ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ 22ನೇ ಶಾಖೆಯನ್ನು ಗೋಕುಲದಾಸ್ ನಾಯಕ್ ಉದ್ಘಾಟಿಸಿದರು. ಸಂಘದ ಸಂಘದ ಅಧ್ಯಕ್ಷ ಎಸ್.ಆರ್.ಸತಿಶ್ಚಂದ್ರ, ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಚರ್ಚ್‌ನ ಆಂಡ್ರ್ಯೂ ಲಿಯೊ ಡಿಸೋಜ, ಉಳ್ಳಾಲ ನಗರಸಭೆಯ ಪೌರಾಯುಕ್ತ ಸಂತೋಷ್ ಎಸ್.ಡಿ. ಉಪಸ್ಥಿತರಿದ್ದರು.
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಯಾವುದೇ ಸಂಸ್ಥೆಗಳು ವೇಗವಾಗಿ ಬೆಳೆಯುವ ಬದಲು ಎಲ್ಲರನ್ನೂ ಜತೆ ಸೇರಿಸಿಕೊಂಡು ದೂರಕ್ಕೆ ಬೆಳೆಯುವುದು ಅಗತ್ಯ. ಸಹಕಾರಿ ಸಂಸ್ಥೆ ಬೆಳೆದರೆ ಊರು, ಸಮಾಜ ಬೆಳೆದು ದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂದು ಮಂಗಳೂರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್ ಅಭಿಪ್ರಾಯಪಟ್ಟರು.
ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ರಜತ ಮಹೋತ್ಸವ ಸಂಭ್ರಮಾಚರಣೆ ಪ್ರಯುಕ್ತ ಬುಧವಾರ ಉಳ್ಳಾಲದಲ್ಲಿ 22ನೇ ಶಾಖೆ ಉದ್ಘಾಟಿಸಿ ಮಾತನಾಡಿದರು.
ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಚರ್ಚ್‌ನ ಆಂಡ್ರ್ಯೂ ಲಿಯೊ ಡಿಸೋಜ ಮಾತನಾಡಿ, ಸಂಘದ ಅಭಿವೃದ್ಧಿ ಕಂಡಾಗ ಜನರ ಬೆಂಬಲ, ದೇವರ ಕೃಪಾಶೀರ್ವಾದ ಸಿಕ್ಕಿದ್ದಕ್ಕೆ ಸಾಕ್ಷಿ. ಬೆಳಗ್ಗೆದ್ದರೆ ಕಾರ್ಮಿಕ ಕೇಂದ್ರಗಳಿಂದ ಪ್ರಾರ್ಥನೆ ಸದ್ದು ಕೇಳಿಸುವ ಉಳ್ಳಾಲದಲ್ಲಿ ಸರ್ವ ಧರ್ಮೀಯರು ಪ್ರೀತಿಯಿಂದ ಬಾಳುತ್ತಿದ್ದು ಸಂಘಕ್ಕೆ ಎಲ್ಲರ ಸಹಕಾರ ಸಿಗಲಿದೆ ಎಂದರು.
ಉಳ್ಳಾಲ ನಗರಸಭೆ ಪೌರಾಯುಕ್ತ ಸಂತೋಷ್ ಎಸ್.ಡಿ., ಸಂಘದ ಮಾಜಿ ಪ್ರಧಾನ ವ್ಯವಸ್ಥಾಪಕ ಎಸ್.ಆರ್.ನಾಯಕ್, ಶ್ರೀ ಸರಸ್ವತಿ ಚಾರಿಟೆಬಲ್ ಟ್ರಸ್ಟ್ ಟ್ರಸ್ಟಿ ಪಾಂಡುರಂಗ ನಾಯಕ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಸಂತ ನಾಯಕ್ ಪಿ., ವ್ಯವಸ್ಥಾಪಕ ಪ್ರಶಾಂತ್ ಕೆ. ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಎಸ್.ಆರ್.ಸತಿಶ್ಚಂದ್ರ ಸ್ವಾಗತಿಸಿದರು. ಸರಸ್ವತಿ ಚಾರಿಟೆಬಲ್ ಟ್ರಸ್ಟ್ ಕಾರ್ಯಕ್ರಮ ಸಂಯೋಜಕ ಬಿಪಿನ್ ಚಂದ್ರ ವಂದಿಸಿದರು. ಮಂಗಳೂರು ಶಾಖೆಯ ಹಿರಿಯ ವ್ಯವಸ್ಥಾಪಕ ಪ್ರೇಮ್ ಚಂದ್ರ ನಾಯಕ್ ನಿರೂಪಿಸಿದರು.
2001ರಲ್ಲಿ ಜಿಲ್ಲೆಯ ಮೊಟ್ಟ ಮೊದಲ ಸಹಕಾರಿ ಬ್ಯಾಂಕ್ ಪುತ್ತೂರಿನಲ್ಲಿ ಆರಂಭಗೊಂಡ ಸಂಘದಲ್ಲಿ ರಾಜ್ಯಾದ್ಯಂತ 50 ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ. ಬೆಂಗಳೂರು, ಕೊಡಗು, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಇಪ್ಪತ್ತೊಂದು ಶಾಖೆಗಳಿದ್ದು, ಸದ್ಯ ರಾಣಿ ಅಬ್ಬಕ್ಕಳ ಊರಲ್ಲಿ 22ನೇ ಶಾಖೆ ಆರಂಭಿಸಿದ್ದೇವೆ. ಸಂಘದಲ್ಲಿ 825 ಕೋಟಿ ರೂ.ಗಿಂತಲೂ ಅಧಿಕ ವ್ಯವಹಾರ ನಡೆಯುತ್ತಿದ್ದು, 120 ಕ್ಕೂ ಅಧಿಕ ಸಿಬ್ಬಂದಿ ಇದ್ದಾರೆ. ಹದಿನೈದು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಈ ಸ್ಟ್ಯಾಂಪ್ ವ್ಯವಸ್ಥೆ ಜಾರಿಗೆ ತಂದ ಕೀರ್ತಿ ಸಂಘಕ್ಕೆ ಸಲ್ಲುತ್ತದೆ.