ಉಡುಪಿ ನಗರದಲ್ಲಿ ನಿಂತ ಮಳೆ ನೀರಿನಲ್ಲಿ ಸೊಳ್ಳೆಗಳು ನೆಲೆಸಿರುವುದು. 
ಉಡುಪಿ

ಕಾಡುತ್ತಿದೆ 'ಡೆಂಘೆ' ಕಾಯಿಲೆ

* ಉಡುಪಿ ಜಿಲ್ಲೆಯಲ್ಲಿ ಇಲಿಜ್ವರ, ಮಲೇರಿಯಾ ಬಾಧೆ

* ರೋಗ ಪಸರಿಸದಂತೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ 

ಪ್ರಶಾಂತ ಭಾಗ್ವತ ಉಡುಪಿ
ಜಿಲ್ಲೆಯಲ್ಲಿ ಮಳೆ ಕೊರತೆ, ಮಳೆಗಾಲದಲ್ಲಿ ಬಿಸಿಲು ವಾತಾವರಣದಿಂದಾಗಿ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚುತ್ತಿದ್ದು, ಜನರಿಗೆ ಡೆಂ ಕಾಯಿಲೆ ಕಾಡುತ್ತಿದೆ. ಪ್ರತಿದಿನವೂ ಡೆಂಘೆ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಯೂ ಹೆಚ್ಚತೊಡಗಿದೆ.
ಆರೋಗ್ಯ ಇಲಾಖೆಯ ಅನೇಕ ಮುಂಜಾಗ್ರತಾ ಕ್ರಮದಿಂದಾಗಿ ಮಲೇರಿಯಾ ನಿಯಂತ್ರಣದಲ್ಲಿದ್ದು, 2019-20ರಲ್ಲಿ 6 ಜನರ ಬಲಿ ಪಡೆದಿದ್ದ ಮಿದುಳು ಜ್ವರ ಸಂಪೂರ್ಣ ಹತೋಟಿಯಲ್ಲಿದೆ. ದಶಕಗಳ ಹಿಂದೆ ಜನರನ್ನು ಕಾಡಿದ್ದ ಚಿಕೂನ್​ಗುನ್ಯಾ ಕಣ್ಮರೆಯಾಗಿದ್ದರೆ, ನೂರಾರು ಜನರ ಪ್ರಾಣ ತೆಗೆದಿದ್ದ ಕರೋನಾ ವೈರಸ್​ ಸಹ ನಿಯಂತ್ರಣದಲ್ಲಿದೆ.

345 ಡೆಂಘೆ ಪ್ರಕರಣ

ಉಡುಪಿ ಜಿಲ್ಲೆಯಲ್ಲಿ 2026ರ ಜನವರಿಯಿಂದ ಜು. 27ರ ವರೆಗೆ ಒಟ್ಟು 345 ಡೆಂಘೆ ಪ್ರಕರಣ (ಕಳೆದ ವರ್ಷ 163) ದಾಖಲಾಗಿದ್ದು, ಯಾವುದೇ ಜೀವಹಾನಿಯಾಗಿಲ್ಲ. ಜಿಲ್ಲಾ ಆರೋಗ್ಯ ಇಲಾಖೆ ನೀಡಿದ ಮಾಹಿತಿಯಂತೆ ಉಡುಪಿ ತಾಲೂಕಿನಲ್ಲಿ 313 ಡೆಂಘೆ ಪ್ರಕರಣ, ಕುಂದಾಪುರ ತಾಲೂಕಿನಲ್ಲಿ 14 ಹಾಗೂ ಕಾರ್ಕಳ ತಾಲೂಕಿನಲ್ಲಿ 18 ಪ್ರಕರಣ ದಾಖಲಾಗಿದೆ.

ಹತೋಟಿಯಲ್ಲಿ ಮಲೇರಿಯಾ

ಸಾಂಸರ್ಗಿಕ ಹಾಗೂ ಮಾರಕ ಕಾಯಿಲೆ ಮಲೇರಿಯಾದ ಅಟ್ಟಹಾಸ ಈಗಿಲ್ಲ. 2012&13ನೇ ಸಾಲಿನಲ್ಲಿ ಜಿಲ್ಲೆಯ ಜನರನ್ನು ಬೆಂಬಿಡದ ಭೂತದಂತೆ ಕಾಡಿದ್ದು, 2 ಸಾವಿರಕ್ಕೂ ಅಧಿಕ ಜನರಿಗೆ ಕಾಯಿಲೆ ಅಂಟಿತ್ತು. ಆರೋಗ್ಯ ಇಲಾಖೆಯ ಮುತುವರ್ಜಿ ಹಾಗೂ ರೋಗ ಹತೋಟಿಯ ಅನೇಕ ಕಾರ್ಯ ಯೋಜನೆಯಿಂದ ಜಿಲ್ಲೆಯಲ್ಲಿ ಮಲೇರಿಯಾ ನಿಯಂತ್ರಣದಲ್ಲಿದೆ. 2026ರ ಜನವರಿಯಿಂದ ಜು.27ಕ್ಕೆ 10 ಪ್ರಕರಣ (ಕಳೆದ ವರ್ಷ 26) ದಾಖಲಾಗಿದೆ.

