ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿದರು. 
ಉಡುಪಿ

ಜಿಲ್ಲೆಯಲ್ಲಿರುವ ಕಾಲುಸಂಕಗಳ ಗುಣಮಟ್ಟ ಪರಿಶೀಲಿಸಲು ಸೂಚನೆ

ಉಡುಪಿ: ಜಿಲ್ಲೆಯಲ್ಲಿರುವ ಕಾಲುಸಂಕಗಳ ಗುಣಮಟ್ಟವನ್ನು ತಾಂತ್ರಿಕ ತಂಡದೊಂದಿಗೆ ಪರಿಶೀಲಿಸಿ, ಸ್ಥಿತಿಗತಿ ಕುರಿತ ಸಮರ್ಪಕ ವರದಿ ನೀಡುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸೂಚನೆ ನೀಡಿದರು. 

 ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ 600 ಕ್ಕೂ ಹೆಚ್ಚು ಕಾಲುಸಂಕಗಳಿದ್ದು, ಶಿಥಿಲಾವಸ್ಥೆಯಲ್ಲಿರುವ ಕಾಲುಸಂಕಗಳ ಮೇಲೆ ಸಾರ್ವಜನಿಕರು,  ಸಂಚರಿಸಿದ್ದಲ್ಲಿ ಪ್ರಾಣಹಾನಿ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಆದ್ದರಿಂದ ಹೊಸ ಕಾಲುಸಂಕಗಳ ನಿರ್ಮಾಣದ ಜೊತೆಗೆ ಈಗಾಗಲೇ ಅಸ್ತಿತ್ವದಲ್ಲಿರುವ ಕಾಲುಸಂಕಗಳ ದುರಸ್ತಿಗೆ ಆದ್ಯತೆಯ ಮೇಲೆ ಕ್ರಮವಹಿಸಬೇಕು ಎಂದರು. 

ಜಿಲ್ಲೆಯಲ್ಲಿ ಪ್ರಸ್ತುತ ವರ್ಷದಲ್ಲಿ ಈವರೆಗೆ ವಾಡಿಕೆಗೆ 1959 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 1182 ಮಿ.ಮೀ ನಷ್ಟು ಮಳೆಯಾಗಿ ಶೇ. 40 ರಷ್ಟು ಮಳೆಯ ಕೊರತೆ ಆಗಿದೆ.  ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಈವರೆಗೂ ಕಂಡುಬಂದಿಲ್ಲ. ಮುಂದಿನ 44 ವಾರಗಳಿಗೆ ಆಗುವಷ್ಟು ಮೇವಿನ ದಾಸ್ತಾನು ಲಭ್ಯವಿದೆ. ಮುಂಗಾರು ಹಂಗಾಮಿನಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜಗಳ ಪೂರೈಕೆ ಮಾಡಬೇಕು.  ರಸಗೊಬ್ಬರ ವಿತರಣೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಹಾಗೂ ಕೃತಕ ಅಭಾವ ಸೃಷ್ಟಿಯಾಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಈಗಾಗಲೇ ಜಿಲ್ಲೆಯಲ್ಲಿ 4720 ಮೆ.ಟನ್ ನಷ್ಟು ರಸಗೊಬ್ಬರ ದಾಸ್ತಾನು ಇದ್ದು, ಸಮತೋಲಿತ ರಸಗೊಬ್ಬರ ಬಳಕೆ, ಮಣ್ಣು ಪರೀಕ್ಷಾ ಆಧಾರಿತ ಪೋಷಕಾಂಶಗಳ ಶಿಫಾರಸ್ಸು ಹಾಗೂ ಹಸಿರೆಲೆ ಗೊಬ್ಬರದ ಬೀಜಗಳ ಬಳಕೆಯ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು ಎಂದರು. 

