ಅಜೆಕಾರು ಜ್ಞಾನಸುಧಾ ಶಾಲೆಯಲ್ಲಿ ವಿದ್ಯಾರ್ಥಿಗಳು ಇವಿಎಂ ಮೂಲಕ ಮತ ಚಲಾಯಿಸಿದರು.
ಕಾರ್ಕಳ: ಪ್ರಜಾಪ್ರಭುತ್ವದ ಯಶಸ್ಸು ಜಾಗೃತ ಮತದಾರರ ಮೇಲೆ ಅವಲಂಬಿತವಾಗಿದೆ. ವಿದ್ಯಾರ್ಥಿ ಜೀವನದಲ್ಲಿಯೇ ಮತದಾನದ ಮಹತ್ವ ಅರಿತುಕೊಳ್ಳುವುದು ಅಗತ್ಯ ಎಂದು ಅಜೆಕಾರು ಪದ್ಮನಗರ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಮಚಂದ್ರ ನೆಲ್ಲಿಕಾರ್ ಹೇಳಿದರು.
ಅಜೆಕಾರು ಪದ್ಮನಗರ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಶಾಲಾ ಸಂಸತ್ ಚುನಾವಣೆಯಲ್ಲಿ ಇತ್ತೀಚೆಗೆ ಮಾತನಾಡಿದರು.
ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿಯೇ ಈ ಚುನಾವಣೆ ನಡೆಸಲಾಗಿದ್ದು, ಇವಿಎಂ ಮೂಲಕ ಮತದಾನ ಪ್ರಕ್ರಿಯೆ ಜರುಗಿತು. ವಿದ್ಯಾರ್ಥಿಗಳಿಗೆ ಮತದಾನದ ವಿಧಾನ, ಅಭ್ಯರ್ಥಿಗಳ ಆಯ್ಕೆ ಹಾಗೂ ಮತ ಚಲಾಯಿಸುವ ಕ್ರಮಗಳ ಕುರಿತು ಮಾಹಿತಿ ನೀಡಲಾಯಿತು.
ಸಂಸ್ಥೆ ಪ್ರಾಂಶುಪಾಲ ಸಂತೋಷ್ ಪೂಜಾರಿ ಪೂರ್ವ ಸಿದ್ಧತೆ ಪರಿಶೀಲಿಸಿ ಮಾರ್ಗದರ್ಶನ ಮಾಡಿದರು. ಉಪಪ್ರಾಂಶುಪಾಲೆ ಆರತಿ ಮುಖ್ಯ ಚುನಾವಣಾ ಅಧಿಕಾರಿಯಾಗಿದ್ದರು. ಶಿಕ್ಷಕಿ ಆಶಾ ಜ್ಯೋತಿ ಚುನಾವಣೆ ಸಂಘಟಿಸಿದರು. ಉಪಚುನಾವಣಾ ಅಧಿಕಾರಿಗಳಾಗಿ ಶಿಕ್ಷಕರಾದ ಶ್ರೀನಿವಾಸ್ ನೆಲ್ಲಿಕಾರ್, ನವೀನ್, ಕಿರಣ್, ವಿಜೇತರಾಣಿ, ಕವಿತಾ, ಭಾವನ ಮತದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನೆರವೇರಿಸಿದರು.