ಕರ್ನಾಟಕ ಸಮಿತಿ ನೇತೃತ್ವದಲ್ಲಿ ಮಂಜೇಶ್ವರ ಶಾಸಕ ಎಕೆಎಂ ಅಶ್ರ್ ಅವರನ್ನು ಸನ್ಮಾನಿಸಲಾಯಿತು. ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಎ.ಆರ್.ಸುಬ್ಬಯ್ಯಕಟ್ಟೆ, ಎನ್.ಕೆ.ಮೋಹನದಾಸ್ ಇತರರಿದ್ದರು.
ಉಪ್ಪಳ: ಕೇರಳಂ ಸರ್ಕಾರ ಅನುಮೋದಿಸಿರುವ ಮಲಯಾಳ ಭಾಷಾ ಮಸೂದೆ ಹಾಗೂ ಅದರಿಂದ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಸಮಗ್ರ ವಾಹಿತಿಯೊಂದಿಗೆ ಕಾಸರಗೋಡಿನ ಕರ್ನಾಟಕ ಸಮಿತಿ ಪದಾಧಿಕಾರಿಗಳು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅವರನ್ನು ಮಣ್ಣಂಗುಳಿಯಲ್ಲಿ ಶನಿವಾರ ಭೇಟಿ ಮಾಡಿ ಸಮಾಲೋಚಿಸಿದರು.
ವಿಧಾನಸಭೆಯಲ್ಲಿ ಅನುಮೋದನೆಗೊಂಡಿರುವ ಮಲಯಾಳ ಭಾಷಾ ಮಸೂದೆ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕಿಗೆ ಚ್ಯುತಿ ತರುವಂತಿದೆ. ಇಲ್ಲಿರುವ ಸಾವಿರಾರು ಕನ್ನಡ ವಿದ್ಯಾರ್ಥಿಗಳು, ಶಿಕ್ಷಕರು, ಉದ್ಯೋಗಿಗಳಿಗೆ ಭಾರಿ ತೊಂದರೆ ಆಗಲಿದೆ. ಈ ನಿಟ್ಟಿನಲ್ಲಿ ಮಸೂದೆಗೆ ತಿದ್ದುಪಡಿ ತರಲು ಒತ್ತಡ ಹೇರುವಂತೆ ಶಾಸಕರಿಗೆ ಮನವರಿಕೆ ಮಾಡಲಾಯಿತು.
ಈ ನಿಟ್ಟಿನಲ್ಲಿ ಕಾನೂನು ಪ್ರಕ್ರಿಯೆಗಳನ್ನು ಅರಿತುಕೊಂಡು ವ್ಯತಿರಿಕ್ತ ಪರಿಣಾಮಗಳಾಗದಂತೆ ಕ್ರಮ ಕೈಗೊಳ್ಳುವುದಾಗಿ ಶಾಸಕ ಅಶ್ರಫ್ ಭರವಸೆ ನೀಡಿದರು.
ಶಾಸಕರನ್ನು ಕಾಸರಗೋಡು ಕರ್ನಾಟಕ ಸಮಿತಿ ಹಾಗೂ ಕೇರಳ ಪ್ರಾಂತ್ಯ ಕನ್ನಡ ವಾಧ್ಯಮ ಅಧ್ಯಾಪಕ ಸಂದ ವತಿಯಿಂದ ಅಭಿನಂದಿಸಲಾಯಿತು. ಕಸಾಪ ಕೇರಳ ಗಡಿನಾಡ ಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಪ್ರಮುಖರಾದ ಎನ್.ಕೆ.ಮೋಹನದಾಸ್, ಮಹಾಲಿಂಗೇಶ್ವರ ರಾಜ್, ಪುಂಡರೀಕಾಕ್ಷ ಆಚಾರ್ಯ, ರಾಮಮೂರ್ತಿ, ವೈ.ಸತ್ಯನಾರಾಯಣ, ಶಂಕರನಾರಾಯಣ ಭಟ್ ತೆಕ್ಕೆಕೆರೆ, ಸುಕೇಶ್, ಪ್ರದೀಪ್ ಕುವಾರ್ ಶೆಟ್ಟಿ ಬೇಳ, ಜಬ್ಬಾರ್ ಉಪಸ್ಥಿತರಿದ್ದರು.