ಪರ್ಯಾಯ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ವಿದ್ಯಾಪೋಷಕ್​ ವಿನಮ್ರ ಸಹಾಯಧನ ವಿತರಿಸಿದರು.  
ಉಡುಪಿ

ಜ್ಞಾನವಿಲ್ಲದ ವ್ಯಕ್ತಿ ಅಪ್ರಯೋಜಕ: ಶೀರೂರು ಶ್ರೀ

ಶ್ರೀಕೃಷ್ಣಮಠದ ರಾಜಾಂಗಣದಲ್ಲಿ 1,273 ವಿದ್ಯಾರ್ಥಿಗಳಿಗೆ 1.75 ಕೋಟಿ ರೂ. ವಿದ್ಯಾಪೋಷಕ್​ ಸಹಾಯಧನ ವಿತರಣೆ

ಉಡುಪಿ : ನೀರಿಲ್ಲದ ನದಿ ಹಾಗೂ ಜ್ಞಾನವಿಲ್ಲದ ವ್ಯಕ್ತಿ ಅಪ್ರಯೋಜಕ. ಹೀಗಾಗಿ ವಿದ್ಯೆ ಎಲ್ಲಕ್ಕಿಂತ ಶ್ರೇಷ್ಠವಾಗಿದ್ದು, ವಿದ್ಯಾದಾನಕ್ಕೆ ನೆರವು ನೀಡುವುದು ಅನ್ನದಾನಕ್ಕಿಂತಲೂ ಶ್ರೇಷ್ಠವಾಗಿದೆ. ಅನ್ನ ನೀಡಿದ ಸ್ವಂತ ಹೊಟ್ಟೆ ತುಂಬುತ್ತದೆ. ಆದರೆ ವಿದ್ಯೆ ನೀಡಿದರೆ ಇಡೀ ಕುಟುಂಬವನ್ನೇ ಸಲಹಲು ಸಾಧ್ಯ ಎಂದು ಪರ್ಯಾಯ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಹೇಳಿದರು.

ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಯಕ್ಷಗಾನ ಕಲಾರಂಗದ ಅಂಗಸಂಸ್ಥೆ ವಿದ್ಯಾಪೋಷಕ್​ 22ನೇ ವರ್ಷದ ವಿನಮ್ರ ಸಹಾಯಧನ ವಿತರಣಾ ಸಮಾರಂಭದಲ್ಲಿ ಅವರು ಅಶೀರ್ವಚನ ನೀಡಿದರು.

ಮನುಷ್ಯ ಪಡೆದ ಜ್ಞಾನ ಸಮಾಜಕ್ಕೆ ಉಪಕಾರಿಯಾಗಬೇಕು. ವಿದ್ಯೆ ಜೊತೆಗೆ ಗುಣವೂ ಮುಖ್ಯ. ಸಮಾಜ ಸೇವೆ ಪರಮಾತ್ಮನಿಗೆ ಸಲ್ಲಿಸುವ ತೆರಿಗೆಯಾಗಿದ್ದು, ಸಂಸ್ಕಾರಯುತ ಯುವಪೀಳಿಗೆಯಿಂದ ದೇಶವನ್ನು ಕಟ್ಟಲು ಸಾಧ್ಯ. ದೇವರ ಮೇಲೆ ಭಕ್ತಿ, ಧರ್ಮಾಚರಣೆ, ದೇಶ ಸೇವೆ ಮಾಡಬೇಕು ಎಂದು ಹೇಳಿದರು.

