DEAD BODY 
ಉಡುಪಿ

ಅರಣ್ಯದಲ್ಲಿ ರುಂಡ ಬೇರ್ಪಟ್ಟ ಮೃತದೇಹ ಪತ್ತೆ

ಕಾಸರಗೋಡು: ರಾಜಪುರಂಗೆ ಸಮೀಪದ ವಟ್ಟಕಯಂ ಎನ್.ಎಸ್.ಎಸ್ ಎಸ್ಟೇಟ್ ಸಮೀಪದ ಕರಿಂಕೋಲ್‌ನ ಅರಣ್ಯದಲ್ಲಿ ರುಂಡ ಬೇರ್ಪಟ್ಟ ಅಪರಿಚಿತ ಗಂಡಸಿನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಆಣಬೆ ಸಂಗ್ರಹಕ್ಕಾಗಿ ಕಾಡಿಗೆ ತೆರಳಿದವರು ಮೃತದೇಹ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರಾಜಪುರಂ ಠಾಣೆ ಪೊಲೀಸರು ಮತ್ತು ಪನತ್ತಡಿ ಸೆಕ್ಷನ್ ಅರಣ್ಯಾಧಿಕಾರಿಗಳು ವಿಧಿವಿಜ್ಞಾನ ತಜ್ಞರೊಂದಿಗೆ ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿ, ಮರಣೋೀತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕಣ್ಣೂರು ವೈದ್ಯಕೀಯ ಕಾಲೇಜಿಗೆ ಸಾಗಿಸಿದ್ದಾರೆ.
ಮೃತದೇಹದಿಂದ ತಲೆ ಪೂರ್ಣವಾಗಿ ಬೇರ್ಪಟ್ಟ ಸ್ಥಿತಿಯಲ್ಲಿದ್ದು, ಪಕ್ಕದಲ್ಲೇ ಪ್ಲಾಸ್ಟಿಕ್ ಹಗ್ಗ ಪತ್ತೆಯಾಗಿದೆ. ನೇಣುಬಿಗಿದು ಮೃತಪಟ್ಟಿರಬಹುದೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಹೆಚ್ಚಿನ ತನಿಖೆ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.