ಪರಮಲೆಯಲ್ಲಿ ನೂತನವಾಗಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿರುವುದು. 
ಉಡುಪಿ

ಅಭಿವೃದ್ಧಿಯತ್ತ ಸುಬ್ರಹ್ಮಣ್ಯ ಗ್ರಾಪಂ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಒಳಗೊಂಡಿರುವ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿಯು ಮೂಲಸೌಕರ್ಯ ಅಭಿವೃದ್ಧಿ, ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ, ಬೀದಿದೀಪ, ಸ್ವಚ್ಛತೆ ಹಾಗೂ ನರೇಗಾ ಕಾಮಗಾರಿಗಳ ಮೂಲಕ ಕಳೆದ ಐದು ವರ್ಷಗಳಲ್ಲಿ ಗಮನಾರ್ಹ ಅಭಿವೃದ್ಧಿ ಸಾಧಿಸಿದೆ. ಆದರೆ ಒಳಚರಂಡಿ ಸಮಸ್ಯೆ, ಘನ ತ್ಯಾಜ್ಯ ನಿರ್ವಹಣೆ, ಬೀದಿ ನಾಯಿಗಳ ಹಾವಳಿ, ಬಿಡಾಡಿ ಜಾನುವಾರುಗಳ ಹಾವಳಿ ಹಾಗೂ ಸಿಬ್ಬಂದಿ ಕೊರತೆ ಸೇರಿದಂತೆ ಕೆಲವು ಮೂಲಸೌಕರ್ಯ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ.
ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಲ್ಕುಂದ, ಪರ್ವತಮುಖಿ, ಬಾನಡ್ಕ, ದೇವರಹಳ್ಳಿ, ಐನೆಕಿದು, ನೂಚಿಲ, ದೇವರಗದ್ದೆ, ಯೇನೆಕಲ್ಲು, ಮುತ್ಲಾಜೆ ಸೇರಿದಂತೆ ಒಟ್ಟು 8 ವಾರ್ಡ್‌ಗಳಿದ್ದು, 8,076 ಜನಸಂಖ್ಯೆ ಹೊಂದಿದೆ. ಈ ಎಲ್ಲ ಪ್ರದೇಶಗಳಲ್ಲಿ ಬೀದಿದೀಪ ವ್ಯವಸ್ಥೆ ಮಾಡಲಾಗಿದೆ. ಕೆಲವೊಂದು ಕಡೆಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ನೂತನ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.
ಜಲಜೀವನ್ ಮಿಷನ್ ಯೋಜನೆಯ ಉಳಿಕೆ ಅನುದಾನದಲ್ಲಿ ಸುಮಾರು 90 ಲಕ್ಷ ರೂ. ವೆಚ್ಚದಲ್ಲಿ ಕಮ್ಮೆಟ್ಟಿ ಅರಣ್ಯ ಪ್ರದೇಶದಿಂದ ಕಿ.ಮೀ. ದೂರದಿಂದ ನೈಸರ್ಗಿಕ ನೀರಿನ ಮೂಲದಿಂದ ಎಚ್‌ಡಿಪಿಇ ಪೈಪ್‌ಲೈನ್ ಅಳವಡಿಸಿ ಮೂರು ದೊಡ್ಡ ಶುದ್ಧೀಕರಣ ಘಟಕಗಳನ್ನು ನಿರ್ಮಿಸುವ ಮೂಲಕ ಸುಮಾರು 600 ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗಿದೆ. ಸುಬ್ರಹ್ಮಣ್ಯ ಗ್ರಾಮದ ರುದ್ರಪಾದದಿಂದ ದೇವರಗದ್ದೆಯ ಅಗೋಳಿಕಜೆವರೆಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅನುದಾನದಲ್ಲಿ 13 ಒಳಚರಂಡಿ ಚೇಂಬರ್‌ಗಳನ್ನು ಕಾಂಕ್ರೀಟ್‌ಗೊಳಿಸಿ ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಯೇನೆಕಲ್ಲು ಗ್ರಾಮದ ಪರಮಲೆ ಪ್ರದೇಶದಲ್ಲಿ ಸುಮಾರು 100 ಮೀಟರ್ ಉದ್ದದ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡಿದೆ.

