ಕುಂದಾಪುರ- ತೀರ್ಥಹಳ್ಳಿ- ಶಿವಮೊಗ್ಗ ರಾಜ್ಯ ಹೆದ್ದಾರಿ
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಕುಂದಾಪುರ-ತೀರ್ಥಹಳ್ಳಿ ರಾಜ್ಯ ಹೆದ್ದಾರಿ 52ನ್ನು ಮೇಲ್ದರ್ಜೆಗೇರಿಸಬೇಕೆಂಬ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ರಾಜ್ಯ ಸರ್ಕಾರ ಪತ್ರ ಬರೆದಿದೆ.
ಈ ಯೋಜನೆ ಜಾರಿಯಾದಲ್ಲಿ ಕರಾವಳಿ ಮತ್ತು ಮಲೆನಾಡಿನ ನಡುವಿನ ಸಂಪರ್ಕ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಯಾಗಲಿದೆ. ಹೊಸಂಗಡಿ- ಸಿದ್ದಾಪುರ- ಕುಂದಾಪುರ ರಸ್ತೆಯು 46.40 ಕಿ.ಮೀ.ನಿಂದ 88 ಕಿ.ಮೀ. ವರೆಗಿನ ಹಂತ ಹೊಂದಿದ್ದು, ರಸ್ತೆಯ ಒಟ್ಟು ಉದ್ದ 93.57 ಕಿ.ಮೀ. ಆಗಿದೆ. ಇತರ ರಾಷ್ಟ್ರೀಯ ಹೆದ್ದಾರಿಗಳ ಹಾದು ಹೋಗುವಿಕೆ ಹೊರತುಪಡಿಸಿ 87.97 ಕಿ. ಮೀ. ಉದ್ದದ ರಸ್ತೆ ಅಭಿವೃದ್ಧಿಗೊಳ್ಳಲಿದೆ.
ಆಗುಂಬೆ ಘಾಟಿ ರಸ್ತೆ ಬಂದ್ ಆದಾಗ ಕುಂದಾಪುರದಿಂದ ತೀರ್ಥಹಳ್ಳಿ ಮೂಲಕ ಬೆಂಗಳೂರಿಗೆ ಹೋಗಲು ಇದು ಬೈಪಾಸ್ ರಸ್ತೆಯಾಗಿ ಉಪಯೋಗವಾಗಲಿದೆ. ಬಸ್ರೂರು, ಸಿದ್ದಾಪುರ ಮತ್ತು ಹೊಸಂಗಡಿ ಮೂಲಕ ಉಡುಪಿ, ಕೊಲ್ಲೂರು ಮೊದಲಾದ ಐತಿಹಾಸಿಕ, ಧಾರ್ಮಿಕ ಮತ್ತು ಪ್ರವಾಸಿ ತಾಣಗಳನ್ನು ಹಾಗೂ ಹೊಸಂಗಡಿಯಲ್ಲಿರುವ ವಾರಾಹಿ ಜಲ ವಿದ್ಯುತ್ ಯೋಜನೆಗೆ ಉತ್ತಮ ಸಂಪರ್ಕ ಕಲ್ಪಿಸುತ್ತದೆ ಎಂದು ಸರ್ಕಾರ ಕೇಂದ್ರಕ್ಕೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದೆ.
ಕುಂದಾಪುರ-ತೀರ್ಥಹಳ್ಳಿ ರಾಜ್ಯ ಹೆದ್ದಾರಿ ಕಳೆದ 4 ದಶಕಗಳಿಂದ ಅಭಿವೃದ್ಧಿ ಕಾಣದೆ ಸೊರಗಿದೆ. ಜಿಲ್ಲೆಯ ಎಲ್ಲ ಹೆದ್ದಾರಿಗಳು ರಾಷ್ಟ್ರೀಯ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದರೂ ಈ ರಾಜ್ಯ ಹೆದ್ದಾರಿ ನನೆಗುದಿಗೆ ಬಿದ್ದಿತ್ತು. ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರಿಗೆ ಮನವಿ ಸಲ್ಲಿಸಿದ್ದು ಅವರು ರಾಜ್ಯ ಸರ್ಕಾರದ ಗಮನ ಸೆಳೆದ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಪತ್ರ ಬರೆದಿದೆ. ದಶಕದ ಹೋರಾಟಕ್ಕೆ ನ್ಯಾಯ ದೊರಕಿದೆ.
ಕುಂದಾಪುರ-ತೀರ್ಥಹಳ್ಳಿ ರಾಜ್ಯ ಹೆದ್ದಾರಿ 52ನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸುವ ಕುರಿತು ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದ್ದು, 10 ವರ್ಷಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಸಂದ ಜಯವಿದು. ಕೇಂದ್ರ ಸರ್ಕಾರ ಆದಷ್ಟು ಶೀಘ್ರ ಬೇಡಿಕೆ ಈಡೇರಿಸಬೇಕು.