ಉಡುಪಿಯಲ್ಲಿ ನಗರಸಭೆಯ ಅಧಿಕಾರಿಗಳೊಂದಿಗೆ ಸ್ವರೂಪಾ ಟಿ.ಕೆ. ಸಭೆ ನಡೆಸಿದರು. ಮಹಾಂತೇಶ್ ಹಂಗರಗಿ, ಸುಬ್ರಹ್ಮಣ್ಯ ಶೆಟ್ಟಿ, ದುರ್ಗಾಪ್ರಸಾದ್, ಅಜಯ್ ರಾವ್, ರವಿಪ್ರಕಾಶ್, ಅನಿತಾ ರಾವ್ ಇತರರಿದ್ದರು.
* ವಾರ್ಡ್ ನಿವಾಸಿಗರಿಗೆ ಡಿಸಿ ಸ್ವರೂಪಾ ಸೂಚನೆ
* ಉಡುಪಿ ನಗರಸಭಾ ಅಧಿಕಾರಿಗಳೊಂದಿಗೆ ಸಭೆ
ಉಡುಪಿ: ಘನತ್ಯಾಜ್ಯ ಬಳಸಿ ವಿವಿಧ ಕೈಗಾರಿಕೆ ನಡೆಸಲು ವಿಪುಲ ಅವಕಾಶಗಳಿದ್ದು, ಈ ಕುರಿತು ಕೈಗಾರಿಕೋದ್ಯಮಿಗಳು ಆಸಕ್ತಿ ತೋರಬೇಕಿದೆ. ಸಾರ್ವಜನಿಕರು ತಮ್ಮ ಮನೆಗಳಲ್ಲಿ, ವಸತಿ ಸಮುಚ್ಚಯಗಳಲ್ಲಿ ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲೇಬೇಕು. ಆ ನಿಟ್ಟಿನಲ್ಲಿ ನಗರಸಭೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಎಚ್ಚರಿಕೆ ನೀಡಿದರು.
ಉಡುಪಿ ನಗರಸಭಾ ವ್ಯಾಪ್ತಿಯ ವಿವಿಧ ವಾರ್ಡ್ಗಳಲ್ಲಿ ಅಸ್ವಚ್ಛತೆ ಹಾಗೂ ಆರೋಗ್ಯ ರಕ್ಷಣಾ ಕಾರ್ಯದ ನಿಮಿತ್ತ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಗರಸಭಾ ಪೌರಾಯುಕ್ತ ಹಾಗೂ ವಿವಿಧ ಅಧಿಕಾರಿಗಳೊಂದಿಗೆ ಶುಕ್ರವಾರ (ಜು.17) ಸಭೆ ನಡೆಸಿ ಮಾತನಾಡಿದರು.
ನಗರದಲ್ಲಿರುವ ವಸತಿ ಸಮುಚ್ಚಯ, ವಾಣಿಜ್ಯ ಮಳಿಗೆಗಳ ತ್ಯಾಜ್ಯ ನೀರನ್ನು ಮಳೆ ನೀರು ಹರಿಯುವ ಚರಂಡಿಗೆ ಬಿಡುತ್ತಿದ್ದಾರೆ. ಅದರಿಂದ ಸಾರ್ವಜನಿಕರ ಆರೋಗ್ಯಕ್ಕೆ ಧಕ್ಕೆ ಹಾಗೂ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಮಲೇರಿಯಾ, ಡೆಂಘೆ ಮುಂತಾದ ಸಾಂಕ್ರಾಮಿಕ ರೋಗ ಹರಡುವಿಕೆಗೂ ಆಸ್ಪದ ನೀಡಿದಂತಾಗಿದೆ. ನಗರದಲ್ಲಿ ಹರಿಯುವ ಇಂದ್ರಾಣಿ ನದಿಯ ನೀರು ಕಲುಷಿತಗೊಂಡಿದೆ. ಕೂಡಲೇ ಎಲ್ಲ ವಾರ್ಡ್ಗಳಲ್ಲೂ ಸ್ವಚ್ಛತೆ ಕಾಪಾಡಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಶೆಟ್ಟಿ, ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತ ದುರ್ಗಾಪ್ರಸಾದ್, ನಗರಸಭೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಛೇಂಬರ್ ಆಫ್ ಕಾಮರ್ಸ್ನ ಪದಾಧಿಕಾರಿಗಳು, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಬಿಲ್ಡರ್ಸ್ ಅಸೋಸಿಯೇಶಷನ್ ಪದಾಧಿಕಾರಿಗಳು, ಇಂಜಿನಿಯರಿಂಗ್ ಅಸೋಸಿಯೇಶನ್ನ ಪದಾಧಿಕಾರಿಗಳು, ವಿವಿಧ ವಸತಿ ಸಮುಚ್ಚಯಗಳ ಅಸೋಸಿಯೇಶನ್ನ ಅಧ್ಯಕ್ಷರು, ಕಾರ್ಯದರ್ಶಿ, ವಿವಿಧ ಎನ್ಜಿಒ ಸಂಸ್ಥೆಗಳ ಪದಾಧಿಕಾರಿಗಳು, ಕಟ್ಟಡ ನಿಮಾರ್ಣ ಸಂಸ್ಥೆಯ ಮಾಲೀಕರು ಪಾಲ್ಗೊಂಡಿದ್ದರು.