 ಜಿಲ್ಲೆಯಲ್ಲಿ ಪ್ರಸ್ತುತ ಜನವರಿ ಯಿಂದ ಜೂನ್ ವರೆಗೆ ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದAತೆ 9.34 ಹೆಕ್ಟೇರ್‌ಗಳಷ್ಟು ಪ್ರದೇಶದಲ್ಲಿ ಅಡಿಕೆ ಹಾಗೂ ತೆಂಗು ಬೆಳೆಗಳ ಹಾನಿಯಾಗಿ 28.64 ಲಕ್ಷ ರೂ. ನಷ್ಟ ಉಂಟಾಗಿದೆ. ಬೆಳೆ ಹಾನಿ ಪರಿಹಾರವನ್ನು ಶೀಘ್ರವಾಗಿ ವಿತರಿಸಬೇಕು. ಕಾರ್ಕಳ ತಾಲೂಕಿನ 17 ಗ್ರಾಮ ಪಂಚಾಯಿತಿಗಳ 21 ಗ್ರಾಮ, ಕುಂದಾಪುರ ತಾಲೂಕಿನ 36 ಗ್ರಾಪಂಗಳ 57 ಗ್ರಾಮ, ಉಡುಪಿ ತಾಲೂಕಿನ 4 ಗ್ರಾಪಂಗಳ 6 ಗ್ರಾಮ, ಬೈಂದೂರು ತಾಲೂಕಿನ 15  ಗ್ರಾಪಂಗಳ 22 ಗ್ರಾಮ, ಬ್ರಹ್ಮಾವರ ತಾಲೂಕಿನ 13 ಗ್ರಾಪಂಗಳ  25 ಗ್ರಾಮ, ಕಾಪು ತಾಲೂಕಿನ 4 ಗ್ರಾಪಂಗಳ 5 ಗ್ರಾಮ ಹಾಗೂ ಹೆಬ್ರಿ ತಾಲೂಕಿನ 5 ಗ್ರಾಪಂಗಳ 10 ಗ್ರಾಮಗಳು ಸೇರಿದಂತೆ ಒಟ್ಟು 94  ಗ್ರಾಪಂಗಳ 146 ಗ್ರಾಮಗಳಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಬಹುದಾದ ಸಾಧ್ಯತೆ ಇದೆ. ಹೀಗಾಗಿ ಪರ್ಯಾಯ ಮೂಲಗಳಿಂದ ಕುಡಿಯುವ ನೀರಿನ ಸರಬರಾಜು ಮಾಡಬೇಕು. ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ಕುಡಿಯುವ ನೀರಿನ ಪೂರೈಕೆಯಲ್ಲಿ ಅಭಾವ ಉಂಟಾಗದಂತೆ ನೋಡಿಕೊಳ್ಳಬೇಕು ಎಂದರು.

 ಜಿಲ್ಲೆಯಲ್ಲಿರುವ ಶಾಲಾ – ಅಂಗನವಾಡಿ ಕಟ್ಟಡ ಹಾಗೂ ಕೊಠಡಿಗಳ ಸದೃಢತೆಯ ಬಗ್ಗೆ ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಲಾಖೆಗಳ ಅಭಿಯಂತರರು, ಶಿಕ್ಷಣ ಇಲಾಖೆ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸಿ, ಸುರಕ್ಷತೆಯ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಒಂದೊಮ್ಮೆ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ಬಳಕೆಗೆ ಯೋಗ್ಯವಿಲ್ಲದಿದ್ದಲ್ಲಿ ಅಂತಹ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸದೇ ಬದಲೀ ವ್ಯವಸ್ಥೆಯನ್ನು ಕೈಗೊಳ್ಳಬೇಕು ಎಂದರು.  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿದರು. ಸಭೆಯಲ್ಲಿ ಡಿ.ಎಫ್.ಓ ರುಥ್ರೇನ್ ಪಿ, ವೈಲ್ಡ್ಲೈಫ್ ಡಿ.ಎಫ್.ಓ ಶಿವರಾಮ ಎಂ ಬಾಬು, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಸಹಾಯಕ ಕಮೀಷನರ್ ರಶ್ಮಿ ಮತ್ತಿತರರು ಉಪಸ್ಥಿತರಿದ್ದರು.