ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಖಾಸಗಿ ಬಸ್ ಮಾಲೀಕರೊಂದಿಗೆ ಸ್ವರೂಪಾ ಟಿ.ಕೆ. ಸಭೆ ನಡೆಸಿದರು. ಎಸ್ಪಿ ಹರಿರಾಂ ಶಂಕರ್ ಇದ್ದರು.
* ಪೊಲೀಸ್ ವರಿಷ್ಠ ಹರಿರಾಂ ಶಂಕರ್ ಮಾಹಿತಿ
* ಡಿಸಿ ಕಚೇರಿಯಲ್ಲಿ ಮಾಲೀಕರೊಂದಿಗೆ ಸಭೆ
ಉಡುಪಿ: ಜಿಲ್ಲೆಯಲ್ಲಿ ಸಂಚರಿಸುವ ಎಲ್ಲ ಬಗೆಯ ಸಾರಿಗೆ ಬಸ್ಗಳಿಗೆ ಬಾಗಿಲು ಅಳವಡಿಸುವ ಅವಧಿಯನ್ನು ಜಿಲ್ಲಾಡಳಿತ ವಿಸ್ತರಣೆ ಮಾಡಿದ್ದು, ಜೂ.1ರ ವರೆಗೆ ಸಮಯಾವಕಾಶ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.
ನಗರದ ಖಾಸಗಿ ಬಸ್ಗಳ ಮಾಲೀಕರೊಂದಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಗುರುವಾರ (ಜ.29) ಸಭೆ ನಡೆಸಿದ್ದು, ಈ ಮೊದಲು ನೀಡಿದ್ದ ಗಡುವನ್ನು ವಿಸ್ತರಿಸಬೇಕೇಂಬ ಅವರ ಮನವಿಗೆ ಸ್ಪಂದಿಸಿದ್ದಾರೆ.
ಎಲ್ಲ ಬಸ್ಗಳಿಗೆ ಬಾಗಿಲು ಅಳವಡಿಸಲು ಹಾಗೂ ಗಡುವಿನೊಳಗೆ ನವೀಕರಣ ಹಾಗೂ ಜೋಡಣೆ ಕೆಲಸ ಮಾಡಲು ಸೂಕ್ತವಾದ ಗ್ಯಾರೇಜ್ಗಳಿಲ್ಲ. ಅಲ್ಲದೆ, ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಎಲ್ಲ ಶಾಲೆಗಳಲ್ಲೂ ಪರೀಕ್ಷಾ ಋತು ಇರಲಿದೆ. ಹೀಗಾಗಿ ಬಸ್ಗಳನ್ನು ಗ್ಯಾರೇಜ್ಗೆ ಬಿಟ್ಟರೆ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ತೊಂದರೆ ಆಗಬಹುದು. ಹೀಗಾಗಿ ಎಲ್ಲ ಬಸ್ಗಳಿಗೆ ಮಡಿಸುವ ರೀತಿಯ ಬಾಗಿಲು ಅಳವಡಿಸಲು ಜೂ.1ರ ವರೆಗೆ ಸಮಯ ಕೇಳಿದ್ದು, ಜಿಲ್ಲಾಡಳಿತ ಅನುಮತಿ ನೀಡಿದೆ.
ಖಾಸಗಿ ಬಸ್ ಮಾಲೀಕರ ಕೋರಿಕೆ ಹಿನ್ನೆಲೆಯಲ್ಲಿ ಜೂ.1ರ ವರೆಗೆ ಸಮಯಾವಕಾಶ ನೀಡಿದ್ದು, ಷರತ್ತಿನೊಂದಿಗೆ ಎಲ್ಲ ಬಸ್ಗಳಿಗೂ ಸಧೃಡತಾ ಪ್ರಮಾಣ ಪತ್ರ (ಎಫ್ ಸಿ) ನವೀಕರಿಸಲಾಗಿದೆ. ನಿಗದಿಯಂತೆ ಬಸ್ಗಳಿಗೆ ಬಾಗಿಲು ಅಳವಡಿಸದಿದ್ದಲ್ಲಿ ಎಫ್ಸಿ ರದ್ದುಗೊಳಿಸಲಾಗುವುದು ಎಂದು ತಿಳಿಸಲಾಗಿದೆ. ಗಡುವು ಮೀರಿದ ಹಾಗೂ ಬಾಗಿಲುಗಳಿಲ್ಲದ ಯಾವುದೇ ಬಸ್ಗಳನ್ನು ವಶಪಡಿಸಿಕೊಳ್ಳಬಹುದು ಎಂದು ಎಲ್ಲ ಖಾಸಗಿ ಬಸ್ಗಳ ಮಾಲೀಕರೂ ಸಹ ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ಹರಿರಾಂ ತಿಳಿಸಿದ್ದಾರೆ.
ಎಲ್ಲ ಬಸ್ಗಳಿಗೂ ಕಡ್ಡಾಯವಾಗಿ ಬಾಗಿಲು ಅಳವಡಿಸುವ ವಿಚಾರವಾಗಿ ಡಿಸಿ ಕಚೇರಿ ಸಭಾಂಗಣದಲ್ಲಿ ಉಡುಪಿಯ ಸಿಟಿ ಬಸ್ ಮಾಲೀಕರೊಂದಿಗೆ ಸಭೆ ನಡೆಸಿದ್ದೇನೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಜೂ.1ರೊಳಗೆ ಬಾಗಿಲು ಅಳವಡಿಸುವಂತೆ ತಾಕೀತು ಮಾಡಲಾಗಿದೆ. ಅಲ್ಲದೆ, ಬಾಗಿಲಿನ ಮೆಟ್ಟಿಲ ಮೇಲೆ ಪ್ರಯಾಣಿಕರನ್ನು ನಿಲ್ಲಿಸಿ ಬಸ್ ಚಲಾಯಿಸದಂತೆಯೂ ಸೂಚಿಸಲಾಗಿದೆ.