ಪ್ರಧಾನಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಉದ್ಘಾಟಿಸಿದರು.
ಉಡುಪಿ: ದೇಶಾದ್ಯಂತ ಉದ್ಯೋಗ ಸೃಷ್ಟಿಗೆ ವೇಗ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಪ್ರಧಾನಮಂತ್ರಿ ರೋಜ್ಗಾರ್ ಯೋಜನೆಯಡಿ ಜಿಲ್ಲೆಯಲ್ಲಿ 779 ಫಲಾನುಭವಿಗಳಿಗೆ 48.58 ಲಕ್ಷ ರೂ. ಹಾಗೂ 199 ಉದ್ಯೋಗದಾತರಿಗೆ 3.18 ಕೋಟಿ ರೂ. ಪ್ರೋತ್ಸಾಹಧನ ವಿತರಿಸಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
ಮಣಿಪಾಲದ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಧಾನಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆ ಪ್ರೋತ್ಸಾಹಧನ ವಿತರಣೆ ಹಾಗೂ ನೇಮಕಾತಿ ಪತ್ರ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
145 ಕೋಟಿ ಜನಸಂಖ್ಯೆಯ ಭಾರತದಲ್ಲಿ ಅಂಕಿ ಆಂಶಗಳ ಪ್ರಕಾರ 42 ಕೋಟಿ ಅಸಂಘಟಿತ ಕಾರ್ಮಿಕರು ದುಡಿಯುತ್ತಿದ್ದಾರೆ. ನಾನಾ ವೃತ್ತಿಗಳಲ್ಲಿರುವ 29 ಕೋಟಿ ಕಾರ್ಮಿಕರು ಇ-ಶ್ರಮ್ ಪೋರ್ಟಲ್ ನಲ್ಲಿ ನೋಂದಾಯಿಸಲ್ಪಟ್ಟಿದ್ದಾರೆ. ಕೇಂದ್ರ ಮತ್ತು ರಾಜ್ಯದ ಕಾರ್ಮಿಕ ಇಲಾಖೆಗಳು ಸಂಘಟಿತ ಮತ್ತು ಅಸಂಘಟಿತ ಕ್ಷೇತ್ರದಲ್ಲಿ ದುಡಿಯುವ ಎಲ್ಲ ಕಾರ್ಮಿಕರಿಗೆ ಭದ್ರತೆ ನೀಡಲು ಬದ್ದವಾಗಿದೆ. ಆತ್ಮನಿರ್ಭರ ಭಾರತವನ್ನು ರೂಪಿಸುತ್ತಿರುವ ದುಡಿಯುವ ಕೈಗಳಿಗೆ ಈ ಯೋಜನೆ ಶಕ್ತಿ ತುಂಬಲಿದೆ ಎಂದರು.
ರೋಜಗಾರ್ ಯೋಜನೆಯಡಿಯಲ್ಲಿ ಈಗಾಗಲೇ ದೇಶಾದ್ಯಂತ 15 ಲಕ್ಷ ಉದ್ಯೋಗಾವಕಾಶ ಸೃಷ್ಟಿಸಲಾಗಿದೆ. 99,446 ಕೋಟಿ ರೂ. ವೆಚ್ಚದಲ್ಲಿ ಎರಡು ವರ್ಷಗಳ ಅವಧಿಯಲ್ಲಿ 3.5 ಕೋಟಿಗೂ ಹೆಚ್ಚು ಉದ್ಯೋಗಗಳ ಸೃಷ್ಟಿಗೆ ಪ್ರೋತ್ಸಾಹ ನೀಡುವ ಗುರಿ ಹೊಂದಿದೆ ಎಂದು ಹೇಳಿದರು.
ಇಎಸ್ಐ ಮಿತಿ ಹೆಚ್ಚಳಕ್ಕೆ ಮನವಿ
ಪ್ರಸ್ತುತ 18 ಸಾವಿರದಿಂದ 21 ಸಾವಿರ ರೂ. ವರೆಗಿನ ವೇತನ ಹೊಂದಿದವರಿಗೆ ಮಾತ್ರ ಇ.ಎಸ್.ಐ ಸೌಲಭ್ಯ ದೊರೆಯುತ್ತಿದೆ. ಇದನ್ನು 30 ಸಾವಿರಕ್ಕೆ ವಿಸ್ತರಿಸಬೇಕು ಎಂದು ಕೇಂದ್ರದ ಕಾರ್ಮಿಕ ಇಲಾಖೆಗೆ ಮನವಿ ಮಾಡಿದ್ದೇವೆ. 19 ಕೋಟಿ ಕಾರ್ಮಿಕರು ಈ ಯೋಜನೆಯ ಸೌಲಭ್ಯ ಪಡೆಯುತ್ತಿದ್ದು, ಯೋಜನೆ ವಿಸ್ತರಣೆಗೊಂಡಲ್ಲಿ ಹೆಚ್ಚಿನ ಜನರಿಗೆ ಸೌಲಭ್ಯ ದೊರೆಯಲಿದೆ ಎಂದರು.
ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ, ಯೋಜನೆ ಮೂಲಕ 1.92 ಕೋಟಿ ಫಲಾನುಭವಿಗಳು ಮೊದಲ ಬಾರಿಗೆ ಉದ್ಯೋಗ ಕ್ಷೇತ್ರಕ್ಕೆ ಪ್ರವೇಶಿಸುತ್ತಿದ್ದಾರೆ. ಉದ್ಯೋಗಾಕಾಂಕ್ಷಿ ಯುವಕ ಮತ್ತು ಯುವತಿಯರಿಗೆ ಇದರಿಂದ ಪ್ರಯೋಜನ ಸಿಗಲಿದೆ. ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವ ಉದ್ಯೋಗಿಗಳು ಮೊದಲನೆ ತಿಂಗಳು 15,000 ರೂವರೆಗೆ ಪ್ರೋತ್ಸಾಹಧನ ಹಾಗೂ ಹೆಚ್ಚುವರಿ ಉದ್ಯೋಗವನ್ನು ಸೃಷ್ಟಿಸುವ ಉದ್ಯೋಗದಾತರು ಪ್ರತಿ ಹೆಚ್ಚುವರಿ ಉದ್ಯೋಗಿಗೆ ತಿಂಗಳಿಗೆ 3,000 ರೂ. ವರೆಗೆ ಪ್ರೋತ್ಸಾಹಧನ ಪಡೆಯಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್, ಇ.ಪಿ.ಎಫ್.ಒ ಪ್ರಾದೇಶಿಕ ಆಯುಕ್ತ ಶಶಿಕಾಂತ್ ದಹಿಯಾ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎಚ್.ಕೆ. ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು. ನೀತಾ ಉದಯಶಂಕರ್, ಜಯಶ್ರೀ ನಿರೂಪಿಸಿ, ವನಿತಾ ನಾಯ್ಕ್ ವಂದಿಸಿದರು.
ಈ ಸಂದರ್ಭದಲ್ಲಿ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆ ಅಡಿಯಲ್ಲಿ ಸುಮಾರು 2,400 ಕೋಟಿ ರೂ. ಮೌಲ್ಯದ ಪ್ರೋತ್ಸಾಹಧನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಫಲಾನುಭವಿಗಳಿಗೆ ವಿತರಿಸಿದರು. ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.