ಕೆಸರುಗದ್ದೆಯಂತಾದ ಮೂಡುಗಲ್ಲು ಸಂಪರ್ಕ ರಸ್ತೆ.
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಕೆರಾಡಿ ಗ್ರಾಮದ ಮೂಡುಗಲ್ಲಿನ ಶ್ರೀ ಕೇಶವನಾಥೇಶ್ವರ ಗುಹಾಂತರ ದೇವಸ್ಥಾನ ಸಂಪರ್ಕಿಸುವ ಮಣ್ಣಿನ ರಸ್ತೆ ಆರಂಭದ ಮಳೆಗೆ ಸಂಪೂರ್ಣ ಹಾಳಾಗಿದ್ದು, ಇದರಿಂದ ಇಲ್ಲಿಗೆ ಬರುವ ಭಕ್ತರು ಕೆಸರುಮಯ ರಸ್ತೆಯಲ್ಲಿ ಸಿಲುಕಿ ಪರದಾಟ ನಡೆಸುವಂತಾಗಿದೆ.
ಚಿತ್ರರಂಗದ ವಿವಿಧ ಗಣ್ಯರು ಇಲ್ಲಿಗೆ ಭೇಟಿ ನೀಡಿದ ಬಳಿಕ ಈ ದೇಗುಲಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಳವಾಗಿದ್ದು, ಸಂಪರ್ಕ ರಸ್ತೆಯ ಅವ್ಯವಸ್ಥೆಯಿಂದಾಗಿ ಭಕ್ತರು ತೊಂದರೆ ಅನುಭವಿಸುತ್ತಿದ್ದಾರೆ. ಮಳೆಗಾಲ ಶುರುವಾದ ಬಳಿಕ ಇಲ್ಲಿನ ಪ್ರಾಕೃತಿಕ ಸೌಂದರ್ಯ ಆಸ್ವಾದಿಸಲು, ವಾರಂತ್ಯ, ರಜಾ ದಿನಗಳಲ್ಲಿ ಹೆಚ್ಚಿನ ಭಕ್ತರು ಆಗಮಿಸುತ್ತಿದ್ದಾರೆ. ಆದರೆ ಕೆಸರುಮಯ ರಸ್ತೆಯಿಂದಾಗಿ ವಾಹನಗಳು ಕೆಸರಲ್ಲಿ ಸಿಲುಕಿ, ಸಂಚರಿಸಲು ಸಾಧ್ಯವಾಗದೆ ಪರದಾಡುವ ಪರಿಸ್ಥಿತಿಯಿದೆ.
ಅದ್ಭುತ ತಾಣ
50 ಅಡಿ ದೂರದವರೆಗೆ ಹಬ್ಬಿರುವ ವಿಶಾಲ ಗುಹೆಯೊಳಗೆ ಉದ್ಭವವಾಗಿರುವ ಶ್ರೀ ಕೇಶವನಾಥೇಶ್ವರ ದೇವರ ಲಿಂಗ, ಅಲ್ಲಿ ಸದಾ ಹರಿಯುವ ನೀರು, ಗುಹೆಯೊಳಗೆ ದೇವರ ದೀಪದ ಬೆಳಕು, ನೀರಿನಲ್ಲಿ ನಿಂತುಕೊಂಡೇ ದೇವರ ದರ್ಶನ ಇಲ್ಲಿಗೆ ಬರುವ ಭಕ್ತರ ಮನತಣಿಸಿ ನವಚೈತನ್ಯ ಮೂಡಿಸುವಂತಿದೆ.
ರಸ್ತೆ ದುರಸ್ತಿಗೆ ಆಗ್ರಹ
ಕೆರಾಡಿಯಿಂದ 4 ಕಿ.ಮೀ. ದೂರದಲ್ಲಿರುವ ಮೂಡುಗಲ್ಲು ಸಂಪರ್ಕಿಸುವ 3 ಕಿ.ಮೀ. ದೂರದವರೆಗೆ ಮಣ್ಣಿನ ರಸ್ತೆ ಇದೆ. ಅಲ್ಲಲ್ಲಿ ಕೆಸರುಮಯ ರಸ್ತೆಯಿಂದಾಗಿ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಭಕ್ತರ ಅನುಕೂಲಕ್ಕಾಗಿ ಈ ರಸ್ತೆಯನ್ನು ದುರಸ್ತಿ ವಾಡಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇಲ್ಲಿಗೆ ಕುಂದಾಪುರ, ಕರಾವಳಿ ಭಾಗದವರು ವಾತ್ರವಲ್ಲದೆ ಹೊರ ಜಿಲ್ಲೆ, ಆಂಧ್ರ, ತೆಲಂಗಾಣದಿಂದಲೂ ಭಕ್ತರು ಬರುತ್ತಿದ್ದಾರೆ. ಆದರೆ ರಸ್ತೆ ಸರಿಯಿಲ್ಲದೆ ಸ್ವಲ್ಪಮಟ್ಟಿಗೆ ಸಮಸ್ಯೆಯಾಗುತ್ತಿದೆ. ಇಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೂ ಧಕ್ಕೆ ಆಗದಂತೆ ದೇವಸ್ಥಾನ ಸಂಪರ್ಕಿಸುವ ರಸ್ತೆಯನ್ನು ವಿಸ್ತರಿಸಿ, ಕನಿಷ್ಠ ಆರಂಭದ ಸ್ವಲ್ಪ ದೂರವಾದರೂ ಡಾಂಬರು ವಾಡಿಕೊಟ್ಟರೆ ಸಂಚಾರಕ್ಕೆ ಅನುಕೂಲವಾಗಲಿದೆ.
— ಅಜಿತ್ ಶೆಟ್ಟಿ ಕೆರಾಡಿ ಶಶಿಧರ ಮಿತ್ರವೃಂದ ಸದಸ್ಯ