ಉಡುಪಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸುನೀಲಕುಮಾರ್ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದರು. ಶಾಸಕರು, ವಿಪ ಸದಸ್ಯರು ಇದ್ದರು.
* ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಶಾಸಕರ ಆಕ್ರೋಶ
* ಉಸ್ತುವಾರಿ ಸಚಿವೆ, ಜಿಲ್ಲಾಡಳಿತಕ್ಕೆ ತರಾಟೆ
ಉಡುಪಿ: ಇಂದಿನ ಕೆಡಿಪಿ ಸಭೆಯಲ್ಲಿ ಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡುವ ವಿಚಾರ ನಮಗೆ ತಿಳಿದಿಲ್ಲ. ಕ್ಷೇತ್ರದ ತಹಸೀಲ್ದಾರರು ಮಾಹಿತಿಯನ್ನೂ ನೀಡಿಲ್ಲ. ನಮ್ಮ ಅನುಪಸ್ಥಿತಿಯಲ್ಲಿ ಹಕ್ಕುಪತ್ರ ವಿತರಣೆ ಮಾಡುವುದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ. ಜಿಲ್ಲಾಧಿಕಾರಿಗೆ, ತಹಸೀಲ್ದಾರರಿಗೆ, ಉಸ್ತುವಾರಿ ಸಚಿವರಾದ ತಮಗೂ ಇದು ತಿಳಿದಿಲ್ಲವೇ ಎಂದು ಕಾರ್ಕಳ ಶಾಸಕ ವಿ.ಸುನೀಲಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಉಡುಪಿಯ ಜಿಪಂನ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಶನಿವಾರ (ಮೇ 16) ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಐವರು ಬಿಜೆಪಿ ಶಾಸಕರು ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ನಾವೇನು ಗೆಣಸು ಕೆರೆಯುತ್ತಿದ್ದೇವೆಯೇ?
ಸರ್ಕಾರದ ಸುತ್ತೋಲೆಯಲ್ಲೇ ಇರುವಂತೆ ಯಾವುದೇ ಕ್ಷೇತ್ರದ ಲಾನುಭವಿಗಳಿಗೆ ಸರ್ಕಾರಿ ಸೌಲಭ್ಯ ವಿತರಿಸುವಾಗ ಆ ಕ್ಷೇತ್ರದ ಶಾಸಕರೂ ಇರಬೇಕೆನ್ನುವುದು ಶಿಷ್ಟಾಚಾರವಾಗಿದೆ. ತಾವು ಸಚಿವರಾಗಿದ್ದರೂ ಸಹ ಶಾಸಕರೇ ಅಲ್ಲವೇ? ಕ್ಷೇತ್ರದ ಶಾಸಕರು ಬರುವ ಮೊದಲೇ ಹಕ್ಕುಪತ್ರ ವಿತರಿಸಿದ್ದೇಕೆ? ನಾವೇನು ಗೆಣಸು ಕೆರೆಯುತ್ತಿದ್ದೇವಾ? ತಹಸೀಲ್ದಾರರಿಗೆ ರೀತಿ-ನಿಯಮ ತಿಳಿದಿಲ್ಲವಾ? ನಮ್ಮ ಗಮನಕ್ಕೆ ತರದೆ ಹಕ್ಕುಪತ್ರ ನೀಡಿದ್ದು, ಅದನ್ನು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ವಿತರಿಸಿದ್ದಾರೆ. ಸಚಿವರಾಗಿ ತಾವು ಸಮರ್ಥನೆ ಮಾಡಬೇಡಿ. ಅಧಿಕಾರಿಗಳ ಇಂತಹ ಬೇಜವಾಬ್ದಾರಿ ನೋಡಿಕೊಂಡು ಶಾಸಕರು ಸುಮ್ಮನೆ ಇರಲಾಗದು. ಸಭೆ ಬಹಿಷ್ಕಾರ ಮಾಡಬೇಕಾಗುತ್ತದೆ ಎಂದು ಶಾಸಕ ಸುನೀಲಕುಮಾರ್ ಎಚ್ಚರಿಕೆ ನೀಡಿದರು.