ಪರಿಹಾರಕ್ಕಾಗಿ ಕಾಯುತ್ತಿವೆ ಸವಾಲುಗಳು

ಕ್ಷೇತ್ರದ ಸ್ವಚ್ಛತೆಗಾಗಿ ವಿವಿಧ ಸಂಘ-ಸಂಸ್ಥೆಗಳು ಶ್ರಮಿಸುತ್ತಿದ್ದರೂ ಮತ್ತೆ-ಮತ್ತೆ ಕಸದ ಸಮಸ್ಯೆ ಮರುಕಳಿಸುತ್ತಿದೆ. ಜಾಗೃತಿ ಫಲಕಗಳ ಅಳವಡಿಕೆ ಹಾಗೂ ವಾರ್ಡ್ ಮಟ್ಟದಲ್ಲಿ ಸ್ವಚ್ಛತಾ ತಂಡ ರಚನೆಗೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಅಲ್ಲದೆ 24 ಗಂಟೆ ಕಾರ್ಯಾಚರಿಸುವ ಆರೋಗ್ಯ ಕೇಂದ್ರ ಸ್ಥಾಪಿಸಬೇಕೆಂಬ ದೀರ್ಘಕಾಲದ ಬೇಡಿಕೆಯಾಗಿದ್ದು ಇದು ಇನ್ನೂ ಈಡೇರಿಲ್ಲ. ಘನ ತ್ಯಾಜ್ಯದ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈಗಿರುವ ತ್ಯಾಜ್ಯ ವಿಲೇವಾರಿ ಘಟಕವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದ್ದು, ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಣೆಗೆ ಎಂಆರ್‌ಎಫ್ ಘಟಕ ಸ್ಥಾಪನೆ ಅತ್ಯಗತ್ಯ. ರುದ್ರಭೂಮಿಯಲ್ಲಿ ಆಧುನಿಕ ಬರ್ನಿಂಗ್ ಮಷಿನ್ ಅಳವಡಿಸಿ ಮೇಲ್ದರ್ಜೆಗೇರಿಸುವುದು ಹಾಗೂ ಹೆಚ್ಚುತ್ತಿರುವ ಆಡಳಿತಾತ್ಮಕ ಕೆಲಸದ ಒತ್ತಡ ನಿರ್ವಹಿಸಲು ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವೂ ಎದುರಾಗಿದೆ.

ಸ್ವಚ್ಛತೆಗೆ ನಿರಂತರ ಆದ್ಯತೆ

ಕುಮಾರಧಾರಾ ಸ್ನಾನಘಟ್ಟದಲ್ಲಿ ನಿತ್ಯ ಸ್ವಚ್ಛತೆ, ಮನೆಗಳು, ಹೋಟೆಲ್ ಹಾಗೂ ವಸತಿಗೃಹಗಳಿಂದ ಪ್ರತಿದಿನ ಘನ ತ್ಯಾಜ್ಯ ಸಂಗ್ರಹ, ಪ್ರಮುಖ ರಸ್ತೆಗಳಲ್ಲಿ ಕಸದ ತೊಟ್ಟಿಗಳ ಅಳವಡಿಕೆ, ಹಸಿ-ಒಣ ಕಸ ಪ್ರತ್ಯೇಕ ಸಂಗ್ರಹದ ಬಗ್ಗೆ ಜಾಗೃತಿ, ನಿಯಮ ಉಲ್ಲಂಘಿಸುವವರಿಗೆ ದಂಡ, ಧ್ವನಿವರ್ಧಕದ ಮೂಲಕ ಸ್ವಚ್ಛತಾ ಸಂದೇಶ ಹಾಗೂ ಮಳೆಗಾಲದಲ್ಲಿ ಸೊಳ್ಳೆ ನಿಯಂತ್ರಣಕ್ಕಾಗಿ ಹೊಗೆ ಸಿಂಪಡಣೆ ಸೇರಿದಂತೆ ಹಲವು ಕ್ರಮಗಳನ್ನು ಪಂಚಾಯಿತಿ ಕೈಗೊಂಡಿದೆ.

ಸುಬ್ರಹ್ಮಣ್ಯ ಗ್ರಾಪಂ ವ್ಯಾಪ್ತಿಯ ಅಭಿವೃದ್ಧಿಗೆ ಸರ್ಕಾರ ಹಾಗೂ ಪಂಚಾಯಿತಿ ಸಮನ್ವಯದಿಂದ ಇನ್ನಷ್ಟು ವೇಗ ನೀಡಬೇಕಿದೆ. ಯೇನೇಕಲ್ಲು, ಐನೆಕಿದು ಸೇರಿದಂತೆ ಗ್ರಾಮಗಳ ಒಳಭಾಗದ ರಸ್ತೆಗಳನ್ನು ಕಾಂಕ್ರೀಟೀಕರಣಗೊಳಿಸಿ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳಿಗೆ ಸುರಕ್ಷಿತ ಸಂಚಾರದ ವ್ಯವಸ್ಥೆ ಕಲ್ಪಿಸಬೇಕು. ಪಂಚಾಯಿತಿಗೆ ದೊರೆಯುವ ಅನುದಾನ ಹೆಚ್ಚಿಸಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದರೆ ಗ್ರಾಮಗಳ ಸಮಗ್ರ ಬೆಳವಣಿಗೆ ಸಾಧ್ಯ.

— ಸುಜಾತಾ ಕಲ್ಲಾಜೆ, ನಿಕಟಪೂರ್ವಾಧ್ಯಕ್ಷೆ, ಗ್ರಾ.ಪಂ. ಸುಬ್ರಹ್ಮಣ್ಯ

ಉದ್ಯೋಗ ಖಾತ್ರಿ ಯೋಜನೆಯನ್ನು ಗ್ರಾಮಸಭೆಯ ಆದ್ಯತೆಗಳಿಗೆ ಅನುಗುಣವಾಗಿ ಹೆಚ್ಚಿನ ಅನುದಾನದೊಂದಿಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದರೆ ಗ್ರಾಮದಲ್ಲಿ ಇನ್ನಷ್ಟು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಾಧ್ಯ. ಅದೇ ರೀತಿ ತ್ಯಾಜ್ಯ ನಿರ್ವಹಣೆಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸಿ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಸ್ವಚ್ಛ ಮತ್ತು ಸುಂದರ ಸುಬ್ರಹ್ಮಣ್ಯ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು.

— ಶಿವರಾಮ್ ರೈ, ಗ್ರಾಮಸ್ಥರು