ವಿಜಯವಾಣಿ ಸುದ್ದಿಜಾಲ ಕುಂದಾಪುರ
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅರಾಟೆ ಸಮೀಪದ ಹಳೇ ಸೇತುವೆಯನ್ನು ಪುನಃ ನಿರ್ಮಿಸುವ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅರಾಟೆಯ ಹೊಸ ಸೇತುವೆಯಲ್ಲಿ ಎರಡು ಕಡೆ ಸಾಗುವ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು ಇತ್ತೀಚೆಗೆ ಒಂದಷ್ಟು ಅಪಘಾತಗಳು ಸಂಭವಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ರಾ.ಹೆ.ಪ್ರಾಧಿಕಾರ ಹಾಗೂ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿದ್ದ ಐಆರ್ಬಿ ಕಂಪನಿ ಅರಾಟೆಯಿಂದ ಹೆಮ್ಮಾಡಿ ಶ್ರೀ ಕಾಶೀ ಮಠದ ತನಕ ರಾ.ಹೆ. ಮಧ್ಯದ ಮಾರ್ಗದ ಉದ್ದಕ್ಕೂ ರಿಫ್ಲೆಕ್ಟರ್ವುಳ್ಳ ಬ್ಯಾರಿಕೇಡ್ಗಳನ್ನು ಮತ್ತು ಅರಾಟೆ ಸೇತುವೆ ಮೇಲೆ ದಾರಿದೀಪ ಅಳವಡಿಸಿದೆ.
ಹೆಮ್ಮಾಡಿ ಸಮೀಪದ ಶ್ರೀ ಕಾಶೀ ಮಠದ ಕ್ರಾಸ್ನಿಂದ ಅರಾಟೆ ಸೇತುವೆವರೆಗೆ ರಸ್ತೆ ಲೇನ್ ಶಿಸ್ತನ್ನು ಸುಧಾರಿಸಲು, ಅನಧಿಕೃತ ಹಾಗೂ ಅಕ್ರಮ ಯು-ಟರ್ನ್ಗಳನ್ನು ತಡೆಯಲು ಮತ್ತು ರಸ್ತೆ ಸುರಕ್ಷತೆ ಹೆಚ್ಚಿಸಲು ಹಾಗೂ ಅಪಾಯಕಾರಿ ಪ್ರದೇಶಗಳಲ್ಲಿ ಹೆದ್ದಾರಿ ಮಧ್ಯದ ಮಾರ್ಗದ ಉದ್ದಕ್ಕೂ ಹೆಚ್ಚು ಗೋಚರಿಸುವ ರಿಫ್ಲೆಕ್ಟರ್ವುಳ್ಳ ಪ್ಲಾಸ್ಟಿಕ್ ಬ್ಯಾರಿಕೇಡ್ಗಳನ್ನು ಅಳವಡಿಸಿದೆ.
ಹೊಸ ಸೇತುವೆಯಲ್ಲಿ ಬೆಳಕಿನ ವ್ಯವಸ್ಥೆಯಿಲ್ಲ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅರಾಟೆ ಸೇತುವೆಯ ಒಂದು ಬದಿಯಲ್ಲಿ ದಾರಿದೀಪ ಅಳವಡಿಸಲಾಗಿದೆ. ಆದರೆ ಬಹು ಮುಖ್ಯವಾಗಿ ಅಪಘಾತ ವಲಯವಾಗಿರುವ ಅರಾಟೆ ಸೇತುವೆಯಿಂದ ಶ್ರೀ ಕಾಶೀ ಮಠದ ಕ್ರಾಸ್ ತನಕ ಕತ್ತಲು ಆವರಿಸಿಕೊಂಡಿದ್ದು, ಈ ಪ್ರದೇಶದಲ್ಲಿ ದಾರಿದೀಪದ ವ್ಯವಸ್ಥೆ ಮಾಡದಿರುವುದು ಪ್ರಯಾಣಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಕೆಲ ದಿನಗಳ ಹಿಂದೆ ಹೆಮ್ಮಾಡಿ ಸಮೀಪದ ಶ್ರೀ ಕಾಶೀ ಮಠದ ಕ್ರಾಸ್ನಿಂದ ಅರಾಟೆ ಸೇತುವೆವರೆಗೆ ಹೆದ್ದಾರಿ ಮಧ್ಯದ ಮಾರ್ಗದ ಉದ್ದಕ್ಕೂ ಅಳವಡಿಸಲಾಗಿದ್ದ ಹೆಚ್ಚು ಗೋಚರಿಸುವ ರಿಫ್ಲೆಕ್ಟರ್ವುಳ್ಳ ಕೋನ್ಗಳಿಗೆ ಭಾರಿ ವಾಹನಗಳು ಡಿಕ್ಕಿ ಹೊಡೆದು ಕೋನ್ ಅಳವಡಿಸಿದ ಒಂದೇ ವಾರದಲ್ಲಿ ಎಲ್ಲ ಕೋನ್ಗಳು ಕಿತ್ತು ಹೋಗಿತ್ತು. ಇದೀಗ ಪ್ರಯಾಣಿಕರ ಸುರಕ್ಷೆ ದೃಷ್ಟಿಯಿಂದ ಹಾಗೂ ರಸ್ತೆ ಲೇನ್ ಶಿಸ್ತನ್ನು ಸುಧಾರಿಸಲು ಬ್ಯಾರಿಕೇಡ್ ಅಳವಡಿಸಲಾಗಿದ್ದು, ಪ್ಲಾಸ್ಟಿಕ್ ಬ್ಯಾರಿಕೇಡ್ ಎಷ್ಟರ ಮಟ್ಟಿಗೆ ಪ್ರಯೋಜನವಾಗಲಿದೆ ಎಂಬುದು ಎಲ್ಲರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.
ಕಳೆದ ಭಾನುವಾರ ಎರಡು ಖಾಸಗಿ ಬಸ್ಗಳು ಮುಖಾಮುಖಿ ಡಿಕ್ಕಿ ಹೊಡೆದು 28 ಪ್ರಯಾಣಿಕರು ಗಾಯಗೊಂಡ ಹಾಗೂ ಇದೇ ಪ್ರದೇಶದಲ್ಲಿ ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರ ಮೃತಪಟ್ಟ ಘಟನೆ ನಡೆದಿತ್ತು. ಹಳೇ ಸೇತುವೆ ಮೇಲೆ ಸಂಚಾರ ನಿರ್ಬಂಧಿಸಿದ ಬಳಿಕ ನಡೆದ ಅಪಘಾತದಲ್ಲಿ ಈವರೆಗೆ ಒಟ್ಟು 5 ಮಂದಿ ಮೃತಪಟ್ಟಿದ್ದು, ಪ್ರಯಾಣಿಕರ ಹಾಗೂ ವಾಹನ ಸವಾರರ ಸುರಕ್ಷತೆ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿದ್ದ ಐಆರ್ಬಿ ಕಂಪನಿ ಯಾವುದೇ ಕ್ರಮಕೈಗೊಳ್ಳದಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿತ್ತು.