ಪೊಸಡಿಗುಂಪೆ ಗಿರಿಧಾಮದ ಸುಂದರ ಭೂದೃಶ್ಯ ನೋಟ.
ವಿಜಯವಾಣಿ ಸುದ್ದಿಜಾಲ ಬದಿಯಡ್ಕ
ಪೈವಳಿಕೆ ಗ್ರಾಮ ಪಂಚಾಯಿತಿಯಲ್ಲಿರುವ ಪೊಸಡಿಗುಂಪೆ ಗಿರಿಧಾಮವನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ ಪಡಿಸಲು ಇಲಾಖೆ ಸಿದ್ಧತೆ ನಡೆಸುತ್ತಿದೆ. ಕಾಸರಗೋಡು ನಗರದ ಈಶಾನ್ಯಕ್ಕೆ 30 ಕಿ.ಮೀ. ದೂರದಲ್ಲಿರುವ ಈ ಬೆಟ್ಟಗಳು ಮಂಜೇಶ್ವರ ತಾಲೂಕಿನ ನೈಸರ್ಗಿಕ ಸೌಂದರ್ಯದ ಗಣಿಯಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತವೆ.
ಬಾಯಾರು ಮತ್ತು ಧರ್ಮತ್ತಡ್ಕ ಗ್ರಾಮಗಳಲ್ಲಿ ಹರಡಿರುವ ಪೊಸಡಿಗುಂಪೆ ಜಿಲ್ಲೆಯ ಎರಡನೇ ರಾಣಿಪುರಂ ಎಂದು ಕರೆಯಲ್ಪಡುತ್ತದೆ. ನಾಲ್ಕು ದಿಕ್ಕುಗಳನ್ನೂ ವೀಕ್ಷಿಸಬಹುದಾದ ಎತ್ತರದ ಗುಡ್ಡದ ಸುಂದರ ನೋಟವು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.
ಪ್ರಮುಖ ಅಭಿವೃದ್ಧಿ ಯೋಜನೆಗಳು: ಡಿಟಿಪಿಸಿ ನೇತೃತ್ವದಲ್ಲಿ ಪೊಸಡಿಗುಂಪೆಯನ್ನು 1.39 ಕೋಟಿ ರೂ. ವೆಚ್ಚದಲ್ಲಿ ಪ್ರಮುಖ ಗಿರಿಧಾಮವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಯೋಜನೆಯ ಭಾಗವಾಗಿ, ಎತ್ತರದ ಗಾಜಿನ ವೀಕ್ಷಣಾ ಗೋಪುರ, ನಡಿಗೆ ಮಾರ್ಗಗಳು, ಕ್ಯಾಂಟಿಲಿವರ್ ವ್ಯೆ ಪಾಯಿಂಟ್, ಟ್ರಕ್ಕಿಂಗ್ ಪಾಯಿಂಟ್, ಸಾಹಸ ವಲಯ ಮತ್ತು ತೂಗು ಸೇತುವೆಯನ್ನು ನಿರ್ಮಿಸಲಾಗುವುದು. ಪ್ರವಾಸಿಗರನ್ನು ಸ್ವಾಗತಿಸಲು ಪ್ರವೇಶ ದ್ವಾರ ಮತ್ತು ಆಹಾರ ಮಳಿಗೆಗಳನ್ನು ಈಗಾಗಲೇ ಯೋಜನೆಯಲ್ಲಿ ಸೇರಿಸಲಾಗಿದೆ. ಈ ಯೋಜನೆಗಳು ಪೂರ್ಣಗೊಂಡ ನಂತರ, ಪೊಸಡಿಗುಂಪೆ ಕಾಸರಗೋಡಿನ ಪ್ರವಾಸೋದ್ಯಮ ನಕ್ಷೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಳ್ಳುವುದರಲ್ಲಿ ಸಂದೇಹವಿಲ್ಲ.
ಈ ಪ್ರದೇಶದ ಅಭಿವೃದ್ಧಿಯ ಭಾಗವಾಗಿ ಮಾಜಿ ಜಿಲ್ಲಾಧಿಕಾರಿ ಡಾ.ಪಿ.ಸಜಿತ್ ಬಾಬು ಮತ್ತು ಈಗಿನ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಈ ಪ್ರದೇಶಕ್ಕೆ ಭೇಟಿ ನೀಡಿದ್ದರು. ಪ್ರವಾಸೋದ್ಯಮ ಯೋಜನೆಗಳನ್ನು ವೇಗಗೊಳಿಸಲು ಮತ್ತು ತಾಂತ್ರಿಕ ಅಡೆತಡೆಗಳನ್ನು ನಿವಾರಿಸಲು ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿರುವುದ ಆಶಾದಾಯಕ ಬೆಳವಣಿಗೆಯಾಗಿದೆ.
