ಇಪಿಎಫ್ಒ ವಲಯ ಆಯುಕ್ತ ಶಶಿಕಾಂತ್ ದಹಿಯಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಉಡುಪಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜ್ಗಾರ್ ಯೋಜನೆ ಅಡಿಯಲ್ಲಿ ದೇಶಾದ್ಯಂತ ಅರ್ಹ ಫಲಾನುಭವಿಗಳಿಗೆ ಸುಮಾರು 2,400 ಕೋಟಿ ರೂ. ಮೊತ್ತದ ಸೌಲಭ್ಯಗಳನ್ನು ವಿತರಿಸಲಾಗುತ್ತಿದ್ದು, ಇದರ ಅಂಗವಾಗಿ ಜೂನ್ 19ರಂದು ಸಂಜೆ 4:30ಕ್ಕೆ ಮಣಿಪಾಲದ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಹೊಸದಾಗಿ ಉದ್ಯೋಗ ಪಡೆದ ಕಾರ್ಮಿಕರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಗುವುದು ಎಂದು ಇಪಿಎಫ್ಒ ವಲಯ ಆಯುಕ್ತ ಶಶಿಕಾಂತ್ ದಹಿಯಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಉಡುಪಿ ವಲಯ ಇಪಿಎಫ್ಒ ವತಿಯಿಂದ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಂಸದ ಕೋಟ ಶ್ರೀನಿವಾಸ ಪೂಜಾರಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶಾಸಕ ಯಶಪಾಲ್ ಎ. ಸುವರ್ಣ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಿಲ್ಲೆಯ ಪ್ರಮುಖ ಉದ್ಯಮಿಗಳು, ಫಲಾನುಭವಿಗಳು ಮತ್ತು ಕೈಗಾರಿಕಾ ವಲಯದ ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಆ.1, 2025ರಲ್ಲಿ ಪ್ರಾರಂಭವಾದ ಯೋಜನೆಯಲ್ಲಿ ನೇಮಕಗೊಂಡ ಉದ್ಯೋಗಿಗಳು ನಿಯಮ ಪ್ರಕಾರ ಜುಲೈ 31ಕ್ಕೆ 1 ವರ್ಷ ಪೂರೈಸಲಿದ್ದು, ಉದ್ಯೋಗಿಗಳು ಮತ್ತು ಉದ್ಯೋಗದಾತರು ಸರ್ಕಾರದ ಸಹಾಯಧನ ಪಡೆಯಲು ಅರ್ಹರಾಗಿದ್ದಾರೆ. ಜಿಲ್ಲೆಯಲ್ಲಿ 774 ಉದ್ಯೋಗಿಗಳು ಮತ್ತು 222 ಕಂಪೆನಿಗಳು ಯೋಜನೆ ಪ್ರಯೋಜನ ಪಡೆಯಲಿದ್ದಾರೆ ಎಂದು ಹೇಳಿದರು.
ಸಭಾ ಕಾರ್ಯಕ್ರಮದ ಬಳಿಕ ಪ್ರಧಾನಮಂತ್ರಿಯವರ ಭಾಷಣದ ನೇರ ಪ್ರಸಾರ ಹಾಗೂ ಫಲಾನುಭವಿಗಳು ಹಾಗೂ ಉದ್ಯೋಗದಾತರೊಂದಿಗೆ ಸಂವಾದ ನಡೆಯಲಿದೆ ಎಂದರು. ಸಂಸ್ಥೆ ಲೆಕ್ಕಾಧಿಕಾರಿ ರಾಜೀವ್ಕುಮಾರ್ ರ, ನರೇಂದ್ರಬಾಬು ಗುಟ್ಟಿ ಉಪಸ್ಥಿತರಿದ್ದರು.
ಏನಿದು ಪಿಎಂ-ವಿಬಿಆರ್ವೈ ಯೋಜನೆಪಿಎಂ-ವಿಬಿಆರ್ವೈ ಯೋಜನೆಯ ಭಾಗ 'ಎ' ಅಡಿಯಲ್ಲಿ, ಇಪಿಎಫ್ಒ ವ್ಯಾಪ್ತಿಗೆ ಒಳಪಡುವ ಸಂಸ್ಥೆಗಳಿಗೆ ಸೇರುವ ಹಾಗೂ ಮಾಸಿಕ 1 ಲಕ್ಷ ರೂ. ವರೆಗೆ ವೇತನ ಹೊಂದಿರುವ ಮೊದಲ ಬಾರಿಯ ಉದ್ಯೋಗಿಗಳಿಗೆ ಗರಿಷ್ಠ 15,000 ರೂ. ಮಿತಿಗೊಳಪಟ್ಟು ಒಂದು ತಿಂಗಳ ವೇತನಕ್ಕೆ ಸಮಾನವಾದ ಹಣಕಾಸಿನ ನೆರವು ನೀಡಲಾಗುತ್ತದೆ. 50 ಕ್ಕಿಂತ ಕಡಿಮೆ ಉದ್ಯೋಗಿಗಳಿರುವ ಸಣ್ಣ ಸಂಸ್ಥೆಗಳು ಕನಿಷ್ಠ 2 ಹೊಸ ಉದ್ಯೋಗಿಗಳು ಹಾಗೂ 50 ಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಸಂಸ್ಥೆಗಳು ಕನಿಷ್ಠ 5 ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಬೇಕು. ಹೆಚ್ಚುವರಿಯಾಗಿ ನೇಮಕಗೊಂಡು ಕನಿಷ್ಠ 6 ತಿಂಗಳು ಸಂಸ್ಥೆಯಲ್ಲಿ ಮುಂದುವರಿದ ಪ್ರತಿ ಉದ್ಯೋಗಿಯ ವೇತನ ಶ್ರೇಣಿಗೆ ಅನುಗುಣವಾಗಿ ಉದ್ಯೋಗದಾತರಿಗೆ ತಿಂಗಳಿಗೆ 1 ರಿಂದ 3 ಸಾವಿರ ರೂ. ವರೆಗೆ ಸಹಾಯಧನ ಸಿಗುತ್ತದೆ.