ಉಡುಪಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನವನ್ನು ಹರಿನಾರಾಯಣ ಶರ್ಮ ಉದ್ಘಾಟಿಸಿದರು. ಡಾ. ಅಶೋಕ್​ ಕಾಮತ್​, ಡಾ. ಶ್ರೀಧರ್​ ಪೈ, ಡಾ. ವಿಶ್ವನಾಥ ಪೈ, ಮಾಲತಿ, ಅಕ್ಷಯ್​ ಮಾಶಳೇಕರ್​, ಸುರೇಶ ಭಟ್​ ಇದ್ದರು. 
ಉಡುಪಿ

ತರ್ಕ, ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ

ಪ್ರಶಾಂತ ಜಿ. ಭಾಗ್ವತ

ವಿದ್ಯಾರ್ಥಿಗಳಿಗೆ ಹರಿನಾರಾಯಣ ಶರ್ಮ ಸಲಹೆ
ಉಡುಪಿ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ ಉದ್ಘಾಟನೆ

ಉಡುಪಿ: ವೈಜ್ಞಾನಿಕ ವೇದಿಕೆಗಳ ಮೂಲಕ ವಿದ್ಯಾರ್ಥಿಗಳು ಜ್ಞಾನ ಗಳಿಸಬೇಕು. ಇತಿಹಾಸವೇ ಬೇರೆ, ವಿಜ್ಞಾನವೇ ಬೇರೆ ಎಂಬ ಸತ್ಯ ಅರಿತು, ವಿಷಯಕ್ಕೆ ಸಂಬಂಧಿಸಿ ತರ್ಕ ಹಾಗೂ ಪ್ರಶ್ನಿಸುವ ಮನೋಭಾವವನ್ನೂ ಬೆಳೆಸಿಕೊಳ್ಳಬೇಕು. ಚಿಂತನಾಶೀಲ ಗುಣಗಳಿಂದ ಸಾಧನೆ ಸಾಧ್ಯ. ಪಾಲಕರೂ ಸಹ ತಮ್ಮ ಮಕ್ಕಳಿಗೆ ಶಿಕ್ಷಣದ ವಿಚಾರವಾಗಿ ಹೆಚ್ಚಿನ ಒತ್ತಡ ಹಾಕಬಾರದು ಎಂದು ಮಣಿಪಾಲ ಫೌಂಡೇಷನ್​ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿನಾರಾಯಣ ಶರ್ಮ ಸಲಹೆ ನೀಡಿದರು.
ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಡುಪಿ ಹಾಗೂ ಮಣಿಪಾಲ ಫೌಂಡೇಷನ್​ ಆಶ್ರಯದಲ್ಲಿ ಶನಿವಾರ (ಡಿ.6) ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ವಿಜ್ಞಾನ ಉಪನ್ಯಾಸ

ಯುವ ಉದ್ಯಮಿ ಹಾಗೂ ಶಿಕ್ಷಣ ತಜ್ಞ ಅಕ್ಷಯ್​ ಮಾಶೇಲ್ಕರ್​ ಅವರು ಪ್ರಮುಖ ಮೂರು ವೈಜ್ಞಾನಿಕ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ಮೇಲ್ನೋಟಕ್ಕೆ ಎಲ್ಲ ವಿಷಯಗಳೂ ಒಂದೇರೀತಿ ಗೋಚರಿಸುತ್ತವೆ. ಆದರೆ, ವಿಷಯದ ಆಳಕ್ಕೆ ಇಳಿದಾಗ, ತುಲನೆ ಮಾಡಿದಾಗ ವಿಷಯ ವಿಭಿನ್ನವಾಗಿರುತ್ತದೆ ಎಂದು ವಿವಿಧ ಉದಾಹರಣೆ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.  
ಡಯಟ್​ ಪ್ರಾಂಶುಪಾಲ ಡಾ.ಅಶೋಕ್​ ಕಾಮತ್​ ಅಧ್ಯಕ್ಷತೆ ವಹಿಸಿದ್ದರು. ಡಾ. ಶ್ರೀಧರ್​ ಪೈ, ಎಂಜಿಎಂ ಕಾಲೇಜಿನ ಉಪಪ್ರಾಂಶುಪಾಲ ಡಾ. ವಿಶ್ವನಾಥ ಪೈ, ಎಂಜಿಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿ ಉಪಸ್ಥಿತರಿದ್ದರು.
ಸಿಂಚನಾ ಮತ್ತು ಅಮೃತವರ್ಷಿಣಿ ಪ್ರಾರ್ಥಿಸಿದರು. ಡಯಟ್​ ಉಪನ್ಯಾಸಕ ಸುರೇಶ ಭಟ್​ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಚೇತನ್​ ನಾಯಕ್​ ಕಾರ್ಯಕ್ರಮ ನಿರ್ವಹಿಸಿದರು. ಉಷಾ ಪೈ ಸಹಕರಿಸಿದರು.
"

ರಾಜ್ಯ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆ ಕೊಕ್ಕರ್ಣೆಯ ಕರ್ನಾಟಕ ಪಬ್ಲಿಕ್​ ಸ್ಕೂಲ್​ನ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 2026ರ ಜ.12ರಂದು ಕಲ್ಕತ್ತಾದಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆ ನಡೆಯಲಿದ್ದು, ವಿದ್ಯಾರ್ಥಿಗಳು 'ಕ್ಯೂರಿಯಸ್​' ಎಂಬ ನಾಟಕ ಪ್ರದರ್ಶಿಸಲಿದ್ದಾರೆ. ಮಕ್ಕಳ ಸಾಧನೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಣಿಪಾಲ ಫೌಂಡೇಷನ್​ ಪ್ರಾಯೋಜಕತ್ವ ವಹಿಸಿದ್ದು, ಅವರ ಸಹಕಾರಕ್ಕೆ ಕೃತಜ್ಞತರಾಗಿದ್ದೇವೆ.