ಮಿದುಳು ಜ್ವರ ನಾಪತ್ತೆ

ಜಿಲ್ಲೆಯಲ್ಲಿ ಮಿದುಳು ಜ್ವರ ಬಾಧಿತರ ಸಂಖ್ಯೆ ಪ್ರಸ್ತುತ ಶೂನ್ಯವಾಗಿದೆ. 2019ರಲ್ಲಿ 5 ಜನರಿಗೆ ಕಾಯಿಲೆ ತಗುಲಿ 4 ಜನ ಮೃತಪಟ್ಟಿದ್ದರು. 2022ರಲ್ಲಿ 2 ಪ್ರಕರಣ (1 ಸಾವು), 2024ರಲ್ಲಿ 3 (1 ಸಾವು) ಪ್ರಕರಣ ದಾಖಲಾಗಿತ್ತು. ಇದೀಗ 2 ವರ್ಷದಲ್ಲಿ ಒಂದು ಪ್ರಕರಣವೂ ದಾಖಲಾಗಿಲ್ಲ. ಇದರೊಟ್ಟಿಗೆ ಚಿಕೂನ್​ಗುನ್ಯಾ ಕಾಯಿಲೆಯೂ ಕಣ್ಮರೆಯಾಗಿದ್ದು, ಪ್ರಸ್ತುತ 1 ಪ್ರಕರಣ ದಾಖಲಾಗಿದೆ ಎಂದು ಉಡುಪಿ ಡಿಎಸ್​ಒ ಡಾ. ನಾಗರತ್ನಾ ಮಾಹಿತಿ ನೀಡಿದ್ದಾರೆ.
ಸಾಂಕ್ರಾಮಿಕ ರೋಗಗಳ ನಿಯಂತ್ರಣ ಜಿಲ್ಲಾ ಆರೋಗ್ಯ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ. ಕಳೆದ ಐದು ವರ್ಷದಿಂದ ರೋಗಿಗಳ ಸಂಖ್ಯೆ ಏರುತ್ತಲೇ ಇದ್ದು, ಕಾಯಿಲೆ ನಿಯಂತ್ರಣಕ್ಕೆ ಜನಸಮುದಾಯದ ಸಹಭಾಗಿತ್ವ, ಸಹಕಾರವೂ ಅಗತ್ಯ. 

ರೋಗ ಹರಡಲು ಪ್ರಮುಖ ಕಾರಣ

ಡೆಂಘೆ ಅಥವಾ ಮಲೇರಿಯಾ ಕಾಯಿಲೆ ವ್ಯಾಪವಾಗಿ ಹರಡಲು 4 ಪ್ರಮುಖ ಕಾರಣವಿದೆ. 1ನೇಯದಾಗಿ ವಲಸೆ ಕಾರ್ಮಿಕರು. ಜಿಲ್ಲೆಯಲ್ಲಿ ಎಲ್ಲ ಬಗೆಯ ನಿರ್ಮಾಣ ಹಾಗೂ ಕೈಗಾರಿಕಾ ಕೆಲಸಗಳಿಗೆ ಓಡಿಸ್ಸಾ, ಉತ್ತರ ಪ್ರದೇಸ, ಬಿಹಾರ್​, ಜಾರ್ಖಂಡ್​ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಆಗಮಿಸುತ್ತಾರೆ. ಇವರಿಂದಾಗಿ ಸೊಳ್ಳೆಗಳ ಮೂಲಕ ರೋಗ ಇನ್ನಷ್ಟು ಪಸರಿಸುತ್ತಲಿದೆ. 2ನೇಯದಾಗಿ ಬೃಹತ್​ ಕಟ್ಟಡಗಳ ನಿರ್ಮಾಣ ಸ್ಥಳದಲ್ಲಿ ಅಸ್ವಚ್ಛತೆ. 3ನೇಯದಾಗಿ ಮೀನುಗಾರಿಕಾ ಪ್ರದೇಶ ಹಾಗೂ 4ನೇಯದಾಗಿ ಪ್ರವಾಸಿಗರು. ಉಡುಪಿ ಟೆಂಪಲ್​ ಸಿಟಿಯಾಗಿದ್ದರಿಂದ ದೇಶ&ವಿದೇಶಗಳಿಂದ ಯಾತ್ರಿಕರು ಬರುತ್ತಾರೆ, ಲಾಡ್ಜ್​, ಇನ್ನಿತರ ಕಡೆಗಳಲ್ಲಿ ವಸತಿ ಮಾಡುತ್ತಾರೆ. ಸೊಳ್ಳೆ ಕಡಿತಕ್ಕೊಳಗಾಗಿ ಕಾಯಿಲೆಯ ಬೀಜ ಬಿತ್ತುತ್ತಿರುವುದರಿಂದ ಉಡುಪಿಯಲ್ಲಿ ಡೆಂಘೆ ನಿಯಂತ್ರಣ ಸಾಧ್ಯವಾಗುತ್ತಿಲ್ಲ.

