ಉಡುಪಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಹರಿರಾಮ್ ಶಂಕರ್ ಮಾತನಾಡಿದರು. ಅಬೀದ್ ಗದ್ಯಾಳ್, ಸುಧಾಕರ್ ಎಸ್. ನಾಯಕ್, ಇಶಿತಾ ಗುಪ್ತಾ ಇದ್ದರು.
* ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಮ್ ಶಂಕರ್ ಕರೆ
* ಜಿಲ್ಲಾ ಗಣೇಶೋತ್ಸವ ಸಮಿತಿಗಳೊಂದಿಗೆ ಪೂರ್ವಭಾವಿ ಸಭೆ
ಉಡುಪಿ: ಗಣೇಶೋತ್ಸವ ಸಮೀಪಿಸುತ್ತಿದೆ. ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಹಾಗೂ ಭದ್ರತೆ ಕಾಪಾಡಬೇಕಿದ್ದು, ಹಬ್ಬವನ್ನು ಕಾನೂನುಬದ್ಧವಾಗಿ ಮತ್ತು ಸೌಹಾರ್ದದಿಂದ ಆಚರಿಸಬೇಕು. ಗಣೇಶನ ಪ್ರತಿಷ್ಠಾಪನೆ, ಮೆರವಣಿಗೆ, ಧ್ವನಿವರ್ಧಕಗಳ ಬಳಕೆ, ವಾಹನ ಸಂಚಾರ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ಅಗ್ನಿ ಸುರಕ್ಷತೆ ಹಾಗೂ ಪರಿಸರ ಸ್ನೇಹಿ ಆಚರಣೆಗಾಗಿ ನಿಗದಿತ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಮ್ ಶಂಕರ್ ಕರೆ ನೀಡಿದರು.
ಉಡುಪಿಯ ಟೌನ್ ಹಾಲ್ನಲ್ಲಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಗಣೇಶೋತ್ಸವ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಗುರುವಾರ (ಸೆ.10) ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ಎಸ್. ನಾಯಕ್, ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಇಶಿತಾ ಗುಪ್ತಾ, ಜಿಲ್ಲೆಯ ವಿವಿಧ ಗಣೇಶೋತ್ಸವ ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು.
ಕಾನೂನಿನ ಬಗ್ಗೆ ತಿಳಿವಳಿಕೆ ಉಳ್ಳವರು ಹಾಗೂ ಕಾನೂನನ್ನು ಪಾಲಿಸುವವರಲ್ಲಿ ರಾಜ್ಯದಲ್ಲಿಯೇ ಉಡುಪಿ ಪ್ರಥಮ ಸ್ಥಾನದಲ್ಲಿದೆ. ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯೂ ಸಹ ಅತ್ಯುತ್ತಮ ಸೇವೆಯ ಮೂಲಕ ಗಮನ ಸೆಳೆಯುತ್ತಿದೆ. ಹೀಗಾಗಿ ಗಣೇಶೋತ್ಸವ ಸಂದರ್ಭದಲ್ಲಿ ಎಲ್ಲ ಸಮಿತಿಗಳು ನಿಯಮಾನುಸಾರ ಆಚರಣೆ ನಡೆಸಿ ಸಹಕರಿಸಬೇಕು. ಪರಿಸರ ಇಲಾಖೆಯ ಸೂಚನೆಯಂತೆ ಪಿಒಪಿ ಗಣೇಶನ ತಯಾರಿ, ಮಾರಾಟ ನಿಷೇಧಿಸಲಾಗಿದೆ. ತಮಗೆ ಯಾವುದೇ ತೊಂದರೆ ಆದಲ್ಲಿ ನೇರವಾಗಿ ಜಿಲ್ಲಾಡಳಿತ ಸಂಪರ್ಕಿಸಬಹುದು.