ಗಂಗೊಳ್ಳಿ ಮುಖ್ಯರಸ್ತೆಯಲ್ಲಿ ತೋರಿಕೆಗೆ ಚರಂಡಿ ಸ್ವಚ್ಛತೆ ಮಾಡಿರುವುದು.
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಗಂಗೊಳ್ಳಿ ಮುಖ್ಯರಸ್ತೆಯಲ್ಲಿ ನಡೆಸುತ್ತಿರುವ ಚರಂಡಿ ಸ್ವಚ್ಛತೆ ಕಾಮಗಾರಿಗೆ ಬಗ್ಗೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಂಗೊಳ್ಳಿ ಮುಖ್ಯರಸ್ತೆಯಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆ ನೀರು ಮುಖ್ಯರಸ್ತೆ ಮೇಲೆ ಹರಿಯುತ್ತದೆ. ನೀರು ಹರಿದು ಹೋಗಲು ಇರುವ ಚರಂಡಿಗಳಲ್ಲಿ ಹೂಳು ತುಂಬಿಕೊಂಡು ಗಿಡಗಂಟಿಗಳು ಬೆಳೆದು ನಿಂತಿವೆ. ಇದರಿಂದಾಗಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಮಸ್ಯೆಯಾಗುತ್ತಿದೆ. ಮಳೆಗಾಲ ಪ್ರಾರಂಭವಾಗುವ ಮೊದಲೇ ಚರಂಡಿಯಲ್ಲಿನ ಹೂಳು ತೆಗೆದು ಸ್ವಚ್ಛಗೊಳಿಸುವಂತೆ ಸ್ಥಳೀಯರು ಮನವಿ ಮಾಡಿದ್ದರು.
ಮಳೆಗಾಲ ಪ್ರಾರಂಭವಾದ ಬಳಿಕ ಸ್ಥಳೀಯಾಡಳಿತದ ಮನವಿ ಮೇರೆಗೆ ಚರಂಡಿ ಸ್ವಚ್ಛತೆ ಕಾರ್ಯ ಕೈಗೆತ್ತಿಕೊಂಡಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಕಳೆದ ಒಂದೆರೆಡು ದಿನಗಳಿಂದ ಚರಂಡಿಯಲ್ಲಿನ ಹೂಳು ತೆಗೆದು ಸ್ವಚ್ಛಗೊಳಿಸುವ ಕಾರ್ಯ ನಡೆಸುತ್ತಿದ್ದು, ಚರಂಡಿಯಲ್ಲಿನ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿದೆ. ಹೂಳು ತೆಗೆದಂತೆ ಮಾಡಲಾಗುತ್ತಿದ್ದು, ಚರಂಡಿಯಿಂದ ತೆಗೆದ ಹೂಳನ್ನು ಚರಂಡಿ ಸಮೀಪದಲ್ಲೇ ರಾಶಿ ಹಾಕುತ್ತಿದ್ದಾರೆ. ಮಳೆ ಪ್ರಾರಂಭವಾದರೆ ಈ ಹೂಳು ಮತ್ತೆ ಚರಂಡಿಯೊಳಗೆ ಸೇರುತ್ತದೆ. ಇದರಿಂದ ಚರಂಡಿ ಹೂಳು ತೆಗೆದು ಏನು ಪ್ರಯೋಜನ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
ಚರಂಡಿಯಲ್ಲಿನ ಹೂಳನ್ನು ಸಮಪರ್ಕಕವಾಗಿ ತೆಗೆಯದೆ ಇರುವುದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಿಲ್ಲ. ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸವನ್ನು ಪಿಡಬ್ಲುೃಡಿ ಇಲಾಖೆ ಮಾಡುತ್ತಿದ್ದು, ಸರ್ಕಾರದ ಹಣವನ್ನು ಪೋಲು ಮಾಡಲಾಗುತ್ತಿದೆ. ಈಗ ಮಾಡುತ್ತಿರುವ ಚರಂಡಿ ಸ್ವಚ್ಛತೆ ಕಾಮಗಾರಿಯಿಂದ ಯಾವುದೇ ಪ್ರಯೋಜನವಿಲ್ಲ. ಚರಂಡಿಯಿಂದ ತೆಗೆದ ಹೂಳನ್ನು ಬೇರೆಡೆ ಸಾಗಿಸಬೇಕು, ಚರಂಡಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
ಚರಂಡಿಯನ್ನು ಸರಿಯಾಗಿ ಸ್ವಚ್ಛಗೊಳಿಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಮತ್ತು ಚರಂಡಿಯಿಂದ ತೆಗೆದ ಹೂಳನ್ನು ಬೇರೆಡೆ ಸ್ಥಳಾಂತರಿಸುವಂತೆ ತಿಳಿಸಲಾಗಿದೆ. ಮಳೆ ನೀರು ಹರಿದು ಹೋಗುವ ಚರಂಡಿಯನ್ನು ಮುಚ್ಚಿ ನೀರಿನ ಹರಿವಿಗೆ ಅಡ್ಡಿಯುಂಟು ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
— ಜಯಂತಿ ಖಾರ್ವಿ ಅಧ್ಯಕ್ಷರು, ಗಂಗೊಳ್ಳಿ ಗ್ರಾಪಂ