ಉಡುಪಿಯಲ್ಲಿ ಆಯೋಜಿಸಿದ್ದ ರೇಣುಕಾಚಾರ್ಯ ಮತ್ತು ಕೈವಾರ ತಾತಯ್ಯ ಜಯಂತಿಯನ್ನು ಅಬೀದ್ ಗದ್ಯಾಳ್ ಉದ್ಘಾಟಿಸಿದರು. ಪೂರ್ಣಿಮಾ, ನವನೀತ್, ಸುಲೋಚನಾ ಪಚ್ಚಿನಡ್ಕ, ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ಇತರರಿದ್ದರು.
* ಮಕ್ಕಳಿಗೆ ಎಡಿಸಿ ಅಬೀದ್ ಗದ್ಯಾಳ್ ಸಲಹೆ
* ರೇಣುಕಾಚಾರ್ಯ, ಕೈವಾರ ತಾತಯ್ಯ ಜಯಂತಿ
ಉಡುಪಿ: ಶ್ರೀ ರೇಣುಕಾಚಾರ್ಯ, ಯೋಗಿ ನಾರೇಯಣ ಯತೀಂದ್ರ (ಕೈವಾರ ತಾತಯ್ಯ)ರು ಸೇರಿದಂತೆ ಹಲವಾರು ದಾರ್ಶನಿಕರು ಅನೇಕ ಮೌಲ್ಯ ಅರುಹಿದ್ದಾರೆ. ಅಂತಹ ಮಹನೀಯರ ಸಂದೇಶಗಳು ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಿವೆ. ಮಕ್ಕಳು ತಂದೆ-ತಾಯಿಗೆ ವಿಧೇಯರಾಗಿ, ಗುರು-ಹಿರಿಯರನ್ನು ಗೌರವದಿಂದ ಕಾಣಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದೊಂದಿಗೆ ಉತ್ತಮ ಕೌಶಲ ಮೈಗೂಡಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು. ಇತರರ ಕುರಿತು ಒಳ್ಳೆಯ ಭಾವನೆ ಹೊಂದಿರಬೇಕು ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಸಲಹೆ ನೀಡಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಂಗಳವಾರ (ಮಾ.3) ಆಯೋಜಿಸಿದ್ದ ಶ್ರೀ ರೇಣುಕಾಚಾರ್ಯ ಮತ್ತು ಯೋಗಿ ನಾರೇಯಣ ಯತೀಂದ್ರ (ಕೈವಾರ ತಾತಯ್ಯ)ರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಧರ್ಮದ ಉದ್ಧಾರಕರು
ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಉಪನ್ಯಾಸಕಿ ಸುಲೋಚನಾ ಪಚ್ಚಿನಡ್ಕ ಮಾತನಾಡಿ, 18ನೇ ಶತಮಾನದ ಕಾಲಜ್ಞಾನಿಯಾದ ಯೋಗಿ ನಾರೇಯಣ ಯತೀಂದ್ರರು ಸಾಂಸಾರಿಕ ಜೀವನದಲ್ಲಿ ನಡೆದ ಕಹಿ ಘಟನೆಯಿಂದ ಬೇಸತ್ತು ಕುಟುಂಬ ತೊರೆದರು. ಭಗವಂತನ ಇರುವಿಕೆ ಕಂಡುಕೊಳ್ಳಲು ಅಧ್ಯಾತ್ಮದತ್ತ ಆಸಕ್ತರಾಗಿ ಕನ್ನಡ ಮತ್ತು ತೆಲುಗಿನಲ್ಲಿ ಭಕ್ತಿ ಗೀತೆ, ತತ್ವಪದ ಮತ್ತು ಭವಿಷ್ಯವಾಣಿ (ಕಾಲಜ್ಞಾನ) ರಚಿಸಿದರು. 110 ವರ್ಷ ಬದುಕಿದ್ದ ಅವರು ಪವಾಡಗಳ ಮೂಲಕ ಕೈವಾರ ತಾತಯ್ಯನಾಗಿ ಖ್ಯಾತರಾದರು. ವೀರಶೈವ ಧರ್ಮದ ಮಹಾನ್ ಶರಣರಲ್ಲಿ ಓರ್ವರಾದ ಜಗದ್ಗುರು ರೇಣುಕಾಚಾರ್ಯರು ಲಿಂಗಾಯತ ಧರ್ಮದ ಸಿದ್ಧಾಂತ ಪ್ರತಿಪಾದಿಸಿದರು. ಶೈವ ಪರಂಪರೆ ಬಲಪಡಿಸಲು ತಮ್ಮ ಜೀವನವನ್ನೇ ಮೀಸಲಿಟ್ಟಿದ್ದರು. ಅವರ ತತ್ವ, ಚರಿತ್ರೆ ಮತ್ತು ಸಾಧನೆ ಧಾರ್ಮಿಕ ಕ್ಷೇತ್ರದಲ್ಲಿ ಮಹತ್ವಪೂರ್ಣ ಸ್ಥಾನ ಪಡೆದಿವೆ ಎಂದರು.
ಕಾರ್ಯಕ್ರಮದಲ್ಲಿ ಉಪ ತಹಸೀಲ್ದಾರರಾದ ನವನೀತ್ ಹಾಗೂ ಜಯಲಕ್ಷ್ಮೀ, ಸಮುದಾಯದ ಸದಸ್ಯರು, ಜಿಲ್ಲಾಡಳಿತದ ಸಿಬ್ಬಂದಿ ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಇಲಾಖೆಯ ಸಿಬ್ಬಂದಿ ವರ್ಷಾ ಬಿ. ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ವಂದಿಸಿದರು.
ಸಾಧು-ಸಂತರು, ಮಹನೀಯರು ಮತ್ತು ದಾರ್ಶನಿಕರ ಸಾಧನೆ, ಸಮಾಜಕ್ಕೆ ಅವರ ಕೊಡುಗೆ, ಮೌಲ್ಯಗಳನ್ನು ತಿಳಿಸಲೆಂದೇ ಸರ್ಕಾರ ಇಂತಹ ಜಯಂತಿ ಕಾರ್ಯಕ್ರಮ ಆಯೋಜಿಸುತ್ತಿದೆ. ಅವರೆಲ್ಲರ ಸಂದೇಶ, ತತ್ವಗಳು ಉತ್ತಮ ಜೀವನಕ್ಕೆ ದಾರಿದೀಪವಾಗಿದ್ದು, ಅನುಸರಣೆ ಮೂಲಕ ಉಜ್ವಲ ಬದುಕು ಕಟ್ಟಿಕೊಳ್ಳಬೇಕಿದೆ. ವಿಶೇಷವಾಗಿ ವಿದ್ಯಾರ್ಥಿಗಳು ಇಂತಹ ಮಹಾನ್ ಸಾಧಕರ ಜೀವನ ವೃತ್ತಾಂತವನ್ನು ಅಧ್ಯಯನ ಮಾಡಬೇಕಿದೆ.
ಪಾಲಕರು, ಗುರು-ಹಿರಿಯರನ್ನು ಗೌರವಿಸಿ
* ಮಕ್ಕಳಿಗೆ ಎಡಿಸಿ ಅಬೀದ್ ಗದ್ಯಾಳ್ ಸಲಹೆ