ನಗರಸಭೆಯ ಪೌರಾಯುಕ್ತ ಮಹಾಂತೇಶ್ ಹಂಗರಗಿ ಕಾರ್ಯಕ್ರಮ ನಿರೂಪಿಸಿದರು.
ಅಧಿಕಾರಿಗಳಿಂದ ಸಭೆಗೆ ವಿವಿಧ ಮಾಹಿತಿ
ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಂಗಳೂರು ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತ ಅಜಯ್ ರಾವ್ ಮಾತನಾಡಿ, ಉಡುಪಿ ನಗರ ವ್ಯಾಪ್ತಿಯ ಒಳಚರಂಡಿ ಸಂಪರ್ಕ ಜಾಲದ ಬಗ್ಗೆ ಹಾಗೂ ಎಸ್ಟಿಪಿ ಬಗ್ಗೆ ಸಮರ್ಪಕ ಮಾಹಿತಿ ನೀಡಿದರು. ನಗರಸಭೆಯ ಪರಿಸರ ಅಭಿಯಂತ ರವಿಪ್ರಕಾಶ್, ಉಡುಪಿ ನಗರಸಭಾ ವ್ಯಾಪ್ತಿಯಲ್ಲಿನ ಪ್ರಸ್ತುತ ಘನತ್ಯಾಜ್ಯ ನಿರ್ವಹಣೆಯ ಮಾಹಿತಿ ನೀಡಿದರು. ಬೆಂಗಳೂರಿನ ವಿ ಕೇರ್ ಸೊಸೈಟಿಯ ಅನಿತಾ ರಾವ್ ಮಾತನಾಡಿ, ಮರದ ಎಲೆಗಳು, ತರಕಾರಿ ತ್ಯಾಜ್ಯಗಳಿಂದ ಬ್ರಿಕೇಡ್ಸ್ ತಯಾರಿಸುವ ಬಗ್ಗೆ ಹಾಗೂ ದೇವಸ್ಥಾನಗಳಲ್ಲಿ ಉತ್ಪತ್ತಿಯಾಗುವ ಹೂವಿನ ತ್ಯಾಜ್ಯದಿಂದ ಅಗರಬತ್ತಿ ತಯಾರಿಸುವ ಬಗ್ಗೆ ವಿವರ ನೀಡಿದರು. ಬೆಳಗಾವಿಯ ಡಾಲ್ಮಿಯಾ ಸಿಮೆಂಟ್ನ ಮಾರ್ಕೆಟಿಂಗ್ ಮೆನೇಜರ್ ಅಂಕಿತ್ ಮಾತನಾಡಿ, ಆರ್ಡಿಎಫ್ ತ್ಯಾಜ್ಯವನ್ನು ಸಿಮೆಂಟ್ ಫ್ಯಾಕ್ಟರಿಯಲ್ಲಿ ವಿಲೇವಾರಿ ಮಾಡುವ ರೀತಿ ಕುರಿತು ವಿವರಿಸಿದರು.
ಮನೆಗಳ ಹಾಗೂ ವಸತಿ ಸಮುಚ್ಚಯಗಳ ತ್ಯಾಜ್ಯ ನೀರು ಸಂಸ್ಕರಿಸದೆ ಮಳೆಯ ನೀರು ಹರಿಯುವ ಚರಂಡಿಗೆ ಮತ್ತು ಇಂದ್ರಾಣಿ ನದಿಗೆ ಪೈಪ್ ಮೂಲಕ ನೇರವಾಗಿ ಬಿಡುತ್ತಿದ್ದಾರೆ. ಎಷ್ಟೇ ಬಾರಿ ತಿಳಿಹೇಳಿದರೂ ಪ್ರಯೋಜನ ಆಗುತ್ತಿಲ್ಲ. ಈಗಾಗಲೇ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವಂತೆ ನಾಳೆಯಿಂದಲೇ (ಜು.18) ಎಲ್ಲ ಪೈಪ್ಗಳನ್ನೂ ನಗರಸಭೆಯ ಪೌರಾಯುಕ್ತರು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು.
— ಸ್ವರೂಪಾ ಟಿ.ಕೆ. ಉಡುಪಿ ಜಿಲ್ಲಾಧಿಕಾರಿ.