂನು ಅನುಷ್ಠಾನ ಮಾಡಲು ಕೆಲವು ತೊಡಕುಗಳು ಇರುತ್ತವೆ. ಅಧಿಕಾರಿಗಳು ಬುದ್ಧಿವಂತಿಕೆಯಿಂದ ಮಾನವೀಯ ನೆಲೆಗಟ್ಟಿನಲ್ಲಿ ಅವುಗಳನ್ನು ಅನುಷ್ಠಾನಗೊಳಿಸಿ ಜನರಿಗೆ ಉಪಯೋಗ ಮಾಡಿಕೊಡಬೇಕು. ಪೊಲೀಸ್, ಅಗ್ನಿಶಾಮಕ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ತಂಡವು ರಕ್ಷಣಾ ಕಾರ್ಯಾಚರಣೆಗೆ ಸದಾ ಸಿದ್ಧವಿರಬೇಕು.
— ಯು.ಟಿ. ಖಾದರ್ ಫರೀದ್. ಜಿಲ್ಲಾ ಉಸ್ತುವಾರಿ ಸಚಿವ.
ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಡಿ
ಮಳೆಯಿಂದಾಗಿ ರಸ್ತೆಗಳಲ್ಲಿ ಹೊಂಡ ಬಿದ್ದಲ್ಲಿ ತಕ್ಷಣ ಸ್ಪಂದಿಸಿ. ಉದಾಸೀನ ಅಥವಾ ರ್ನಿಲಕ್ಷ್ಯದಿಂದ ತಡವಾಗಿ ಅನಾಹುತ ಸಂಭವಿಸಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುವಂತೆ ಮಾಡಬೇಡಿ. ಜನರು ಜನಪ್ರತಿನಿಧಿಗಳನ್ನು ದೂಷಿಸುವಂತೆಯೂ ಆಗಬಾರದು. ರಸ್ತೆಯ ಎರಡೂ ಬದಿಯ ಚರಂಡಿಯಲ್ಲಿ ಮಳೆ ನೀರು ಸುವ್ಯವಸ್ಥಿತವಾಗಿ ಹರಿದು ಹೋಗುವಂತೆ ನೋಡಬೇಕು ಎಂದು ಲೋಕೋಪಯೋಗಿ ಅಭಿಯಂತರಗೆ ಸೂಚಿಸಿದರು. ಕಳ್ಳತನ, ಮನೆಗಳ್ಳತನ, ಮಾದಕವಸ್ತುಗಳ ನಿಯಂತ್ರಣ ಸೇರಿದಂತೆ ಇನ್ನಿತರ ಅಪರಾಧಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಮಾಹಿತಿ ಪಡೆದರು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಂತೆ ಸಚಿವ ಖಾದರ್ ಸಲಹೆ ನೀಡಿದರು.