ಬಂಟ್ವಾಳ ತಾಲೂಕು ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ತರಬೇತಿ ಕಾರ್ಯಾಗಾರವನ್ನು ಮೊಕ್ತೇಸರ ರಘುನಾಥ ಸೋಮಯಾಜಿ ಉದ್ಘಾಟಿಸಿದರು. ಶಾಂತಿಲಾಲ್ ಜಟಿಯಾ, ದಿನೇಶ್ ಡಿ., ಜೈವಂತ್ ಪಟಗಾರ, ಕೃಷ್ಣಪ್ಪ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.
ಬಂಟ್ವಾಳ: ವೀರೇಂದ್ರ ಹೆಗ್ಡೆ ಅವರ ದೂರದೃಷ್ಟಿಯ ಯೋಜನೆ ಸಮಾಜಕ್ಕೆ ಮಾದರಿಯಾಗಿದೆ. ಸರ್ಕಾರಗಳು ಮಾಡದಂತಹ ಕೆಲಸವನ್ನು ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ಮೂಲಕ ಕಾರ್ಯರೂಪಕ್ಕೆ ತಂದು ಬಡವರ ಪಾಲಿನ ಆಶಾಕಿರಣರಾಗಿದ್ದಾರೆ ಎಂದು ನರಿಕೊಂಬು ಶ್ರೀ ಭಯಂಕೇಶ್ವರ ದೇವಳ ಆಡಳಿತ ಮೊಕ್ತೇಸರ ರಘುನಾಥ ಸೋಮಯಾಜಿ ಹೇಳಿದರು.
ನರಿಕೊಂಬು ಶ್ರೀ ಭಯಕೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಗುರುವಾರ ಬಂಟ್ವಾಳ ತಾಲೂಕು ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನೇತ್ರಾವತಿ ನದಿಯ ತಟದಲ್ಲಿ ಬಂಟ್ವಾಳ ತಾಲೂಕಿನ 90 ಶೌರ್ಯ ಸ್ವಯಂ ಸೇವಕರಿಗೆ ಪ್ರಾತ್ಯಕ್ಷಿಕೆ ಮೂಲಕ ವಿಪತ್ತಿನಲ್ಲಿ ಪ್ರಥಮ ಸ್ಪಂದನೆ, ಈಜುವಿಕೆ, ಪ್ರವಾಹ ಕುರಿತು ಅಣಕು ಪ್ರದರ್ಶನ ಮತ್ತು ತರಬೇತಿ ನೀಡಲಾಯಿತು.
ಶೌರ್ಯ ಸಮಿತಿ ತಾಲೂಕು ಮಾಸ್ಟರ್ ಹಾಗೂ ಕ್ಯಾಪ್ಟನ್ ಆಯ್ಕೆ ಮಾಡಲಾಯಿತು. ಬಂಟ್ವಾಳ ಶೌರ್ಯ ಸಮಿತಿ ಮಾಸ್ಟರ್ ಆಗಿ ಪ್ರವೀಣ್ ಕಾಡಬೆಟ್ಟು, ಕ್ಯಾಪ್ಟನ್ ಆಗಿ ಜಗದೀಶ್ ಆಚಾರ್ಯ ಆಯ್ಕೆಯಾದರು.
ಎನ್‌ಡಿಆರ್‌ಎಫ್ ಕಮಾಂಡರ್ ಶಾಂತಿಲಾಲ್ ಜಟಿಯಾ, ಜಿಲ್ಲಾ ನಿರ್ದೇಶಕ ದಿನೇಶ್ ಡಿ., ಶೌರ್ಯ ಯೋಜನಾಧಿಕಾರಿಗಳಾದ ಜೈವಂತ್ ಪಟಗಾರ, ತಾಲೂಕು ಶೌರ್ಯ ಸಮಿತಿ ಮಾಸ್ಟರ್ ಕೃಷ್ಣಪ್ಪ ಕುಲಾಲ್, ಕ್ಯಾಪ್ಟನ್ ಪ್ರಕಾಶ್, ಪ್ರಗತಿ ಬಂದು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಅಧ್ಯಕ್ಷ ಸದಾನಂದ ಉಪಸ್ಥಿತರಿದ್ದರು.
ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ.ಸ್ವಾಗತಿಸಿದರು. ಜನಜಾಗೃತಿ ಮೇಲ್ವಿಚಾರಕ ನಿತೇಶ್ ಕೆ. ಕಾರ್ಯಕ್ರಮ ನಿರ್ವಹಿಸಿದರು.
ಧರ್ಮಸ್ಥಳದ ಶೌರ್ಯ ತಂಡ ರಾಜ್ಯದಲ್ಲಿ ಉಂಟಾಗುವ ವಿಪತ್ತಿನ ಸಂದರ್ಭ ಸೇವೆ ನೀಡುತ್ತಾ ಬಂದಿದೆ. ಆಪತ್ತಿನ ಸಂದರ್ಭದಲ್ಲಿ ಆತ್ಮಸ್ಥೈರ್ಯದಿಂದ ಸ್ಪಂದಿಸಿ, ಸಂಕಷ್ಟದಲ್ಲಿರುವವರ ಜೀವ, ಜೀವನಕ್ಕೆ ನೆರವಾಗುವ ಕಾರ್ಯ ಮಾಡುತ್ತಿದೆ.
— ವಿವೇಕ್ ವಿ.ಪಾಯಸ್, ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