ಲಾವಣ್ಯ ಹಂತಕನಿಗೆ ಗಲ್ಲು ಶಿಕ್ಷೆ ದೊರೆಯಲು ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಪೊಲೀಸರಿಗೆ ಮನವಿ ಮಾಡಿದರು. ಅಧಿಕಾರಿಗಳಾದ ಅನಿಲ್ ಕುವಾರ್ ಭೂಮರೆಡ್ಡಿ, ಸುರೇಶ್ ಮೈರ, ವಸಂತ ಸಾಲಿಯಾನ್, ಮಂಜುನಾಥ ಸಾಲ್ಯಾನ್ ಇತರರಿದ್ದರು.  
ಉಡುಪಿ

ಲಾವಣ್ಯಾ ಹಂತಕಗೆ ಕಠಿಣ ಸಜೆ ನೀಡಲು ಪಟ್ಟು

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಉಳಿಗ್ರಾಮದ ನಿವಾಸಿ ಲಾವಣ್ಯಾ ಅವರನ್ನು ಗುರುವಾರ ಸಂಜೆ ಬಿ.ಸಿ.ರೋಡ್ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಭೀಕರವಾಗಿ ಹತ್ಯೆಗೈದ ತಪ್ಪಿತಸ್ಥನಿಗೆ ಕಾನೂನು ಪ್ರಕಾರ ಗಲ್ಲು ಶಿಕ್ಷೆ ವಿಧಿಸಲು ಅಗತ್ಯವಿರುವ ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಳ್ಳುವಂತೆ ಉಳಿ ಗ್ರಾಮಸ್ಥರು ಪೊಲೀಸರನ್ನು ಒತ್ತಾಯಿಸಿದ್ದಾರೆ.
ಬಂಟ್ವಾಳ ಡಿವೈಎಸ್‌ಪಿ ಕಚೇರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುವಾರ್ ಭೂಮರೆಡ್ಡಿ ಅವರನ್ನು ಭೇಟಿಯಾದ ಕಕ್ಯಪದವಿನ ಗ್ರಾಮಸ್ಥರು, ನಮ್ಮ ಗ್ರಾಮದ ಹೆಣ್ಣುಮಗಳು ಲಾವಣ್ಯಾಳ ಹತ್ಯೆ ನಡೆದಿರುವುದು ಸಮಾಜವನ್ನು ಆಘಾತಕ್ಕೆ ಒಳಪಡಿಸಿದೆ. ಆರೋಪಿಯನ್ನು ಬಂಧಿಸಿರುವುದು ಸ್ವಾಗತಾರ್ಹ. ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಗಲ್ಲು ಶಿಕ್ಷೆ ದೊರೆಯುವಂತೆ ಮಾಡಬೇಕು. ಲಾವಣ್ಯಳ ಕುಟುಂಬಕ್ಕೆ ನ್ಯಾಯ ದೊರೆಯುವ ಜತೆಗೆ ಬೇರೆ ಹೆಣ್ಣುಮಕ್ಕಳಿಗೆ ಭವಿಷ್ಯದಲ್ಲಿ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ವಿನಂತಿಸಿದರು.
ಮನವಿ ಸ್ವೀಕರಿಸಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುವಾರ್ ಭೂಮರೆಡ್ಡಿ, ಸಂತ್ರಸ್ತ ಕುಟುಂಬದ ಜತೆಗೆ ಪೊಲೀಸ್ ಇಲಾಖೆ ಇದ್ದು, ಆರೋಪಿಗೆ ಕಠಿಣ ಶಿಕ್ಷೆ ದೊರೆಯುವಂತೆ ಕ್ರಮ ವಹಿಸುವ ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ವಾಜಿ ಅಧ್ಯಕ್ಷ ಸುರೇಶ್ ಮೈರ, ವಾಜಿ ಉಪಾಧ್ಯಕ್ಷ ವಸಂತ ಸಾಲಿಯಾನ್, ಪ್ರಮುಖರಾದ ಮಂಜುನಾಥ ಸಾಲ್ಯಾನ್, ಗುರುಪ್ರಸಾದ್, ತಿಲಕ್, ಸುಜಾ ಡಿಸೋಜ, ಗೌತಮ್ ಗೌಡ ಸಹಿತ ಉಳಿ, ಕಕ್ಯಪದವು ಗ್ರಾಮಸ್ಥರು, ಲಾವಣ್ಯ ಕುಟುಂಬಸ್ಥರು, ಸಂಬಂಧಿಕರು, ಬಂಟ್ವಾಳ ಪೊಲೀಸ್ ನಿರೀಕ್ಷಕ ಅನಂತಪದ್ಮನಾಭ, ಉಪನಿರೀಕ್ಷಕರಾದ ಸಂದೀಪ್ ಶೆಟ್ಟಿ, ದುರ್ಗಪ್ಪ ಸಹಿತ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

ಬಸ್ ನಿಲ್ದಾಣದಲ್ಲಿ ಭದ್ರತೆ ಹೆಚ್ಚಳ

ಕೆಎಸ್ಸಾರ್ಟಿಸಿ ಬಸ್‌ನಿಲ್ದಾಣದಲ್ಲಿ ಪೊಲೀಸ್ ಭದ್ರತೆ ಸಹಿತ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿ ಎದ್ದಿರುವ ಆತಂಕಗಳ ಕುರಿತು ವಿಚಾರ ಪ್ರಸ್ತಾಪಿಸಿದ ಗ್ರಾಮಸ್ಥರಿಗೆ ಕ್ರಮಕೈಗೊಳ್ಳುವ ಕುರಿತು ಪೊಲೀಸರು ಭರವಸೆ ನೀಡಿದರು. ಈ ಕುರಿತು ವಿವಿಧ ಗ್ರಾಮಸಭೆಗಳಲ್ಲಿ ಮಾಹಿತಿ ನೀಡುವ ಕಾರ್ಯವಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.