ಉಡುಪಿಯ ಬೀಡಿನಗುಡ್ಡೆಯ ರುದ್ರಭೂಮಿಯಲ್ಲಿ ಮೃತದೇಹಗಳ ಅಂಗಾಂಗಳ ಅಂತ್ಯಕ್ರಿಯೆ​ ಮಾಡಲಾಯಿತು. ನಿತ್ಯಾನಂದ ಒಳಕಾಡು, ಅನಿಲ್​, ಹರೀಶ್​, ಶಬ್ಬೀರ್​ ಮುಸ್ತಾಕ್​, ಸಿಂಚನಾ ಇದ್ದರು. 
ಉಡುಪಿ

ಅಪರಿಚಿತ ಮೃತದೇಹಗಳ ಅಂಗಾಂಗ ವಿಲೇವಾರಿ

* ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ

* ಮಲ್ಪೆ ಠಾಣೆಯಲ್ಲಿ 2 ವರ್ಷದಿಂದ ಸಂರಕ್ಷಣೆ

ಉಡುಪಿ: ಮರಣೋತ್ತರ ಪರೀಕ್ಷಾ ಕೇಂದ್ರ ಹಾಗೂ ವಿಧಿವಿಜ್ಞಾನ ಕೇಂದ್ರಗಳಲ್ಲಿ ಪರೀಕ್ಷೆಗೆ ಒಳಪಡಿಸಿ, ಸಹಜ ಸಾವು ಎಂದು ದೃಢಪಟ್ಟಿದ್ದ 35 ಅಪರಿಚಿತ ಮೃತದೇಹಗಳ ಅಂಗಾಂಗಗಳನ್ನು ಕಾನೂನು ಪ್ರಕ್ರಿಯೆಯಂತೆ ಮಂಗಳವಾರ (ಅ.6) ವಿಲೇವಾರಿ ಮಾಡಲಾಯಿತು.

ಎರಡು ವರ್ಷದಿಂದ ಮಲ್ಪೆ ಪೊಲೀಸ್​ ಠಾಣಾ ವ್ಯಾಪ್ತಿಯ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಪತ್ತೆಯಾಗಿದ್ದ ಅಪರಿಚಿತ ಮೃತದೇಹಗಳ ಅಂಗಾಂಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಬಳಿಕ ರಾಸಾಯನಿಕ ದ್ರಾವಣದಲ್ಲಿ ಅವುಗಳನ್ನು ಸುರಕ್ಷಿತವಾಗಿ ಹಲವು ಡಬ್ಬಿಗಳಲ್ಲಿ ಹಾಕಿ ಮಲ್ಪೆ ಪೊಲೀಸ್​ ಠಾಣೆಯಲ್ಲಿ ಇಡಲಾಗಿತ್ತು.

ಸಂಬಂಧಪಟ್ಟ ಮೃತದೇಹಗಳನ್ನು ಈ ಹಿಂದೆಯೇ ಅಂತ್ಯಕ್ರಿಯೆ ಮಾಡಲಾಗಿದ್ದು, ಅಂಗಾಂಗಗಳನ್ನು ಬೀಡಿನಗುಡ್ಡೆಯ ರುದ್ರಭೂಮಿಯಲ್ಲಿ ಜೆಸಿಬಿ ಯಂತ್ರದ ನೆರವಿನಿಂದ ಅಂತ್ಯಕ್ರಿಯೆ​ ಮಾಡಲಾಯಿತು.

ಮಲ್ಪೆ ಪೊಲೀಸ್​ ಠಾಣೆಯ ಎಸ್​ಐ ಅನಿಲ್​, ಎಎಸ್​ಐ ಹರೀಶ್​ ಹಾಗೂ ಮುಖ್ಯ ಆರಕ್ಷಕಿ ಸಿಂಚನಾ ಕಾನೂನು ಪ್ರಕ್ರಿಯೆ ನಡೆಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಹಾಗೂ ಶಬ್ಬೀರ್​ ಮುಸ್ತಾಕ್​ ಸಹಕಾರ ನೀಡಿದರು.