ಉಡುಪಿಯ ಸರ್ವೀಸ್ ಬಸ್ ನಿಲ್ದಾಣದ ಬಳಿ ಇರುವ ಡ್ರೈನೇಜ್ ಚೇಂಬರ್ನಿಂದ ಮಲೀನ ನೀರು ಹೊರ ಬರುತ್ತಿರುವುದು.
ಉಡುಪಿ
ಬಸ್ ನಿಲ್ದಾಣದಲ್ಲಿ ಗಬ್ಬು ವಾಸನೆ
* ಡ್ರೈನೇಜ್ನಿಂದ ಹೊರಸೂಸುತ್ತಿದೆ ಮಲೀನ ನೀರು
* ಮೂಗುಮುಚ್ಚಿ ನಿಲ್ಲುತ್ತಿರುವ ಪ್ರಯಾಣಿಕರು
ಪ್ರಶಾಂತ ಭಾಗ್ವತ ಉಡುಪಿ
ನಗರದಲ್ಲಿ ಒಳಚರಂಡಿ ವ್ಯವಸ್ಥೆ ಇನ್ನೂ ಸಮರ್ಪಕವಾಗಿ ಪೂರ್ಣಗೊಳ್ಳದ್ದರಿಂದ ಒಂದಲ್ಲ ಒಂದು ವಾರ್ಡ್ನಲ್ಲಿ ನಿತ್ಯವೂ ಡೆನೇಜ್ ಸಮಸ್ಯೆ ಕಾಡುತ್ತಿದೆ. ಡ್ರೈನೇಜ್ ಚೇಂಬರ್ನಿಂದ ಮಲೀನ ನೀರು ಉಕ್ಕಿ ಹೊರಸೂಸುತ್ತಿದ್ದು, ಸುತ್ತಲಿನ ಪರಿಸರ ಹದಗೆಡಿಸುತ್ತಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಪ್ರಯಾಣಿಕರು ಸೇರುವ ಉಡುಪಿ ನಗರದ ಸರ್ವೀಸ್ ಬಸ್ ನಿಲ್ದಾಣದಲ್ಲಿಯೇ ಡ್ರೈನೇಜ್ ಚೇಂಬರ್ನಿಂದ ಮನೆಗಳ ತ್ಯಾಜ್ಯ ನೀರು ಹೊರ ಬರುತ್ತಿದೆ. ನಿಲ್ದಾಣದ ತುಂಬ ಗಬ್ಬು ವಾಸನೆ ಹಬ್ಬಿದ್ದು, ಬಸ್ಗೆ ಕಾಯಲು ಜನರಿಗೆ ನಿಲ್ಲಲಾರದ ಪರಿಸ್ಥಿತಿ ಉಂಟಾಗಿದೆ.
ನಿಲ್ದಾಣದೊಳಗೂ ಕೊಳಕು ನೀರು
ಡ್ರೈನೇಜ್ನ ಮಲೀನ ನೀರು ಹೊರ ಹರಿದು ಸಂಪೂರ್ಣ ನಿಲ್ದಾಣದೊಳಗೆ ಆವರಿಸಿದೆ. ಅದೇ ಕೊಳಕು ನೀರಿನ ಮೆಲೇಯೇ ಬಸ್ ಸಂಚರಿಸುತ್ತಿದೆ. ಅಲ್ಲದೆ, ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಸಹ ಅದೇ ಮಲೀನ ನೀರಿನ ಮೇಲೆಯೇ ಬಸ್ ನಿಲ್ಲಿಸುವಂತಾಗಿದೆ. ಬಸ್ ಹತ್ತುವ ಹಾಗೂ ಇಳಿಯುವ ಪ್ರಯಾಣಿಕರು ಅಸಹ್ಯಪಡುತ್ತ ಮಲೀನ ನೀರಿನ ಮೆಲೇಯೇ ನಡೆದು ಹೋಗುವಂತಾಗಿದೆ.
ಪ್ರಯಾಣಿಕರಿಗೆ ವಾಕರಿಕೆ
ಬಸ್ ನಿಲ್ದಾಣದಲ್ಲಿ ಹರಡಿರುವ ಗಬ್ಬು ವಾಸನೆಯಿಂದ ಸಮೀಪದಲ್ಲಿರುವ ಹೋಟೆಲ್ನಲ್ಲಿ ಗ್ರಾಹಕರಿಗೆ ಆಹಾರ ಸೇವಿಸಲೂ ತೊಂದರೆಯಾಗುತ್ತಿದೆ. ಬಸ್ ನಿಲ್ದಾಣದಲ್ಲಿ ನಿಲ್ಲಲು ಆಗುತ್ತಿಲ್ಲ. ವಾಕರಿಕೆ ಬರುವಂತಾಗುತ್ತದೆ. ಉಸಿರಾಡಲು ಆಗದಷ್ಟು ವಾಸನೆ ಬರುತ್ತಿದೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ನಗರಸಭೆಗೆ ಪ್ರಸ್ತುತ ಆಡಳಿತಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರು ಕೂಡಲೇ ಉಡುಪಿ ನಗರದ ಡ್ರೈನೇಜ್ ವ್ಯವಸ್ಥೆ ಸಮರ್ಪಕಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಗರವಾಸಿಗರು ಆಗ್ರಹಿಸಿದ್ದಾರೆ.