ಎರಡೂವರೆ ದಶಕದ ಕನಸು
ಈ ಯೋಜನೆ ಕಳೆದ ಎರಡೂವರೆ ದಶಕಗಳಷ್ಟೂ ಹಳೆಯದು. 2000ನೇ ಇಸವಿಯ ಆರಂಭದಲ್ಲೇ ಇಲ್ಲಿಯ ಪ್ರವಾಸೋದ್ಯಮ ಸಾಧ್ಯತೆಯ ಬಗ್ಗೆ ಯುವಜನ ಅಭಿವೃದ್ಧಿ, ಕ್ರೀಡಾ ಇಲಾಖೆಯ ನೆಹರು ಯುವ ಕೇಂದ್ರದ ಮೂಲಕ ಸಮಗ್ರ ಯೋಜನಾ ವರದಿಯೊಂದು ಸಲ್ಲಿಕೆಯಾಗಿದ್ದರೂ ಬಳಿಕ ಅದು ನನೆಗುದಿಗೆ ಬಿದ್ದಿತ್ತು. ಇದೀಗ ಮತ್ತೆ ಇದು ಸಕ್ರಿಯಗೊಳ್ಳುತ್ತಿದೆ. ಪೊಸಡಿಗುಂಪೆ ಪ್ರವಾಸೋದ್ಯಮ ಕೇಂದ್ರವು ಸಾಕಾರಗೊಂಡಲ್ಲಿ ಈ ಪ್ರದೇಶಕ್ಕೆ ಹೆಚ್ಚಿನ ಪ್ರವಾಸಿಗರನ್ನು ತರುವ ಮೂಲಕ ಆರ್ಥಿಕ ಸಬಲೀಕರಣ, ಉದ್ಯೋಗ ಅವಕಾಶ ಸಹಿತ ವಿವಿಧ ಆಯಾಮಗಳ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಸ್ಥಳೀಯರು ಆಶಿಸಿದ್ದಾರೆ.
ಮಾಫಿಯಾಗಳ ಅಟ್ಟಹಾಸ
ಈ ಮಧ್ಯೆ ಪೊಸಡಿಗುಂಪೆ ಪರಿಸರದ ಅನೇಕ ಪ್ರದೇಶವನ್ನು ಅತಿಕ್ರಮಿಸಲು ಬಾಕ್ಸೈಟ್ ಗಣಿಗಾರಿಕೆಗೆ ಮಾಫಿಯಾಗಳು ಸಕ್ರಿಯಗೊಂಡಿದೆ. ಇಂದು ಸರ್ಕಾರ ಗುರುತಿಸಿರುವ ಪೊಸಡಿಗುಂಪೆ ಪ್ರದೇಶದ ಹೊರತು ಅದರ ಹೊರಾವರಣದ ನೂರಾರು ಎಕರೆಯನ್ನು ಬೇನಾಮಿಯಾಗಿ ವಶಪಡಿಸಿ ನೆಲ ಅಗೆದು ವಿವಿಧ ಮಾಫಿಯಾಗಳು ಇರುವುದು ಕಂಡುಬಂದಿದೆ. ಇದನ್ನು ಪ್ರಶ್ನಿಸಿದ ಸ್ಥಳೀಯರನ್ನು ಬೆದರಿಸುವುದು, ಜೀವ ಭೀತಿ ತರುವ ವಿದ್ಯಮಾನಗಳೂ ವರದಿಯಾಗುತ್ತಿವೆ. ಇವುಗಳನ್ನು ಮಟ್ಟ ಹಾಕದಿದ್ದಲ್ಲಿ ಪ್ರವಾಸಿ ಯೋಜನೆ ಕೇವಲ ಯೋಜನೆಗಷ್ಟೇ ಸೀಮಿತವಾಗಲಿದೆ.
ಪೊಸಡಿಗುಂಪೆ ಪ್ರವಾಸೋದ್ಯಮ ಯೋಜನೆಗೆ ಹಿಂದೊಮ್ಮೆ ಸಲ್ಲಿಸಿದ ಪ್ರಸ್ತಾವನೆಗೆ ಅನುಮತಿ ನೀಡಿರಲಿಲ್ಲ. ಇದೀಗ ಜಿಲ್ಲಾಧಿಕಾರಿ ಭೇಟಿಯ ಬಳಿಕ ಹೊಸ ಪ್ರಸ್ತಾವನೆ ಸಲ್ಲಿಸಲಾಗಿದೆ. ಸುಮಾರು 1.5 ಕೋಟಿ ರೂ. ಅಂದಾಜು ವೆಚ್ಚದ ಯೋಜನೆಯನ್ನು ಡಿಪಿಆರ್‌ನಲ್ಲಿ ಸೂಚಿಸಲಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆಯಿದೆ.
— ವಿಜೇಶ್, ಕಾಸರಗೋಡು ಜಿಲ್ಲಾ ಪ್ರವಾಸೋದ್ಯಮ ಕೌನ್ಸಿಲ್(ಡಿಟಿಪಿಸಿ) ಕಾರ್ಯದರ್ಶಿ