ತಹಸೀಲ್ದಾರರ ತರಾಟೆ
ಕುಂದಾಪುರ ಶಾಸಕ ಕಿರಣಕುಮಾರ್ ಕೊಡ್ಗಿ ಮಾತನಾಡಿ, ನಮ್ಮ ಕ್ಷೇತ್ರದಲ್ಲೂ ಸಹ ತಹಸೀಲ್ದಾರರು ನಮ್ಮ ಗಮನಕ್ಕೆ ತರದೆ ಹಕ್ಕುಪತ್ರ ವಿತರಿಸಿದ್ದಾರೆ ಎಂದು ಆರೋಪಿಸಿದರು. ರಂಗಾಯಣ ಪುಸ್ತಕ ಮುದ್ರಣದಲ್ಲೂ ಶಿಷ್ಟಾಚಾರ ಪಾಲನೆ ಆಗಿಲ್ಲ. ಉಸ್ತುವಾರಿ ಸಚಿವರು ಹಾಗೂ ಶಾಸಕರ ಭಾವಚಿತ್ರವನ್ನೂ ಅಳವಡಿಸಿಲ್ಲ ಎಂದು ಸುನೀಲಕುಮಾರ್ ಗಮನಕ್ಕೆ ತಂದರು. ಇದರಿಂದ ಆಕ್ರೋಶಗೊಂಡ ಸಚಿವೆ ಲಕ್ಷ್ಮೀ, ಕಾರ್ಕಳ ಹಾಗೂ ಕುಂದಾಪುರದ ತಹಸೀಲ್ದಾರರನ್ನು ತರಾಟೆಗೆ ತೆಗೆದುಕೊಂಡರು. ನೀವು ಮಾಡಿರುವ ತಪ್ಪಿನಿಂದ ಸಭೆಯಲ್ಲಿ ನಾವು ಹೇಳಿಸಿಕೊಳ್ಳುವಂತಾಯಿತು. ತಮಗೆ ಶಿಷ್ಟಾಚಾರದ ಪರಿಜ್ಞಾನ ಇಲ್ಲವೇ ಎಂದು ಕಿಡಿಕಾರಿದರು. ತಹಸೀಲ್ದಾರರಿಗೆ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿ ಸ್ವರೂಪಾಗೆ ಆದೇಶಿಸಿದರು. ಮುಂದೆ ಈ ರೀತಿ ಪ್ರಮಾದ ಮರುಕಳಿಸಿದರೆ ಕ್ಷಣಾರ್ಧದಲ್ಲೇ ಸಸ್ಪೆಂಡ್ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್ಪಾಲ್ ಸುವರ್ಣ, ಗುರುರಾಜ್ ಗಂಟಿಹೊಳೆ, ವಿಪ ಸದಸ್ಯರಾದ ಎಸ್.ಎಲ್. ಭೋಜೇಗೌಡ, ಮಂಜುನಾಥ ಭಂಡಾರಿ, ಕಿಶೋರಕುಮಾರ್ ಪುತ್ತೂರು, ಎಸ್ಪಿ ಹರಿರಾಂ ಶಂಕರ್, ಜಿಪಂ ಸಿಇಒ ಪ್ರತೀಕ್ ಬಾಯಲ್, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಇತರರಿದ್ದರು.
ಡಿಎಚ್ಒಗೆ ಕ್ಲರಿಕಲ್ ಕೆಲಸಕ್ಕೆ ಹಾಕಿ
ಕಾರ್ಕಳ ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇಲ್ಲ. ಸುಸಜ್ಜಿತ ಕಟ್ಟಡ ಇದ್ದು ಏನು ಪ್ರಯೋಜನ ಎಂದು ಶಾಸಕ ಸುನೀಲಕುಮಾರ್ ಪ್ರಶ್ನಿಸಿದರು, ವೈದ್ಯರು ಬರುತ್ತಿಲ್ಲ ಎಂದು ಡಿಎಚ್ಒ ಡಾ. ಬಸವಾರಜ್ ಅಸಹಾಯಕತೆ ವ್ಯಕ್ತಪಡಿಸಿದರು. ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕಲ್ಲ ಎಂದು ಸಚಿವೆ ತಿಳಿಸಿದರು. ಶ್ರೀನಿವಾಸ ಮೆಡಿಕಲ್ ಕಾಲೇಜಿನವರು ಪ್ರಸ್ತಾಪ ಇಟ್ಟಿದ್ದಾರೆ ಎಂದು ಡಿಎಚ್ಒ ತಿಳಿಸಿದರು. ಶಾಸಕ ಗುರುರಾಜ ಗಂಟಿಹೊಳೆ, ಜಿಲ್ಲೆಯಲ್ಲಿ 108 ಆಂಬುಲೆನ್ಸ್ ಸರಿಯಾಗಿಲ್ಲ. ಚಾಲಕರೂ ಇಲ್ಲ ಎಂದು ಆಕ್ಷೇಪಿಸಿದರು. ಇದಕ್ಕೆ ಡಿಎಚ್ಒ ಪ್ರತಿಕ್ರಿಯಿಸಿ, 108 ಸಮಸ್ಯೆ ಇಡೀ ರಾಜ್ಯದಲ್ಲಿದೆ ಎಂದರು. ಅದರಿಂದ ಗರಂ ಆದ ಸಚಿವೆ ಲಕ್ಷ್ಮೀ, ಏನ್ರೀ ಮಾತಾಡ್ತೀದಿರಾ, ಇಲಾಖೆಯ ಮರ್ಯಾದೆ ತೆಗೀತೀರಾ ಎಂದು ಪ್ರಶ್ನಿಸಿದರು. ಪ್ರತಿ ಪ್ರಶ್ನೆಗೂ ಡಿಎಚ್ಒ ಸರಿಯಾದ ಉತ್ತರ ನೀಡದ್ದರಿಂದ ಆಕ್ರೋಶಿತರಾದ ಎಂಎಲ್ಸಿ ಭೋಜೇಗೌಡ, ಅವರಿಂದ ಇಲಾಖೆ ನಡೆಸೋಕೆ ಆಗುತ್ತಿಲ್ಲ. ಅವರನ್ನು ಬೇರೆ ಕ್ಲರಿಕಲ್ ಕೆಲಸಕ್ಕೆ ಹಾಕಿ, ಇಂಥ ಜಿಲ್ಲೆಯಲ್ಲಿ ಇರೋದಕ್ಕೆ ನಾಲಾಯಕ್ ಎಂದು ಹರಿಹಾಯ್ದರು.