ಮಂಗಳೂರು ಕರ್ಣಾಟಕ ಬ್ಯಾಂಕಿನ ಜಿ.ಎಂ. ಗೋಪಾಲಕೃಷ್ಣ ಸಾಮಗ, ಗೀತಾನಂದ ಫೌಂಡೇಶನ್​ನ ಅಧ್ಯಕ್ಷ ಆನಂದ ಸಿ. ಕುಂದರ್​, ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಹರಿಶ್ಚಂದ್ರ, ಉದ್ಯಮಿ ಪಿ.ಪುರುಷೋತ್ತಮ ಶೆಟ್ಟಿ, ವಿಶ್ವನಾಥ ಶೆಣೈ, ಅರುಣ್​ ಕುಮಾರ್​ ಶೆಟ್ಟಿ, ಪುರುಷೋತ್ತಮ ಪಟೇಲ್​, ಪಣಂಬೂರು ವಾಸುದೇವ ಐತಾಳ್​, ಪಾರಂಪಳ್ಳಿ ನಟರಾಜ ಉಪಾಧ್ಯ, ಸಿಎ ಗಣೇಶ್​ ಕಾಂಚನ್​, ಆನಂದ ಪಿ. ಸುವರ್ಣ, ಉದಯ್​ ಹೆಗ್ಡೆ, ರವಿರಾಜ್​ ಬೆಳ್ಮ, ಕಲಾರಂಗ ಉಪಾಧ್ಯಕ್ಷ ವಿ.ಜಿ. ಶೆಟ್ಟಿ ಉಪಸ್ಥಿತರಿದ್ದರು.

ಯಕ್ಷಗಾನ ಕಲಾರಂಗ ಅಧ್ಯಕ್ಷ ಎಂ. ಗಂಗಾಧರ ರಾವ್​ ಸ್ವಾಗತಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್​ ಕಾರ್ಯಕ್ರಮ ನಿರೂಪಿಸಿದರು. ಸಹಕಾರ್ಯದರ್ಶಿ ನಾರಾಯಣ ಹೆಗಡೆ ವಂದಿಸಿದರು.

ಈ ಸಂದರ್ಭದಲ್ಲಿ ವಿದ್ಯಾಪೋಷಕ್​ ಹಾಗೂ ಯಕ್ಷಗಾನ ಕಲಾವಿದರ ಮಕ್ಕಳು ಸೇರಿ ಒಟ್ಟು 1,273 ವಿದ್ಯಾರ್ಥಿಗಳಿಗೆ 1,75,81,500 ರೂ. ಸಹಾಯಧನ ಹಾಗೂ 15 ಮಂದಿ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್​ ವಿತರಣೆ ಮಾಡಲಾಯಿತು.

ಆರೋಗ್ಯ ಕಾರ್ಡ್​ ವಿತರಣೆ: ಬೆಳಗ್ಗೆ ಕಾರ್ಯಕ್ರಮವನ್ನು ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಉದ್ಘಾಟಿಸಿದರು. ಪರ್ಯಾಯ ಶೀರೂರು ಮಠದ ದಿವಾನ್​ ಡಾ. ಉದಯ ಕುಮಾರ್​ ಸರಳತ್ತಾಯ, ಮೂಡಬಿದ್ರೆ ಆಳ್ವಾಸ್​ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ್​ ಆಳ್ವ, ಮಣಿಪಾಲ ಅಕಾಡೆಮಿ ಆಫ್​ ಜನರಲ್​ ಎಜುಕೇಶನ್​ನ ಕಾರ್ಯದರ್ಶಿ ಡಾ. ನಾರಾಯಣ ಸಭಾಹಿತ್​, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗೂರ್​, ಶಿವಮೊಗ್ಗದ ಮಾಜಿ ರೋಟರಿ ಜಿಲ್ಲಾ ಗವರ್ನರ್​ ಡಾ. ಪಿ. ನಾರಾಯಣ, ಗೋವಾ ಒಎನ್​ಜಿಸಿ ನಿವೃತ್ತ ಸಿಜಿಎಂ ಬನ್ನಾಡಿ ನಾರಾಯಣ ಆಚಾರ್​ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿದ್ಯಾಪೋಷಕ್​ ವಿದ್ಯಾರ್ಥಿಗಳ ಕುಟುಂಬಕ್ಕೆ ಮಾಹೆ ಕೊಡಮಾಡಿದ ಉಚಿತ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಆರೋಗ್ಯ ಕಾರ್ಡ ವಿತರಿಸಲಾಯಿತು.