ಉಡುಪಿ ತಾಲೂಕಿನ ಕೆಳಾರ್ಕಳಬೆಟ್ಟು ಸಿಎಸ್ಸಿ ಕೇಂದ್ರದಲ್ಲಿ ಡಿಜಿ-ಪೇ ಸೌಕರ್ಯಕ್ಕೆ ಆನಂದ ಸುವರ್ಣ ಚಾಲನೆ ನೀಡಿದರು. ನಾಗರಾಜ್ ಶೆಟ್ಟಿ, ಸುರೇಂದ್ರ, ದಿಲೀಪ್ ಜೈನ್ ಇತರರಿದ್ದರು.
* ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಅನಿಸಿಕೆ
* ಸಿಎಸ್ಸಿ ಕೇಂದ್ರದಲ್ಲಿ ಸೌಲಭ್ಯಕ್ಕೆ ಚಾಲನೆ
ಉಡುಪಿ: ಹಳ್ಳಿಗಳಲ್ಲಿರುವ ಜನರು ತಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ತೆಗೆಯಲು ದೂರದ ಪ್ರದೇಶಗಳಲ್ಲಿರುವ ಎಟಿಎಂಗಳಿಗೆ ತೆರಳಬೇಕಾಗುತ್ತದೆ. ಅದರ ಬದಲಾಗಿ ಇದೀಗ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಎಸ್ಸಿ ಕೇಂದ್ರಗಳಲ್ಲಿಯೇ ಡಿಜಿ-ಪೇ ಮೂಲಕ ತಮ್ಮ ಊರಿನಲ್ಲಿಯೇ ಹಣ ಹಿಂಪಡೆಯಬಹುದಾಗಿದೆ. ಗ್ರಾಮೀಣ ಜನರಿಗೆ ಈ ಸೌಕರ್ಯ ವರದಾನವಾಗಲಿದೆ ಎಂದು ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿ ತಾಲೂಕಿನ ಕೆಳಾರ್ಕಳಬೆಟ್ಟು ಸಿಎಸ್ಸಿ ಕೇಂದ್ರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ನ ಡಿಜಿ-ಪೇ ಸೌಲಭ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮದಲ್ಲಿಯೇ ಡಿಜಿ-ಪೇ ವ್ಯವಸ್ಥೆ ಲಭ್ಯ ಇರುವುದರಿಂದ ಜನರಿಗೆ ಸಮಯ ಮತ್ತು ಓಡಾಟದ ಖರ್ಚು-ವೆಚ್ಚಗಳೂ ಉಳಿತಾಯವಾಗಲಿದೆ. ಬ್ಯಾಂಕಿಗೆ ಹೋಗಿ ರಶೀದಿ ಬರೆಯುವ ಅಥವಾ ಎಟಿಎಂ ಕಾರ್ಯದ ಬಗ್ಗೆ ಗೊಂದಲ ಮಾಡಿಕೊಳ್ಳುವ ಅಗತ್ಯತೆಯೂ ಇಲ್ಲ ಎಂದರು.
ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ, ತಾಲೂಕು ಯೋಜನಾಧಿಕಾರಿ ಸುರೇಂದ್ರ, ಸಿಎಸ್ಸಿ ವಿಭಾಗದ ಯೋಜನಾಧಿಕಾರಿ ದಿಲೀಪ್ ಜೈನ್, ತಾಲೂಕು ನೋಡಲ್ ಅಧಿಕಾರಿ, ಸೇವಾ ಪ್ರತಿನಿಧಿಗಳು ಮತ್ತು ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.