ಹೀಗಿರಲಿದೆ ರೋಗ ಲಕ್ಷಣ

ಡೆಂಘೆ ಜ್ವರವು ಹಗಲಿನ ವೇಳೆಯಲ್ಲಿ ಕಚ್ಚುವ 'ಈಡೀಸ್​ ಇಜಿಪ್ಟ್ಟೆ' ಎಂಬ ಸೊಳ್ಳೆಯಿಂದ ಬರುತ್ತದೆ. ಸಾಮಾನ್ಯವಾಗಿ ಮಕ್ಕಳಲ್ಲಿ ಈ ರೋಗ ಕಾಣಿಸಿಕೊಳ್ಳುವುದು ಹೆಚ್ಚು. ಡೆಂಘೆ ಜ್ವರ, ಡೆಂಘೆ ರಕ್ತಸ್ರಾವ ಜ್ವರ (ಡಿಎಚ್​ಎಫ್​) ಹಾಗೂ ಡೆಂಘೆ ಶಾಕ್​ ಸಿಂಡ್ರೋಮ್​ (ಡಿಎಸ್​ಎಸ್​) ಎಂಬ ಮೂರು ಬಗೆಯ ಜ್ವರ ವಿಧಗಳು ಇವೆ. ಇದ್ದಕ್ಕಿಂದ್ದಂತೆ ಜ್ವರ ಬರುವುದು, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು ಈ ರೋಗದ ಲಕ್ಷಣ.
"

ಮಳೆಗಾಲ ಆಗಿದ್ದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗಿ ಅವುಗಳ ಕಡಿತದಿಂದ ಜ್ವರ ಬರುತ್ತದೆ. ಜ್ವರ ಬಂದಾಗ ಅನೇಕರು ಸಮೀಪದ ಔಷಧದ ಅಂಗಡಿಗೆ ತೆರಳಿ ಜ್ವರದ ಮಾತ್ರೆ ಪಡೆದು ಸೇವಿಸುತ್ತಾರೆ. ಅದರಿಂದ ಜ್ವರ ಕಡಿಮೆಯಾದರೂ ಮತ್ತೆ ಮರುಕಳಿಸಬಹುದು. ಮತ್ತೇನೋ ಔಷಧ ಸೇವಿಸಿ, ಅಂತಿಮ ಕ್ಷಣದಲ್ಲಿ ಆಸ್ಪತ್ರೆಗೆ ಬರುತ್ತಾರೆ. ಜ್ವರ ಬಂದಾಗ ನಿರ್ಲಕ್ಷಿಸದೆ ಸಮೀಪದ ಆಸ್ಪತ್ರೆಗೆ ತೆರಳಿ ಸರಿಯಾದ ಚಿಕಿತ್ಸೆ ಪಡೆಯಬೇಕು.

— ಡಾ. ಬಸವರಾಜ್​ ಹುಬ್ಬಳ್ಳಿ. ಜಿಲ್ಲಾ ಆರೋಗ್ಯಾಧಿಕಾರಿ.
"

ಡೆಂಘೆ ನಿಯಂತ್ರಣಕ್ಕಾಗಿ ಉಡುಪಿಯಲ್ಲಿ ಆಶಾ ಕಾರ್ಕಕರ್ತೆಯರು ಹಾಗೂ ಸ್ವಯಂ ಸೇವಕರ (ನಗರಸಭೆಯ) 28 ತಂಡ ರಚಿಸಲಾಗಿದೆ. ಮನೆಮೆನೆಗೆ ತೆರಳಿ ಜ್ವರ ಹಾಗೂ ಲಾರ್ವಾ ಸಮೀಕ್ಷೆ ನಡೆಸುತ್ತಿದ್ದಾರೆ. ಪರಿಸರ ಹಾಗೂ ಮನೆಯ ಸುತ್ತ ಸಂಗ್ರಹಿತ ಮಳೆ ನೀರು ತೆರವು ಮಾಡಲು ಪ್ರತಿ ಶುಕ್ರವಾರ 'ಡ್ರೈ ಡೇ' ಹಾಗೂ ವಿಶೇಷ ಕಾರ್ಯಯೋಜನೆ ಮೂಲಕ ಸೊಳ್ಳೆ ಉತ್ಪತ್ತಿ ತಾಣ ನಿಮೂರ್ಲನೆ, ತೀವ್ರ ಸಮಸ್ಯಾತ್ಮಕ ಪ್ರದೇಶಗಳಲ್ಲಿ ಫಾಗಿಂಗ್​ ಮಾಡಲಾಗುತ್ತಿದೆ. ನಗರಸಭೆಯ ಕಸದ ವಾಹನದ ಮೂಲಕ ಸ್ವಚ್ಛತೆ ಕಾಪಾಡುವಂತೆ ಧ್ವನಿವರ್ಧಕ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

— ಡಾ. ವಾಸುದೇವ ಉಪಾಧ್ಯಾಯ. ರೋಗವಾಹಕ ಆಶ್ರಿತ ರೋಗಗಳ ಜಿಲ್ಲಾ ನಿಯಂತ್ರಣಾಧಿಕಾರಿ.