ಪತ್ರಕರ್ತರಿಗೆ ಅವಮಾನ, ವರದಿಗೆ ಅಡ್ಡಿ
ತ್ರೈಮಾಸಿಕ ಕೆಡಿಪಿ ಸಭೆಯ ವರದಿ ಮಾಡಲು ಆಗಮಿಸಿದ್ದ ಉಡುಪಿ ಜಿಲ್ಲಾ ಪತ್ರಕರ್ತರಿಗೆ ಜಿಲ್ಲಾ ಪಂಚಾಯಿತಿ ಸಿಇಒ ಪ್ರತೀಕ್ ಬಾಯಲ್ ಅಡ್ಡಿ ಪಡಿಸಿದರು. ಸರ್ಕಾರದ ಪ್ರೋಟೋಕಾಲ್ ಪ್ರಕಾರ ಮಾಧ್ಯಮದವರಿಗೆ ಅವಕಾಶವಿಲ್ಲ ಎಂದು ತಿಳಿಸಿ ಸಭೆಯಿಂದ ಹೊರಹೋಗಿ ಎಂದರು. ಎಲ್ಲರೆದುರಿಗೆ ಅವರು ಮಾತನಾಡಿದ ರೀತಿ ಪತ್ರಕರ್ತರಿಗೆ ಅವಮಾನ ಉಂಟಾಯಿತು. ಈ ವೇಳೆ ವಿ.ಪ. ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಎಲ್ಲ ಜಿಲ್ಲೆಯಲ್ಲೂ ಕೆಡಿಪಿ ಸಭೆಗೆ ವರದಿಗಾರರು ಬರುತ್ತಾರೆ. ಅವರಿಗೆಂದೇ ಹಾಲ್ನ ಕೊನೆಯಲ್ಲಿ ಒಂದು ಸಾಲು ಮೀಸಲು ಇಡುತ್ತಾರೆ. ಪತ್ರಕರ್ತರ ಕರ್ತವ್ಯಕ್ಕೆ ತೊಡಕು ಮಾಡಬೇಡಿ. ಅವಕಾಶ ಕೊಡಿ ಎಂದರು. ಇದಕ್ಕೆ ಸಮ್ಮತಿ ನೀಡದ ಉಸ್ತುವಾರಿ ಸಚಿವೆ ಹೆಬ್ಬಾಳ್ಕರ್, ಈ ಬಗ್ಗೆ ಚರ್ಚಿಸಿ, ಮುಂದಿನ ಸಭೆಗೆ ಅವಕಾಶ ಮಾಡಿಕೊಡುತ್ತೇವೆ. ಈಗ ಹೊರಹೋಗಿ ಎಂದು ಅಗೌರವ ತೋರಿದರು. ಸಭೆಯಲ್ಲಿ ಜಿಲ್ಲೆಯ ಐವರು ಶಾಸಕರಿದ್ದರೂ ಈ ಘಟನೆ ನೋಡಿ ಸುಮ್ಮನೆ ಕುಳಿತಿದ್ದ ರೀತಿ ಎಲ್ಲ ಪತ್ರಕರ್ತರಿಗೆ ಅಸಮಾಧಾನ ಮೂಡಿಸಿತು. ಕೆಡಿಪಿ ಸಭೆಯ ಬಳಿಕ ಸಚಿವೆಯ ಸುದ್ದಿಗೋಷ್ಠಿಯನ್ನು ಪತ್ರಕರ್ತರು ಬಹಿಷ್ಕರಿಸಿದರು.