ಇಂದ್ರಾಣಿ ನದಿಯ ನೀರೂ ಕಲುಷಿತ!!
ಡ್ರೈನೇಜ್ ಮೂಲಕ ಹರಿಯುವ ನೀರನ್ನು ಇಂದ್ರಾಣಿ ನದಿಗೆ ಬಿಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಇಂದ್ರಾಣಿಯ ನದಿ ನೀರೂ ಸಹ ಕಲುಷಿತಗೊಳ್ಳುತ್ತಿದೆ. ಅಲ್ಲದೆ, ನದಿ ಸುತ್ತಮುತ್ತಲಿನ ಮನೆಗಳ ಬಾವಿಗಳ ನೀರೂ ಸಹ ಕಂದು ಬಣ್ಣವಾಗುತ್ತಿದ್ದು, ಕುಡಿಯಲು ಯೋಗ್ಯವಾಗುತ್ತಿಲ್ಲ. ನೀರು ವಾಸನೆಯಾಗಿರುವುದರಿಂದ ಬಟ್ಟೆ ತೊಳೆಯಲೂ ಸಹ ಸಾಧ್ಯವಾಗುತ್ತಿಲ್ಲ. ಮಣಿಪಾಲದಲ್ಲೂ ಡ್ರೈನೇಜ್ ವ್ಯವಸ್ಥೆಯೇ ಇಲ್ಲ. ಅಲ್ಲಿನ ಮನೆಗಳ ಹಾಗೂ ರೆಸ್ಟೋರೆಂಟ್ಗಳ ಮಲೀನ ನೀರನ್ನು ನೇರವಾಗಿ ಚರಂಡಿಗೇ ಬಿಡುತ್ತಿದ್ದಾರೆ. ಉಡುಪಿ ನಗರದಲ್ಲೂ ಸಹ ಹಲವರ ಮನೆಗಳ ಮಲೀನ ನೀರು ಡ್ರೈನೇಜ್ಗೆ ಸಂಪರ್ಕವಿಲ್ಲದ್ದರಿಂದ ಚರಂಡಿಗೇ ಬಿಡುತ್ತಿದ್ದಾರೆ ಎನ್ನಲಾಗಿದೆ.
"
ಉಡುಪಿ ಸರ್ವೀಸ್ ಬಸ್ ನಿಲ್ದಾಣದ ಬಳಿ ಇರುವ ಡ್ರೈನೇಜ್ನಿಂದ ಮಲೀನ ನೀರು ಹೊರಗೆ ಬರುತ್ತಿದ್ದು ಗಬ್ಬು ವಾಸನೆ ತಡೆಯಲಾಗುತ್ತಿಲ್ಲ. ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಮೂಗುಮುಚ್ಚಿ ನಿಂತುಕೊಳ್ಳುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಡ್ರೈನೇಜ್ ಸರಿಪಡಿಸಿ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆ ನಿವಾರಿಸಬೇಕು.
"
ಹೆಚ್ಚು ಜನಜಂಗುಳಿ ಇರುವ ಸರ್ವೀಸ್ ಬಸ್ ನಿಲ್ದಾಣದ ಬಳಿಯೇ ಡ್ರೈನೇಜ್ ಚೆಂಬರ್ನಿಂದ ಕೊಳಕು ನೀರು ಹೊರಸೂಸುತ್ತಿದೆ. ಅತ್ತ ಸುಳಿದಾಡಲೂ ಆಗದಷ್ಟು ವಾಸನೆ ಬರುತ್ತಿದೆ. ನಗರಾಡಳಿತ ವಿಳಂಬ ಮಾಡದೆ ದು:ಸ್ಥಿತಿಯಲ್ಲಿರುವ ಇಂತಹ ಚೇಂಬರ್ಗಳನ್ನು ದುರಸ್ತಿ ಮಾಡಬೇಕು. ಇನ್ನು ಒಂದೂವರೆ ತಿಂಗಳಲ್ಲಿ ಮಳೆಗಾಲವೂ ಆರಂಭವಾಗಲಿದ್ದು ಡ್ರೈನೇಜ್ ಸಮಸ್ಯೆ ಇನ್ನಷ್ಟು ಬಿಗಡಾಯಿಸುವುದು ಖಚಿತ.